ಶಾಸಕ ಹೆಬ್ಬಾರ್‌ ರಾಜೀನಾಮೆ ನೀಡಲಿ: ಶಾಂತಾರಾಮ ಸಿದ್ದಿ

KannadaprabhaNewsNetwork |  
Published : Jun 11, 2024, 01:38 AM IST
ಯಲ್ಲಾಪುರದಲ್ಲಿ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು ಪಕ್ಷದ ವಿರುದ್ಧ ಕೆಲಸ ಮಾಡಿದ ಶಿವರಾಮ ಹೆಬ್ಬಾರ್‌ ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಹಾಗೂ ಇತರ ಮುಖಂಡರು ಆಗ್ರಹಿಸಿದ್ದಾರೆ.

ಯಲ್ಲಾಪುರ: ನಮ್ಮ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಶಾಸಕ ಸ್ಥಾನಕ್ಕೆ ತಕ್ಷಣ ರಾಜಿನಾಮೆ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಬ್ಬಾರ್‌ ಅವರು ತಲಾಕ್ ಸಂಸ್ಕೃತಿ ಅನುಸರಿಸುತ್ತಿದ್ದಾರೆ. ಅವರು ಕಾಂಗ್ರೆಸಿನಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ. ಅವರಿಗೆ ಕಾಂಗ್ರೆಸ್‌ ಅಪ್ಪಿಕೊಳ್ಳಬೇಕಿದ್ದರೆ ಅಪ್ಪಿಕೊಳ್ಳಬಹುದು. ನಮ್ಮ ವಿರೋಧವಿಲ್ಲ. ಆದರೆ, ಇಂತಹ ರಾಜಕಾರಣ ಮಾಡಬಾರದು ಎಂದರು.

ಹೆಬ್ಬಾರ್ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ೨ ಬಾರಿ ಶಾಸಕರಾಗಿದ್ದಾರೆ. ಕ್ಯಾಬಿನೆಟ್ ದರ್ಜೆಯ ಸಚಿವರಾಗಿಯೂ ಅಧಿಕಾರ ಅನುಭವಿಸಿದ್ದಾರೆ. ಆದರೆ ಈಗ ಕಾಂಗ್ರೆಸಿಗೆ ವಾಪಸ್ ಹೋಗುವುದಿದ್ದರೆ ತಕ್ಷಣ ಹೋಗಲಿ. ಯಲ್ಲಾಪುರ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ನಾವೆಂದೂ ವ್ಯಕ್ತಿಯಾಧಾರಿತ ನಾಯಕತ್ವಕ್ಕೆ ಬೆಲೆ ನೀಡುವುದಿಲ್ಲ. ಸಂಘಟನಾತ್ಮಕ ಪಕ್ಷದ ಕಾರ್ಯಕರ್ತರ ಮೇಲೆ ನಮ್ಮ ಪಕ್ಷ ನಿಂತಿದೆ. ಇಂತಹ ಮೋಸದ ರಾಜಕಾರಣ ಮಾಡಬಾರದು ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಕಾರ್ಯಕರ್ತರ ಪ್ರಯತ್ನದಿಂದ ಕಾಗೇರಿ ಅವರಿಗೆ ರಾಜ್ಯದಲ್ಲಿ ಅತಿಹೆಚ್ಚಿನ ಮತಗಳ ಅಂತರದಿಂದ ಗೆಲುವಾಗಿದೆ. ಎಲ್ಲ ಕಾರ್ಯಕರ್ತರನ್ನು ಅಭಿನಂದಿಸುತ್ತೇವೆ ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ, ಬಿಜೆಪಿಯ ಶಾಸಕರಾಗಿ ಕಾಂಗ್ರೆಸ್ ಬೆಂಬಲಿಸಿದ್ದಕ್ಕೆ ತಮ್ಮ ಶಾಸಕ ಸ್ಥಾನಕ್ಕೆ ತಕ್ಷಣ ರಾಜಿನಾಮೆ ನೀಡಬೇಕು. ರಾಜಿನಾಮೆ ನೀಡದೇ ಇದ್ದ ಪಕ್ಷದಲ್ಲಿ ನಮ್ಮ ಪಕ್ಷದ ಉನ್ನತ ನಾಯಕರ ನಿರ್ದೇಶನದಂತೆ ಶಾಸಕರ ಮನೆಯ ಎದುರಿಗೆ ಧರಣಿ ಸತ್ಯಾಗ್ರಹ ನಡೆಸುತ್ತೇವೆ. ೯೬ ಬೂತ್‌ಗಳಲ್ಲಿ ೮೬ ಬೂತ್‌ನಲ್ಲಿ ಬಿಜೆಪಿಗೆ ಲೀಡ್ ಬಂದಿದೆ. ಪಕ್ಷದ ಕಾರ್ಯಕರ್ತರಿಗೆ, ಮತದಾರರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಅನಂತಕುಮಾರ ಹೆಗಡೆ ಬಿಜೆಪಿಯ ಸಂಸದರಾಗಿದ್ದರಲ್ಲವೇ? ಅವರ ಕುರಿತು ಏನು ಹೇಳುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ತಾಲೂಕಿನ ವ್ಯಾಪ್ತಿಗೆ ಸೇರಿದವರಲ್ಲ. ಜಿಲ್ಲೆಯ ನಾಯಕರು. ಅವರ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಪ್ರಮುಖರಾದ ಉಮೇಶ ಭಾಗ್ವತ, ವೆಂಕಟರಮಣ ಬೆಳ್ಳಿ, ನಟರಾಜ ಗೌಡರ್, ರಾಘವೇಂದ್ರ ಭಟ್ಟ, ಕೆ.ಟಿ. ಹೆಗಡೆ, ಗಣೇಶ ಹೆಗಡೆ, ಶ್ರೀನಿವಾಸ ಗಾಂವ್ಕರ, ಶ್ಯಾಮಿಲಿ ಪಾಟಣಕರ, ರವಿ ದೇವಾಡಿಗ, ಪ್ರಭು ಚುಂಚಖಂಡಿ, ನಾಗರಾಜ, ಅರ್ಜುನ ಬೆಂಗೇರಿ, ಬಜ್ಜು ಪಿಂಗಳೆ ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ