ಮೋದಿ ಕನ್ನಡಿಗರಿಗೇನು ಕೊಟ್ಟಿದ್ದಾರೆಂದು ಹೇಳಲಿ: ಖರ್ಗೆ

KannadaprabhaNewsNetwork |  
Published : Apr 12, 2024, 01:04 AM IST
ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯ ಎನ್ ವಿ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಬಹಿರಂಗ ಸಮಾವೇಶದ ಸಿದ್ದತೆಯನ್ನು ವೀಕ್ಷಿಸಿದರು. | Kannada Prabha

ಸಾರಾಂಶ

ಮೋದಿ ಈ ದೇಶದ ಪ್ರಧಾನಿ ಎಲ್ಲಿಗೆ ಬೇಕಾದರೂ ಬಂದು ಪ್ರಚಾರ ಮಾಡಲಿ. ಆದರೆ, ಅವರು ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಹೇಳಿ ಹೋಗಲಿ. ಆಗ ನಮಗೂ ಸ್ವಲ್ಪ ಸಮಾಧಾನ ಆಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಲ್ಲಿ ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಕುಂಠಿತವಾಗಿರುವುದಕ್ಕೆ‌ ಜನರ ಆಕ್ರೋಶ ಹೆಚ್ಚಾಗಿದೆ. ಮೋದಿ ಈ ದೇಶದ ಪ್ರಧಾನಿ ಎಲ್ಲಿಗೆ ಬೇಕಾದರೂ ಬಂದು ಪ್ರಚಾರ ಮಾಡಲಿ. ಆದರೆ, ಅವರು ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಹೇಳಿ ಹೋಗಲಿ. ಆಗ ನಮಗೂ ಸ್ವಲ್ಪ ಸಮಾಧಾನ ಆಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿಯ ಎನ್‌ವಿ ವೈದಾನದಲ್ಲಿ ಶುಕ್ರವಾರ ನಡೆಯಲಿರುವ ಕಾಂಗ್ರೆಸ್‌ ಬಹಿರಂಗ ಸಮಾವೇಶದ ಪೂರ್ವ ತಯಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಪ್ರಧಾನಿ ಪ್ರವಾಸ ಕೈಗೊಳ್ಳುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿ ಅವರು ಸುಮ್ಮನೆ ಪ್ರವಾಸಿಗರ ತರ ರಾಜ್ಯಕ್ಕೆ‌ ಬರುವ ಬದಲು, ಇಲ್ಲಿ ಏನು ಕೊಟ್ಟಿದ್ದಾರೆ ಎಂದು ಹೇಳಲಿ. ಕೇಂದ್ರದಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಲಿ. ಸುಮ್ಮನೆ ಕೇಂದ್ರದ ಪುರಸ್ಕೃತ ಯೋಜನೆಗಳು ಎಂದು ಹೇಳಿ ಹಿಟ್ ಆ್ಯಂಡ್ ರನ್ ಮಾಡುವುದಲ್ಲ. ಪ್ರತಿಯೊಂದು ಯೋಜನೆಗಳಲ್ಲಿಯೂ ಶೇ.50-60ರಷ್ಟು ಪಾಲು ಕನ್ನಡಿಗರದ್ದೂ ಇದೆ. ಬರ ಹಾಗೂ ತೆರಿಗೆ ಪರಿಹಾರ ನೀಡುವಲ್ಲಿ ರಾಜ್ಯಕ್ಕೆ ಆಗುತ್ತಿರುವ ತಾರತಮ್ಯದ ಬಗ್ಗೆ ಹೇಳಲಿ. ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿದ್ದಾರೆ‌. ಇವರು ಬಂದು ಅದೇ ಹೇಳುತ್ತಾರೆ ಹೊಸದೇನಿದೆ.? ಕಳೆದ ಬಾರಿ 20 ಸಲ ಬಂದು ಹೋಗಿದ್ದರು ಏನು ಪ್ರಯೋಜನವಾಯಿತು ಜನ ನಂಬಿದರಾ? ಎಂದು ಪ್ರಶ್ನಿಸಿದರು.

ಕಲಬುರಗಿಯೇ ಮೋದಿಯ ಮೊದಲ ಟಾರ್ಗೆಟ್ ಎಂದ ಸಚಿವರು ಮೋದಿ ಮೊಟ್ಟಮೊದಲ ಚುನಾವಣೆ ಪ್ರಚಾರ ಮಾಡಿದ್ದೇ ಇಲ್ಲಿಂದ. ಅವರು ಪ್ರಧಾನಿಗಳು ಎಲ್ಲಿ ಬೇಕಾದರೂ ಬಂದು ಪ್ರಚಾರ ಮಾಡಲಿ. ಪ್ರಧಾನಿ ಇಲ್ಲಿಗೆ ಬರುತ್ತಿದ್ದಾರೆ ಎಂದರೆ ಇಲ್ಲಿನ ಜನರಿಗೆ ಅವರು ಏನು ಮಾಡಿದ್ದಾರೆ. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಕೇಳಬೇಕು ಎನ್ನುವುದು ಜನರ ಇಚ್ಛೆಯಾಗಿರುತ್ತದೆ‌. ಬರ ಪರಿಹಾರ ತಾರತಮ್ಯ ವಿಚಾರಕ್ಕೆ ಯಾಕೆ ಸುಳ್ಳು ಹೇಳಿಸುತ್ತಿದ್ದಾರೆ ಎನ್ನುವುದನ್ನು ಕೂಡಾ ಅವರು ಸ್ಪಷ್ಟಪಡಿಸಲಿ ಎಂದರು.

ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿರುವುದು ವಿಳಂಬ ಎಂದು ಹೇಳಿಕೆ ನೀಡಿರುವ ಬಿಜೆಪಿ ನಾಯಕರಿಗೆ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯಗಳು ತಮ್ಮ ಸಾಂವಿಧಾನಿಕ ಹಕ್ಕು ಪಡೆಯಲು ಸುಪ್ರಿಂ ಕೋರ್ಟ್‌ ಪದೇ ಪದೇ ಯಾಕೆ ಬರಬೇಕು ಎಂದು ಕೇಂದ್ರಕ್ಕೆ ಕೋರ್ಟ್ ಛೀಮಾರಿ ಹಾಕಿದೆ. ಇಷ್ಟು ಸಾಕಲ್ಲವೇ ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನಲು? ಉತ್ತರ ಕೊಡುವುದಾಗಿ ಎರಡು ವಾರ ಸಮಯ ತೆಗೆದುಕೊಂಡಿದ್ದಾರಲ್ಲ. ಈಗ ಅಮಿತ್ ಶಾ, ನಿರ್ಮಲ ಸೀತಾರಾಮನ್ ಹಾಗೂ ಅಶೋಕ ಏನು ಹೇಳುತ್ತಾರೆ? ವಿಪಕ್ಷ ನಾಯಕ ಅಶೋಕ ಅವರಿಗೆ ಮಾಹಿತಿ ಕೊರತೆ ಇದೆ. ಅವರ ಐಟಿ ಸೆಲ್‌ನವರು ಹೇಳಿದ್ದನ್ನು ಕೇಳಿಕೊಂಡು ಬಂದು ಮಾತನಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಪ್ರಧಾನಿ, ಗೃಹ ಸಚಿವ ಹಾಗೂ ಆರ್ಥ ಸಚಿವರನ್ನು ಭೇಟಿ ಮಾಡಿದ್ದಾರಲ್ಲ. ಬರ ವೀಕ್ಷಣೆಯ ತಂಡದ ವರದಿ ಇಲ್ಲದೇ ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡಿರುತ್ತಾರೆಯೇ? ಇದಕ್ಕೆ ಅಶೋಕ್ ಉತ್ತರಿಸಿಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ತೀವ್ರ ಬರವಿದೆ. ಎನ್‌ಡಿಆರ್‌ಎಫ್‌ನ ಉನ್ನತಮಟ್ಟದ ಸಭೆಯ ಕರೆಯಬೇಕಿದ್ದ ಶಾ ಅವರು ಇನ್ನೂ ಯಾಕೆ ಸಭೆ ಕರೆದಿಲ್ಲ. ತೆರಿಗೆ ಬಿಡುಗಡೆ ವಿಚಾರ ಸಂಬಂಧಿಸಿದಂತೆ ಬಹಿರಂಗ ಚರ್ಚೆಗೆ ಆಹ್ವಾನಿಸಿ ವೇದಿಕೆ ಸಿದ್ದಪಡಿಸಲಾಗಿತ್ತು. ಮೋದಿ ಸರ್ಕಾರದ ಮೇಲೆ ಅವರಿಗೆ ಅಷ್ಟು ನಂಬಿಕೆ ಇದ್ದರೆ ಕಂದಾಯ ಸಚಿವರೊಂದಿಗೆ ಚರ್ಚೆಗೆ ಬರದ ನಿರ್ಮಲಾ ಸೀತಾರಾಮನ್ ಅವರು ನೇರವಾಗಿ ಪ್ರೆಸ್ ಮೀಟ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದರು.

ಕಲಬುರಗಿ ಯಲ್ಲಿ ಕಳೆದ ಐದು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ಜನರು ಆಕ್ರೋಶಗೊಂಡಿದ್ದಾರೆ. ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಅವಧಿಯಲ್ಲಿ ಮಂಜೂರಾದ ಯೋಜನೆಗಳು ಅನುಷ್ಠಾನಗೊಳ್ಳದೇ ವಾಪಸ್ ಹೋಗಿವೆ. ಹಾಗಾಗಿ ಕಲಬುರಗಿಯನ್ನು ಪ್ರಗತಿ ಪಥದತ್ತ ಕೊಂಡೊಯ್ಯಲು ಜನರು ಮತ್ತೆ ಇಚ್ಛಿಸಿದ್ದಾರೆ ಎಂದರು.

ಇಂದು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರು ಬೆ.11 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಬಿಸಿಲಿನ ಕಾರಣದಿಂದ ಕಾರ್ಯಕರ್ತರಿಗೆ ತೊಂದರೆಯಾಗಬಾರದೆಂದು ನಾಮಪತ್ರ ಸಲ್ಲಿಸಿದ ನಂತರ ನೇರವಾಗಿ ಬಹಿರಂಗ ಸಮಾವೇಶಕ್ಕೆ ಬರಲಾಗುವುದು. ಈ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ಹಿರಿಯ ಸಚಿವರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ 40-50 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದರು.

PREV

Recommended Stories

ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ