ಗ್ರಾಪಂ ಮೂಲಕ ಸಹಜ ಬೇಸಾಯ ಅನುಷ್ಠಾನವಾಗಲಿ

KannadaprabhaNewsNetwork |  
Published : Jun 03, 2024, 12:32 AM IST
ತಾಲೂಕಿನ ದುಗ್ಗಹಟ್ಟಿ ರಾಜೇಶ ಅವರ ತೋಟದಲ್ಲಿ, ಜೆ ಎಸ್ ಬಿ ಪ್ರತಿಷ್ಠಾನ  ಹಮ್ಮಿಕೊಂಡಿದ್ದ 3 ದಿನಗಳ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರದಲ್ಲಿ | Kannada Prabha

ಸಾರಾಂಶ

ಗ್ರಾಮ ಪಂಚಾಯತಿಗಳ ಮೂಲಕ ಸಹಜ ಬೇಸಾಯ ಅನುಷ್ಠಾನವಾಗಬೇಕು ಎಂದು ಸಹಜ ಕೃಷಿ ವಿಜ್ಞಾನಿ ಡಾ. ಮಂಜುನಾಥ ತಿಳಿಸಿದರು. ತಾಲೂಕಿನ ದುಗ್ಗಹಟ್ಟಿ ರಾಜೇಶ ಅವರ ತೋಟದಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ 3 ದಿನಗಳ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಯಳಂದೂರು

ಗ್ರಾಮ ಪಂಚಾಯತಿಗಳ ಮೂಲಕ ಸಹಜ ಬೇಸಾಯ ಅನುಷ್ಠಾನವಾಗಬೇಕು ಎಂದು ಸಹಜ ಕೃಷಿ ವಿಜ್ಞಾನಿ ಡಾ. ಮಂಜುನಾಥ ತಿಳಿಸಿದರು. ತಾಲೂಕಿನ ದುಗ್ಗಹಟ್ಟಿ ರಾಜೇಶ ಅವರ ತೋಟದಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ 3 ದಿನಗಳ ಸುಸ್ಥಿರ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಭಾರತ ಕೃಷಿ ಪ್ರಧಾನ ದೇಶವಾಗಿದೆ. ಅನಾದಿಕಾಲದಿಂದ ಮಾನವ ಮತ್ತು ಕೃಷಿಗೆ ಅನ್ಯೋನ್ಯ ಸಂಬಂಧವಿದೆ. ಪರಿಸರ ರಕ್ಷಣೆ ನಮ್ಮ ಹೊಣೆ, ಯಾವತ್ತೂ ಕೃಷಿ ನಮ್ಮನ್ನು ಕೈ ಬಿಟ್ಟಿಲ್ಲ ಮುಂದೆ ಸಹ ಬಿಡಿವುದಿಲ್ಲ ಆದರೆ ನಾವು ಕೃಷಿಯನ್ನು ಕಡೆಗಣಿಸುತ್ತಿರುವುದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.ಜೆಎಸ್‌ಬಿ ಪ್ರತಿಷ್ಠಾನದ ಎಸ್. ಶಶಿಕುಮಾರ ಮಾತನಾಡಿ, ಕೃಷಿ ಇಲ್ಲದಿದ್ದರೆ ಬದುಕು ಸಾಧ್ಯವಿಲ್ಲ. ಯುವಕರು ಕೃಷಿಗೆ ಒಲವು ತೋರಿಸಬೇಕು. ಇದರಿಂದ ಕೃಷಿಯಿಂದ ವಲಸೆ ಹೋಗುವುದನ್ನು ತಪ್ಪಿಸಬಹುದು. ಸ್ವಾವಲಂಬನೆ ಬದುಕು ಸಾಗಿಸುವುದಕ್ಕೆ ಉಪ ಬೆಳೆಗಳು, ಪರ್ಯಾಯ ಬೆಳೆಗಳ ಬಗ್ಗೆ ಗಮನ ಅಗತ್ಯವಾಗಿದೆ ಎಂದು ತಿಳಿಸಿದರು.ಕಾರ್ಯಾಗಾರದ ಫಲಿತಾಂಶ:

ಇಂದಿನ ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ, ಅನಾವೃಷ್ಟಿ, ತಾಪಮಾನ ಏರಿಕೆ, ಅಂತರ್ಜಲ ಕುಸಿತ ಇವುಗಳಿಂದ ಕೃಷಿ ಕ್ಷೇತ್ರದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿರುವುದರಿಂದ ಕೃಷಿ ಕ್ಷೇತ್ರವನ್ನು ಸುಸ್ಥಿರವಾಗಿಸಲು ಮತ್ತು ಹವಾಮಾನ ಬದಲಾವಣೆಯ ಸವಾಲು ಎದುರಿಸಲು ಹಾಗೂ ರೈತರ ಕೃಷಿ ಆದಾಯ ಹೆಚ್ಚಿಸಲು ವೈಜ್ಞಾನಿಕವಾಗಿ ಕೃಷಿ ಕ್ಷೇತ್ರವನ್ನು ವಿನ್ಯಾಸಗೊಳಿಸುವ ಅನಿವಾರ್ಯತೆಯ ಬಗ್ಗೆ 3 ದಿನಗಳ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.ಕೃಷಿ ಕ್ಷೇತ್ರವನ್ನು ಸ್ಥಳೀಯವಾಗಿ ತಿಳಿಯಲು ಮತ್ತು ಅಲ್ಲಿನ ವಾತಾವರಣಕ್ಕೆ ಅನುಗುಣವಾಗಿ ಕೃಷಿ ಅಥವಾ ತೋಟಗಾರಿಕೆ ಬೆಳೆಗಳನ್ನು ಆಯೋಜನೆ ಮಾಡಲು ಸ್ಥಳೀಯ ರೈತರೊಂದಿಗೆ ಗ್ರಾಮ ಸಭೆ ನೆಡೆಸುವುದು, ಸಭೆಯಲ್ಲಿ ಗ್ರಾಪಂ ಪಿಡಿಒ, ಇಒ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಗ್ರಾಮ, ತಾಲೂಕು, ಜಿಪಂ ಸದಸ್ಯರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಚರ್ಚಿಸಿ, ಅಲ್ಲಿನ ಸ್ಥಳೀಯ ರೈತರ ಜಮೀನಿನಲ್ಲಿ ಸಹಜ ಬೇಸಾಯ ತಾಕುಗಳನ್ನು ಸೃಷ್ಟಿಸಲು ಬೇಕಾದ ತಾಂತ್ರಿಕ ಮಾಹಿತಿ ಮತ್ತು ಅದರ ಅನುಷ್ಠಾನಕ್ಕೆ ಬೇಕಾಗುವ ಹಣಕಾಸಿನ ವಿವರವನ್ನು ಅಂತಿಮಪಡಿಸಿ, ಯೋಜನೆ ಅನುಷ್ಠಾನ ಮಾಡಲು ಗ್ರಾಪಂ ಸಭೆಯಲ್ಲಿ ತೀರ್ಮಾನ ಮಾಡುವುದು ಎಂದರು.

ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ ಹಾಗೂ ಸಂಬಂಧಿಸಿದ ಇತರೆ ಎಲ್ಲಾ ಸರ್ಕಾರಿ ಇಲಾಖೆಗಳು ರೈತರಿಗೆ ಸಹಜ ಕೃಷಿ ಬಗ್ಗೆ ತರಬೇತಿ ನೀಡಬೇಕು. ಕೃಷಿ, ಪಶು ಸಖಿಯರು ತರಬೇತಿ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿರುತ್ತಾರೆ. ಮತ್ತು ಅವರು ರೈತರು ಮತ್ತು ವಿಜ್ಞಾನಿಗಳ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಕೃಷಿ ವಿಜ್ಞಾನ ಕೇಂದ್ರದವರು ತರಬೇತಿ ಜೊತೆಗೆ ರೈತರಿಗೆ ವಿತರಣೆ ಮಾಡಲು ಜೀವಾಣುಗಳು, ಜೇನು ಪೆಟ್ಟಿಗೆ ಇತ್ಯಾದಿ ನೀಡುವುದು, ತೋಟಗಾರಿಕೆ ಇಲಾಖೆಯವರು ಹನಿ ನೀರಾವರಿ, ಗಿಡಗಳು, ಗಿಡಗಳನ್ನು ನೆಡಲು ಗುಂಡಿ ತೆಗೆಸುವುದು, ಕೃಷಿ ಇಲಾಖೆಯವರು ಹಸಿರು ಹೊದಿಕೆಗೆ ಬೇಕಾಗುವ ಬೀಜ ಹಾಗು ಇತ್ಯಾದಿ ಪರಿಕರದ ಜವಾಬ್ಧಾರಿ, ಮೀನುಗಾರಿಕೆ ಇಲಾಖೆಯವರು ಕೃಷಿ ಹೊಂಡಕ್ಕೆ ಮೀನುಗಳನ್ನು ಕೊಡುವುದು, ಪಶು ಸಂಗೋಪನೆಯವರು ಜಾನುವಾರುಗಳಿಗೆ ರೋಗ ಬರದಂತೆ ಮೇವಿಗೆ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೀಗೆ ವಿವಿಧ ಇಲಾಖೆಯವರು ಜವಾಬ್ದಾರಿ ನಿರ್ವಹಣೆಯನ್ನು ನಿಭಾಯಿಸಿಕೊಂಡು ಹೋಗುವುದು ಎಂದು ವಿಸ್ತೃತವಾಗಿ ಚರ್ಚಿಸಲಾಯಿತು.

ಪ್ರತಿ ಜಿಲ್ಲೆಗೆ ಬೇಕಾದ ಕಾರ್ಯಕ್ರಮದ ರೂಪುರೇಷೆ, ಸಹಜ ಬೇಸಾಯಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಬೆಂಬಲ ಮತ್ತು ತರಬೇತಿ ಒದಗಿಸುವ ಬಗ್ಗೆ ರೈತರು ಶೀಘ್ರದಲ್ಲಿ ಸಭೆ ಸೇರಿ ಅನುಷ್ಠಾನದ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲು ಕಾರ್ಯಾಗಾರದಲ್ಲಿ ತೀರ್ಮಾನಿಸಲಾಯಿತು.ಕಾರ್ಯಾಗಾರದಲ್ಲಿ ರೈತ ಸಂಘದ ಹೂನ್ನೂರು ಪ್ರಕಾಶ, ದುಗ್ಗಟ್ಟಿ ರಾಜೇಶ, ಪ್ರಶಾಂತ ಜಯರಾಂ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕರಮೂರ್ತಿ, ಪ್ರಸನ್ನ, ಮಹೇಂದ್ರ, ಚಂದ್ರಶೇಖರಯ್ಯ, ವೆಂಕಟೇಶ, ರಕ್ಷಿತ್, ದೀಪಾ ಮತ್ತು ರಾಜ್ಯದ ವಿವಿಧ ಭಾಗದಿಂದ 50ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ