- ಉಡುಪಿಯ ಹೆಬ್ರಿ ಬಳಿ ಎನ್‌ಕೌಂಟರ್ । ಪೊಲೀಸರಿಗೆ ದೊಡ್ಡ ಯಶಸ್ಸು- ಆಹಾರ ಸಾಮಗ್ರಿ ಒಯ್ಯಲು ಬಂದಾಗ ವಿಕ್ರಂ ಗೌಡ ಗುಂಡೇಟಿಗೆ ಬಲಿ- ಮತ್ತಿಬ್ಬರು ನಕ್ಸಲರಿಗೆ ಗಾಯ: ಪರಾರಿ । ನಾಪತ್ತೆಯಾದವರಿಗೆ ಶೋಧ
--ಏನಾಯಿತು?ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂಗೌಡ (46) ನಕ್ಸಲ್ ನಿಗ್ರಹ ಪಡೆಯ ಗುಂಡೇಟಿಗೆ ಬಲಿಎಲ್ಲಿ?ಹೆಬ್ರಿ ತಾಲೂಕಿನ ಕಬ್ಬಿನಾಲೆಯಿಂದ 10 ಕಿ.ಮೀ. ದೂರದಲ್ಲಿರುವ ಪೀತಾಬೈಲು ಕಾಡಂಚಿನ ಮನೆಯ ಆವರಣದಲ್ಲಿಯಾವಾಗ?ಸೋಮವಾರ ರಾತ್ರಿ 9ರಿಂದ 11 ಗಂಟೆಯ ನಡುವೆ.
---ಕಾರ್ಯಾಚರಣೆ ನಡೆದಿದ್ದು ಹೇಗೆ?
- ಕಾಡಂಚಿನಲ್ಲಿರುವ ಮಲೆಕುಡಿಯರ ಮನೆಯಿಂದ ಅಕ್ಕಿ, ಬೇಳೆ ಪಡೆಯಲು ವಿಕ್ರಂಗೌಡ ತಂಡ ಬಂದು ಹೋಗುತ್ತಿತ್ತು- ಕಾಡಿನಿಂದ ಕೊರಕಲು ಕಾಲುಹಾದಿಯಲ್ಲಿ ಇಳಿದು ಮನೆಗೆ ತೆರಳಿ ವಾರದ ಹಿಂದೆಯೂ ಸಾಮಗ್ರಿ ಸಂಗ್ರಹಿಸಿ ಹೋಗಿತ್ತು- ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಮನೆಯವರನ್ನು ತೆರವುಗೊಳಿಸಿ ವಿಕ್ರಂ ತಂಡಕ್ಕಾಗಿ ಕಾದು ಕುಳಿತಿದ್ದರು- ಸೋಮವಾರ ರಾತ್ರಿ ವಿಕ್ರಂಗೌಡ ತಂಡ ಬರುತ್ತಿದ್ದಂತೆ ಗುಂಡಿನ ದಾಳಿ ನಡೆಯಿತು. ನಕ್ಸಲರು ಪ್ರತಿ ದಾಳಿ ತೋರಿದರು- ಈ ವೇಳೆ ಎದೆಗೆ ಗುಂಡು ತಗುಲಿದ್ದರಿಂದ ವಿಕ್ರಂ ಗೌಡ ಹತನಾದ. ಆತನ ಜತೆಗಿದ್ದ 3-4 ಮಂದಿ ಪೈಕಿ ಇಬ್ಬರಿಗೆ ಗಾಯ- ಅವರು ಕೂಡಲೇ ಪರಾರಿ. ಸಮೀಪದ ಸ್ಥಳದಲ್ಲೇ ಅಡಗಿರಬಹುದು ಎಂದು ನಕ್ಸಲ್ ನಿಗ್ರಹ ಪಡೆಯಿಂದ ತೀವ್ರ ಶೋಧ---
ಯಾರು ಈ ವಿಕ್ರಂಗೌಡ?- ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಪೀತಾಬೈಲಿನ ನಾಡ್ಪಾಲು ಗ್ರಾಮದ ಕೂಡ್ಲುವಿನವನು ವಿಕ್ರಂ- ಈತನಿಗೆ 46 ವರ್ಷ. ಅವಿವಾಹಿತ. 4ನೇ ತರಗತಿವರೆಗೆ ಓದಿದ್ದಾನೆ. ಪ್ರಮುಖ ನಕ್ಸಲ್ ನಾಯಕ- 20 ವರ್ಷ ಹಿಂದೆ ತಂದೆ, ತಾಯಿ, ತಂಗಿ ಜತೆ ಕೂಲಿ ಕೆಲಸ ಮಾಡಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ- ಬಡತನ ಹಿನ್ನೆಲೆಯಲ್ಲಿ ತಂದೆ ಮುಂಬೈಗೆ ಕಳುಹಿಸಿದ್ದರು. ಅಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿದ್ದ- 20ರ ಹರೆಯದಲ್ಲಿ ಊರಿಗೆ ಮರಳಿದ. 2002-03ರಲ್ಲಿ ಕುದುರೆಮುಖ ಹೋರಾಟದಿಂದ ಪ್ರಭಾವಿತನಾದ- ನಕ್ಸಲ್ ನಾಯಕನಾಗಿದ್ದ ಸಾಕೇತ್ ರಾಜನ್‌ನನ್ನು ಭೇಟಿಯಾದ ಬಳಿಕ ನಕ್ಸಲ್ ಸಂಘಟನೆಗೆ ಸೇರಿದ್ದ--ರಾಜ್ಯದಲ್ಲಿ ಹತನಾದ 15ನೇ ನಕ್ಸಲ್ ವಿಕ್ರಂ
ಮಲೆನಾಡಿನಲ್ಲಿ ನಕ್ಸಲೀಯರ ಹೋರಾಟ ಆರಂಭವಾಗಿ 25 ವರ್ಷಗಳಾಗಿವೆ. ಈ ಅವಧಿಯಲ್ಲಿ ಈವರೆಗೆ 15 ಮಂದಿ ಸಹಚರರನ್ನು ನಕ್ಸಲೀಯರು ಕಳೆದುಕೊಂಡಿದ್ದಾರೆ. ಅದರಲ್ಲಿ 15ನೆಯವನೇ ವಿಕ್ರಂ ಗೌಡ.--ಮುಂಡಗಾರು ಲತಾ ಮುಂದಿನ ಟಾರ್ಗೆಟ್?ವಿಕ್ರಂಗೌಡ ಹತನಾಗಿರುವ ಹಿನ್ನೆಲೆಯಲ್ಲಿ ನಕ್ಸಲ್ ಸಂಘಟನೆಯ ನೇತೃತ್ವವನ್ನು ಮುಂಡಗಾರು ಲತಾ ವಹಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆಯ ಮುಂದಿನ ಟಾರ್ಗೆಟ್ ಮುಂಡಗಾರು ಲತಾ ಎನ್ನಲಾಗುತ್ತಿದೆ.
---12 ವರ್ಷಗಳ ಬಳಿಕ ಮೊದಲ ನಕ್ಸಲ್ ಬಲಿ
ಮಂಗಳೂರು: 2012ರ ಸೆ.2ರಂದು ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯ ಸಮೀಪದ ಪಳ್ಳಿಗದ್ದೆ ಎಂಬಲ್ಲಿ ನಕ್ಸಲ್ ನಿಗ್ರಹದಳ (ಎಎನ್‌ಎಫ್) ಹಾಗೂ ನಕ್ಸಲರ ನಡುವೆ ಮುಖಾಮುಖಿ ನಡೆದಿತ್ತು. ಆಗ ನಡೆದ ಎನ್‌ಕೌಂಟರ್‌ನಲ್ಲಿ ರಾಯಚೂರಿನ ಮುದ್ದುಗೋಡೆ ನಿವಾಸಿ ಯಲ್ಲಪ್ಪ (35) ಎಂಬಾತ ಮೃತಪಟ್ಟಿದ್ದ. ತಂಡದಲ್ಲಿದ್ದ ಉಳಿದವರು ಪರಾರಿಯಾಗಿದ್ದರು. ಈ ತಂಡದಲ್ಲಿ ವಿಕ್ರಂ ಗೌಡ ಇದ್ದ.--
ರಾಜ್ಯದಲ್ಲಿ ಇನ್ನು 5 ನಕ್ಸಲರು ಇದ್ದಾರೆಎನ್ಕೌಂಟರ್ನಲ್ಲಿ ಬಲಿಯಾದ ವಿಕ್ರಂ ಗೌಡ ‘ಕಬಿನಿ-2’ ಎಂಬ ನಕ್ಸಲ್ ದಳವನ್ನು ಮುನ್ನಡೆಸುತ್ತಿದ್ದ. ನಕ್ಸಲರ ಓಡಾಟ ಬಗ್ಗೆ 10 ದಿನಗಳಿಂದ ಖಚಿತ ಮಾಹಿತಿ ಇತ್ತು. ರಾಜ್ಯದಲ್ಲಿ ಇನ್ನೂ 4-5 ಸಕ್ರಿಯ ನಕ್ಸಲ್‌ಗಳಿದ್ದಾರೆ. ಈ ಎನ್‌ಕೌಂಟರ್ ನಂತರ ಅವರ ಪ್ರತಿಕ್ರಿಯೆ ಏನಿರುತ್ತದೆ ಕಾದು ನೋಡಬೇಕಾಗಿದೆ.- ರೂಪಾ ಮೌದ್ಗಿಲ್, ಆಂತರಿಕ ಭದ್ರತಾ ವಿಭಾಗದ ಐಜಿಪಿ
--ರಾಮ್ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ
ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಯಾನೆ ಶ್ರೀಕಾಂತ್ (46) ನನ್ನು ಸೋಮವಾರ ರಾತ್ರಿ ಪೊಲೀಸರು ಉಡುಪಿ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆಸಿ ಗುಂಡಿಕ್ಕಿ ಕೊಂದಿದ್ದಾರೆ. 61 ಪ್ರಕರಣಗಳಲ್ಲಿ ಬೇಕಾಗಿದ್ದ ಈತನ ತಲೆಗೆ ಕರ್ನಾಟಕ ಸರ್ಕಾರ 5 ಲಕ್ಷ ರು. ಬಹುಮಾನ ಘೋಷಿಸಿತ್ತು.ಸೋಮವಾರ ರಾತ್ರಿ (9ರಿಂದ11 ಗಂಟೆ ನಡುವೆ) ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆ ಪೇಟೆಯಿಂದ ಸುಮಾರು 10 ಕಿ.ಮೀ. ದೂರದ, ಉಡುಪಿ- ಚಿಕ್ಕಮಗಳೂರು ಜಿಲ್ಲೆಗಳ ಗಡಿ, ಪೀತಾಬೈಲು ದಟ್ಟ ಕಾಡಿನಂಚಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಎತ್ತರದ ಕಾಡಿನಿಂದ ಕೊರಕಲು ಕಾಲುಹಾದಿಯಲ್ಲಿ ಇಳಿದು ಇಲ್ಲಿನ ಮನೆಯೊಂದಕ್ಕೆ ಅಕ್ಕಿ, ಬೇಳೆ ಪಡೆಯಲು ಈ ವಿಕ್ರಂ ಗೌಡ ಮತ್ತವನ ತಂಡ ಬರುತ್ತಿತ್ತು. ವಾರದ ಹಿಂದೆಯೂ ಪೀತಾಬೈಲು ಕಾಡಿನಿಂದ ಹೊರಗೆ ಬಂದು ಇಲ್ಲಿನ ಮಲೆಕುಡಿಯರ ಮನೆಯೊಂದರಿಂದ ಅಕ್ಕಿ, ಬೇಳೆ ಸಂಗ್ರಹಿಸಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್)ಯ ಯೋಧರು, ಆ ಮನೆಯವರನ್ನು ಮೊದಲೇ ತೆರವುಗೊಳಿಸಿ, ಆ ಪ್ರದೇಶದಲ್ಲಿ ಕಾದು ಕುಳಿತಿದ್ದರು.ವಿಕ್ರಂಗೌಡ ತಂಡ ಮನೆಯ ಅಂಗಳಕ್ಕೆ ಬರುತ್ತಿದ್ದಂತೆ ಯೋಧರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ನಕ್ಸಲ್ ತಂಡ ಕೆಲಕಾಲ ಪ್ರತಿದಾಳಿ ಮೂಲಕ ಪ್ರತಿರೋಧ ಒಡ್ಡಿತು. ಈ ವೇಳೆ, ವಿಕ್ರಂ ಗೌಡನ ಎದೆಗೆ ಮೂರು ಗುಂಡುಗಳು ಬಿದ್ದಿದ್ದು, ಆತ ಸ್ಥಳದಲ್ಲಿಯೇ ಕೊನೆಯುಸಿರೆಳೆದ. ಇದರಿಂದ ಗಾಬರಿಗೊಂಡ ತಂಡದ ಸದಸ್ಯರು ಅರಣ್ಯದಲ್ಲಿ ಕತ್ತಲಲ್ಲಿಯೇ ಪರಾರಿಯಾಗಿದ್ದಾರೆ. ಆತನೊಂದಿಗೆ 3-4 ಮಂದಿ ಇದ್ದು, ಇನ್ನೂ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಎಎನ್‌ಎಫ್ ತಂಡ ಮಂಗಳವಾರ ಇಡೀ ದಿನ ಸುತ್ತಮುತ್ತಲಿನ ಕಾಡಿನಲ್ಲಿ ಕೂಂಬಿಂಗ್ ನಡೆಸಿತು. ಆದರೆ, ತಪ್ಪಿಸಿಕೊಂಡ ನಕ್ಸಲಿಯರ ಪತ್ತೆಯಾಗಿಲ್ಲ. ಈ ಮಧ್ಯೆ, ರಾಜ್ಯದಲ್ಲಿ ಇನ್ನೂ 4-5 ಸಕ್ರಿಯ ನಕ್ಸಲ್‌ಗಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ ಮೌದ್ಗಿಲ್ ಮತ್ತು ಡಿಐಜಿ ಪ್ರಣಬ್ ಮೋಹನ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರು ನಡೆಸಿ, ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ದು, ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ವಿಕ್ರಂ ಗೌಡನ ಮನೆಯವರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.10 ದಿನಗಳಿಂದ ನಿಗಾ ಇಡಲಾಗಿತ್ತು:ಇದೀಗ ಕೇಂದ್ರ ಸರ್ಕಾರ ಪಶ್ಚಿಮಘಟ್ಟವನ್ನು ಉಳಿಸುವುದಕ್ಕಾಗಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಹೊರಟಿದ್ದು, ಮತ್ತೆ ಕಾಡಂಚಿನ ಜನರನ್ನು ಒಕ್ಕೆಲೆಬ್ಬಿಸುತ್ತಾರೆ ಎಂಬ ಸುದ್ದಿ ಹರಡಿದ್ದರಿಂದ ಕೇರಳದಿಂದ ರಾಜ್ಯದತ್ತ ಸಶಸ್ತ್ರಧಾರಿ ನಕ್ಸಲರ ತಂಡ ಮುಖ ಮಾಡಿತ್ತು. ಸಂತ್ರಸ್ತ ಜನರ ಸಭೆ ನಡೆಸಲು ಸಿದ್ಧತೆ ಆರಂಭಿಸಿತ್ತು.ಕಳೆದ ಎರಡು ತಿಂಗಳಿಂದ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಭಾಗದಲ್ಲಿ ಓಡಾಟ ಚುರುಕುಗೊಳಿಸಿತ್ತು. ಈ ತಂಡದಲ್ಲಿ ಮುಂಡಗಾರು ಲತಾ, ವಿಕ್ರಂ ಗೌಡ, ವನಜಾಕ್ಷಿ, ಜಯಣ್ಣ ಎಂಬುವರು ಇದ್ದರು ಎನ್ನಲಾಗಿದೆ. ನ.13ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಡೇಗುಂದಿ ಗ್ರಾಮದಲ್ಲಿರುವ ಒಂಟಿಮನೆ ಸುಬ್ಬಗೌಡರ ನಿವಾಸಕ್ಕೆ ಮುಂಡಗಾರು ಲತಾಳ ಟೀಂ ಬಂದಿದ್ದು ವರದಿಯಾಗಿತ್ತು. ಅಲ್ಲದೆ, ವಾರದ ಹಿಂದೆ ಪೀತಬೈಲು ಕಾಡಿನಿಂದ ಹೊರಗೆ ಬಂದು ಇಲ್ಲಿನ ಮಲೆಕುಡಿಯರ ಮನೆಯೊಂದರಿಂದ ಅಕ್ಕಿ, ಬೇಳೆ ಸಂಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಈ ತಂಡದ ಮೇಲೆ 10 ದಿನಗಳಿಂದ ನಿಗಾ ಇಟ್ಟಿತ್ತು.