ಸಂಘಟನೆಗಳು ಬಡವರ ಪರ ಕೆಲಸ ಮಾಡಲಿ

KannadaprabhaNewsNetwork | Published : May 12, 2024 1:17 AM

ಸಾರಾಂಶ

ಇಂದಿನ ದುಬಾರಿ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾಮೂಹಿಕ ವಿವಾಹ ಮಾಡುವ ಮೂಲಕ ಅನೇಕ ಬಡ ಕುಟುಂಬಗಳಿಗೆ ನೆರವು ನೀಡುವಂಥ ಕೆಲಸ ಪುಣ್ಯದ್ದು ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.

ಕಾರಟಗಿ: ಯುವಕರು ಸಂಘಟನೆಗಳ ಮೂಲಕ ಬಡವರ ಪರ, ಶೋಷಿತರ ಅನುಕೂಲಕ್ಕಾಗಿ ಸಾಮಾಜಿಕ ಸೇವೆಗಳನ್ನು ಮಾಡಿದಾಗ ಮಾತ್ರ ಸಂಘಟನೆಗಳ ಕೆಲಸ ಸಾರ್ಥಕವಾಗುತ್ತದೆ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.

ಇಲ್ಲಿನ ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಶುಕ್ರವಾರ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ದುಬಾರಿ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಾಮೂಹಿಕ ವಿವಾಹ ಮಾಡುವ ಮೂಲಕ ಅನೇಕ ಬಡ ಕುಟುಂಬಗಳಿಗೆ ನೆರವು ನೀಡುವಂಥ ಕೆಲಸ ಪುಣ್ಯದ್ದು. ಗ್ರಾಮೀಣ ಭಾಗದಲ್ಲಿ ಅನೇಕ ದೇವಸ್ಥಾನ, ಜಾತ್ರೆಗಳಲ್ಲಿ ಇಂಥ ಪುಣ್ಯದ ಕೆಲಸಗಳು ನಡೆಯುತ್ತವೆ. ಯುವಕರು ಸಂಘಟನೆಗಳ ಮೂಲಕ ಇಂಥ ಕೆಲಸ ಮಾಡಿದ್ದು ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ಇನ್ನೂ ಮುಂದೆ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದರು.

ಮರುಳಸಿದ್ಧೇಶ್ವರ ಪುಣ್ಯಾಶ್ರಮದ ಶಿವಶರಣ ಗೆದ್ದಗಪ್ಪ ಅಜ್ಜನವರು ಹಾಗೂ ಮರುಳಸಿದ್ದಯ್ಯಸ್ವಾಮಿ ಹಿರೇಮಠ ಅವರ ಸಾನ್ನಿಧ್ಯದಲ್ಲಿ ಒಟ್ಟು ೧೧ ಜೋಡಿಗಳ ವೈವಾಹಿಕ ಜೀವನಕ್ಕೆ ಕಾಲಿಟ್ಟವು.

ಸಂಘಟನೆ ಅಧ್ಯಕ್ಷ ಯಲ್ಲಪ್ಪ ಕಟ್ಟಿಮನಿ ಈ ಸಮಯದಲ್ಲಿ ಮಾತನಾಡಿ, ತಮ್ಮ ಸಂಘಟನೆ ಇಂಥ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಿದೆ ಎಂದರು.

ಬಸವರಾಜ ಎತ್ತಿನಮನಿ, ಎಚ್.ಎನ್. ಬಡಿಗೇರ, ಚಂದ್ರಶೇಖರ ಮುಸಾಲಿ, ಮಲ್ಲಿಕಾರ್ಜುನ ಯರಡೋಣ, ಯು. ಲಕ್ಷ್ಮಣ, ದೇವಪ್ಪ ದೇವರಮನಿ, ಮಂಜುನಾಥ ಮಸ್ಕಿ, ರಮೇಶ ಅಂಗಡಿ, ಹನುಮಂತ, ಜಮದಗ್ನಿ ಚೌಡ್ಕಿ, ತಾಯಪ್ಪ ಗುಂಡೂರು, ವೆಂಕೋಬ ಮೈಲಾಪುರ, ಹುಲಿಗೇಶ ಬುಕನಹಟ್ಟಿ, ಸಣ್ಣ ಗಾಳೇಶ, ಎಂ. ಹನುಮೇಶ ಇದ್ದರು.

ಮೆರವಣಿಗೆ: ಭಗವಾನ್ ಬುದ್ಧ, ವಿಶ್ವಗುರು ಬಸವಣ್ಣ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್‌ ಅವರ ಜಯಂತಿ ಅಂಗವಾಗಿ ಈ ದಾರ್ಶನಿಕರ ಫೋಟೋಗಳ ಮೆರವಣಿಗೆ ಇಲ್ಲಿನ ಇಂದಿರಾನಗರ ವಿರುಪಣ್ಣ ತಾತನ ಗುಡಿಯಿಂದ ವೇದಿಕೆ ಕಾರ್ಯಕ್ರಮ ನಡೆದ ಶ್ರೀ ಸಿದ್ಧೇಶ್ವರ ರಂಗಮಂದಿರದ ವರೆಗೆ ನಡೆಯಿತು.

Share this article