ಮಲ್ಲಿಕಾರ್ಜುನ ಖರ್ಗೆ ಆರ್‌ಎಸ್‌ಎಸ್‌ಗೆ ಕ್ಷಮೆ ಯಾಚಿಸಲಿ

KannadaprabhaNewsNetwork | Published : Nov 20, 2024 12:34 AM

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಮಾತನಾಡಿದರು.

ಆರ್‌ಎಸ್‌ಎಸ್ ರದ್ದು ಮಾಡಲು ಇಂದಿರಾಗಾಂಧಿ, ನೆಹರು‌ ಕೈಯಲ್ಲೇ ಆಗಿಲ್ಲ: ಕೆ.ಎಸ್.ಈಶ್ವರಪ್ಪ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆರ್‌ಎಸ್‌ಎಸ್ ಸಂಸ್ಥೆಯನ್ನು ರದ್ದು ಮಾಡಲು ಸ್ವರ್ಗದಲ್ಲಿರುವ ಇಂದಿರಾಗಾಂಧಿ, ನೆಹರು‌ ಕೈಯಲ್ಲೇ ಆಗಿಲ್ಲ.ಇನ್ನೂ ನೀವು ಯಾವ ಲೆಕ್ಕ ಎಂದು ಆರ್‌ಎಸ್‌ಎಸ್‌ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಆರ್‌ಎಸ್‌ಎಸ್ ಸಂಸ್ಥೆ ಕೊಲ್ಲಿ ಅಂತೀರಾ? ಆರ್‌ಎಸ್‌ಎಸ್‌ ಇಲ್ಲ ಅಂದಿದ್ದರೆ ಏನು ಆಗ್ತಿತ್ತು. ಆರ್‌ಎಸ್‌ಎಸ್‌ ಕೊಲ್ಲಿ ಅಂತಾ ನಿಮ್ಮ ಬಾಯಲ್ಲಿ ಬಂದಿದ್ದು ಬಹಳ ಆಶ್ಚರ್ಯ. ಇಂದಿರಾಗಾಂಧಿ, ನೆಹರು ಆರ್‌ಎಸ್‌ಎಸ್‌ ಬ್ಯಾನ್ ಮಾಡಲು ಯತ್ನಿಸಿದರು ಆದರೆ, ಇಂದು ಆರ್‌ಎಸ್‌ಎಸ್‌ ಸ್ವಯಂ ಸೇವಕ ಈ ದೇಶದ ಪ್ರಧಾನಮಂತ್ರಿ ಆಗಿದ್ದಾರೆ ಎಂದರು.

ಖರ್ಗೆಯವರಿಗೆ ಅಧಿಕಾರದ ದಾಹ ಜಾಸ್ತಿ ಇದೆ. ಕೂಡಲೇ ಅವರು ಆರ್‌ಎಸ್ಎಸ್ ಗೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸದರು.

ವಕ್ಪ್ ಆಸ್ತಿ ಬಗ್ಗೆ ‌ಕಾಂಗ್ರೆಸ್ ಖಂಡನೆ ಮಾಡಲಿಲ್ಲ. ಅಂಬೇಡ್ಕರ್ ಬಗ್ಗೆ ಮಾತನಾಡಿದ್ದಕ್ಕೆ ಖಂಡನೆ ಮಾಡಲಿಲ್ಲ. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ‌ಕೊಡ್ತೀವಿ ಅಂದ್ರೂ. ಅದರ ಬಗ್ಗೆ ಕಾಂಗ್ರೆಸ್ ಖಂಡನೆ ಮಾಡಲಿಲ್ಲ. ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಬಗ್ಗೆ ಮಾತನಾಡಲಿಲ್ಲ. ನಾನು ಕೊಲ್ಲುವ ಪರಿಸ್ಥಿತಿ ಬರುತ್ತದೆ ಅಂದೆ ಅದಕ್ಕೆ ನನ್ನ ಮೇಲೆ ಪೊಲೀಸರು ಕೇಸ್ ಹಾಕಿದ್ರು, ಖರ್ಗೆ ಅವರು ನೇರವಾಗಿ ಆರ್‌ಎಸ್ಎಸ್ ಕೊಲ್ಲಿ ಅಂದಿದ್ದಾರೆ. ಪೊಲೀಸರು ಖರ್ಗೆಯವರ ಮೇಲೆ ಕೇಸ್ ಹಾಕಬೇಕಲ್ವಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಮಠ ಮಂದಿರ ದೇವಸ್ಥಾನದ ಆಸ್ತಿ ವಕ್ಪ್ ಆಸ್ತಿ ಆಗಲು ಕಾಂಗ್ರೆಸ್ ಒಪ್ಪಿಗೆ ಇದೆಯಾ? ಈಗಾಗಿಯೇ ಕಾಂಗ್ರೆಸ್ ನಿರ್ನಾಮ ಆಗುತ್ತಿದೆ. ಜಾತಿ ಜನಗಣತಿ ಜಾರಿಗೆ ತರುತ್ತೇನೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಯಾಕೆ‌ ಇದುವರೆಗೆ ಜಾರಿಗೆ ತರಲಿಲ್ಲ. ಹಿಂದುಳಿದವರು, ದಲಿತರನ್ನು ಚುನಾವಣೆ ‌ಟೂಲ್ ಕಿಟ್ ಮಾಡಿ ಕೊಂಡಿದ್ದೀರಾ, ಸಿಎಂ ಸ್ಥಾನ ಹೋಗಿ ಬಿಡುತ್ತದೆ ಅಂತಾ ಜಾತಿ ಜನಗಣತಿ ಮಂಡಿಸಲು ಹಿಂದೇಟು ಹಾಕ್ತಿದ್ದೀರಾ ಎಂದು ಕುಟುಕಿದರು.

ಸಿದ್ದರಾಮಯ್ಯ ಅಹಿಂದ ಸಮಾವೇಶ ಮಾಡಲಿಕ್ಕೆ ಹೊರಟ್ಟಿದ್ದಾರೆ. ಇದಕ್ಕು ಮೊದಲು ಜಾತಿ ಜನಗಣತಿ ಜಾರಿಗೆ ತಂದು ಅಮೇಲೆ ಅಹಿಂದ ಸಮಾವೇಶ ಮಾಡಿ. ಅಧಿಕಾರಕ್ಕೆ ಹಿಂದುಳಿದವರು, ದಲಿತರ ಬಳಸಿಕೊಳ್ಳುತ್ತೀರಾ? ನೀವು ಏನಾದರೂ ಮುಖ್ಯಮಂತ್ರಿ ಸ್ಥಾನ ಕಳೆದು ಕೊಂಡು ಜೈಲಿಗೆ ಹೋದರೆ ಆಗ ನಾನು ಜಾತಿ ಜನಗಣತಿ ಜಾರಿಗೆ ತರಬೇಕಿತ್ತು ಅಂತ ಅಂದುಕೊಳ್ಳುತ್ತೀರಾ. ಶೇ.40 ಆರೋಪ ಸುಳ್ಳು ಅಂತಾ ಲೋಕಾಯುಕ್ತ ವರದಿ ಕೊಟ್ಟಿದೆ. ಲೋಕಾಯುಕ್ತರು ಹೇಳಿದ ಮೇಲೂ ಸಿಎಂ, ಡಿಸಿಎಂ ಕ್ಷಮೆ ಕೇಳಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Share this article