ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಕ್ಷೇತ್ರದ ಅಭಿವೃದ್ಧಿಗಾಗಿ ವಿರೋಧ ಪಕ್ಷದವರನ್ನೂ ವಿಶ್ವಾಸಕ್ಕೆ ಪಡೆದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕೆಲಸ ಮಾಡಿದರೆ ನಾವೂ ಸಹಕಾರ ನೀಡುತ್ತೇವೆ. ಇದನ್ನು ಬಿಟ್ಟು ದಬ್ಬಾಳಿಕೆ ನಡೆಸಿ ಕ್ಷೇತ್ರದಲ್ಲಿ ಶಾಂತಿ ಕದಡುವ ಕೆಲಸವನ್ನು ಸಹಿಸುವುದಿಲ್ಲ ಎಂದು ಮಾಜಿ ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.ಪಟ್ಟಣದ ಬಿಜೆಪಿ ಗೃಹ ಕಚೇರಿಯಲ್ಲಿ ಗುರುವಾರ ಅಪಹರಣಕ್ಕೊಳಗಾದ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ ಅಸುಂಡಿ ಹಾಗೂ ಮುಖಂಡರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಗರಾಜ ಅಪಹರಣಗೊಂಡ 5 ದಿನಗಳ ಕಾಲ ಕಾಂಗ್ರೆಸ್ ಸರ್ಕಾರ ಹಾಗೂ ಅಧಿಕಾರಿಗಳ ಮೇಲೆ ಒತ್ತಡ ಹಾಕಲು ಯಶಸ್ವಿಯಾದೆವು. ಶಾಸಕಾಂಗ, ಕಾರ್ಯಾಂಗ ಸರಿಯಾದ ಹಾದಿಯಲ್ಲಿ ನಡೆಯದಿದ್ದರೆ ನ್ಯಾಯಾಂಗ ಮಧ್ಯ ಪ್ರವೇಶಿಸುತ್ತದೆ. ಅಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂದ ಅವರು, ಶಾಸಕರ ಮೂಗಿನ ನೇರಕ್ಕೇ ಇಂತಹ ದುಷ್ಕೃತ್ಯ ನಡೆದಿದೆ. ಬಿಜೆಪಿಯ ನಿಷ್ಠಾವಂತ, ಪ್ರಾಮಾಣಿಕ ಸದಸ್ಯನನ್ನು ಅಪಹರಿಸಿ ಮಾನಸಿಕವಾಗಿ ಕುಗ್ಗಿಸಲಾಗಿದೆ. ಈ ಹಿಂದೆ ಇಂತಹ ದುಷ್ಕೃತ್ಯದಲ್ಲಿ ಭಾಗವಹಿಸಿದ ವ್ಯಕ್ತಿಗಳೇ ಅಪಹರಣ ಕೃತ್ಯ ಎಸೆಗಿದ್ದಾರೆಂದು ಆರೋಪಿಸಿದರು.
ಪಪಂ ಚುನಾವಣೆ ಮುಂದೂಡುವಂತೆ ಹಾಗೂ ಅಪಹರಣವಾದ ಸದಸ್ಯನನ್ನು ಹುಡುಕಿಕೊಡುವಂತೆ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಕಾಲಹರಣ ಮಾಡುವ ಕೆಲಸ ಮಾಡಿದರು. ಹೀಗಾಗಿ ನ್ಯಾಯಾಲಯದ ಮೊರೆ ಹೋಗುವ ಸಂದರ್ಭ ಬಂತು ಎಂದ ಅವರು, ಪಟ್ಟಣ ಪಂಚಾಯತಿಯಲ್ಲಿ ಸಂಸದರು ಸೇರಿ ಎಲ್ಲ ಬಿಜೆಪಿಯ ೧೦ ಸದಸ್ಯರು ಮತ ಚಲಾಯಿಸಲಿದ್ದಾರೆ. ದೈವಬಲ ಇದ್ದವರು ಗೆಲ್ಲುತ್ತಾರೆಂದು ಹೇಳಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ ಹಾಗೂ ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿ, ಅಪಹರಣ ಕುರಿತು ಎಸ್ಪಿ, ಸೇರಿ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ದಪ್ಪ ಚರ್ಮ ಹಾಗೂ ಕಿವಿ, ಕಣ್ಣು ಇಲ್ಲದ ಸರ್ಕಾರ ಇದಾಗಿದೆ. ಕಾಂಗ್ರೆಸ್ ನಾಯಕರ ದುರ್ಬುದ್ಧಿಯಿಂದ ಕ್ಷೇತ್ರದಲ್ಲಿನ ವಾತಾವರಣ ಕೆಡಿಸುವ ಕಾರ್ಯವಾಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮುಖಂಡರಾದ ಅಪ್ಪಣ್ಣ ಪಾಗಾದ, ನಿಜಲಿಂಗಯ್ಯ ಹಿರೇಮಠ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳೆಗಡ್ಡಿ, ಪಕ್ಷದ ಕಾರ್ಯಕರ್ತರು ಇರಿದ್ದರು.ವಿಚಲಿತರಾದಂತೆ ಕಂಡುಬಂದ ಸದಸ್ಯ:
ಅಪಹರಣಕ್ಕೊಳಗಾದ ಸದಸ್ಯ ನಾಗರಾಜ ಅಸುಂಡಿ ಮಾತನಾಡಿ, ನನ್ನನ್ನು ಅಪಹರಿಸಿದ್ದು ನಿಜ, ಈ ಕುರಿತು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದೇನೆ. ನನ್ನ ತಾಯಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣುತ್ತಿದೆ ಎಂದು ಮಾತ್ರ ಹೇಳಿ ಪತ್ರಕರ್ತರ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದೆ ಮೌನ ವಹಿಸಿದರು.