ಶಿರಸಿ: ಕನ್ನಡದ ಕಾವ್ಯಗಳ ಅಧ್ಯಯನ ಕೊರತೆಯಿಂದ ಕನ್ನಡದ ಕಾವ್ಯಗಳಿಗೆ ಶರೀರವೇ ಇಲ್ಲದಂತಾಗಿದೆ. ಕನ್ನಡ ಕಾವ್ಯಗಳ ಅಧ್ಯಯನವಾಗಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಮೈಸೂರು ಹೇಳಿದರು.
ಆದಿಕವಿ ಪಂಪ ಈ ಮಣ್ಣಿನ ಮಗ. ಆದಿ ಪಂಪ ವಿಶೇಷವಾದವನು. ಬನವಾಸಿಯನ್ನು ವರ್ಣಿಸಿದಂತೆ ಕುರುಕ್ಷೇತ್ರವನ್ನೂ ಆತ ವರ್ಣಿಸಿದ್ದಾನೆ. ಪಂಪನ ಕಾವ್ಯ ದಲ್ಲಿ ಕವಿಗಳು ಅನುಸಂಧಾನ ಮಾಡುವಂತಹ ಅಂಶಗಳು ಅಡಗಿವೆ. ಪಂಪನ ಕಾವ್ಯಗಳು ನಮಗೆ ಮಾದರಿಯಾಗಬೇಕು ಎಂದರು.
ಪಂಪನ ಆದರ್ಶ ಗಳನ್ನು, ಮೌಲ್ಯಗಳನ್ನು ನಾವು ಅಳವಡಿಸಿಕೊಳಬೇಕು. ಪಂಪ ಕನ್ನಡದ ಅಸ್ಮಿತೆ.ಪ್ರತಿದಿನವೂ ಪಂಪನನ್ನು ನಾವು ಸ್ಮರಿಸಬೇಕು. ಕದಂಬೋತ್ಸವ ಕನ್ನಡ ತನವನ್ನು ಹೆಚ್ಚಿಸುತ್ತಿದೆ. ಪಂಪನ ಕಾವ್ಯಗಳು ಗಮಕ ವಾಚನದ ಮೂಲಕ ಕದಂಬೋತ್ಸವದಲ್ಲಿ ಇಮ್ಮಡಿ ಗೊಳ್ಳಬೇಕು ಎಂದರು.ಪಂಪನನ್ನು ಅನುಸಂಧಾನ ಮಾಡಬೇಕು. ಕನ್ನಡ ಸಾಹಿತ್ಯದಲ್ಲಿ ಹೊಸ ಶಬ್ದಗಳನ್ನು ಪರಿಚಯಿಸಿದವನು ಪಂಪ. ಇಂದಿಗೂ ಆ ಶಬ್ದಗಳು ಜೀವಂತವಾಗಿದೆ. ಪರಭಾಷಿಕರನ್ನು ಕನ್ನಡಿಕರಿಸುವ ಕಾರ್ಯ ಸರ್ಕಾರದಿಂದ ಆಗಬೇಕು. ಮಯೂರವರ್ಮ ಹುಟ್ಟಿದ ನೆಲ,ಪಂಪಕವಿ ನಡೆದಾಡಿದ ಭೂಮಿ ಸಮೃದ್ಧವಾಗಿರಬೇಕು ಎಂದರು.
ಮುಂದಿನ ದಿನಗಳಲ್ಲಿ ನ್ಯೂನತೆ ರಹಿತವಾಗಿ ಕದಂಬೋತ್ಸವ ಆಚರಣೆಯಾಗುವಂತಾಗಲಿ. ಎಲ್ಲರೂ ಸೇರಿ ಇನ್ನೂ ಹೆಚ್ಚಿನ ರೀತಿಯಲ್ಲಿ ಯಶಸ್ವಿಯಾಗಿ ಉತ್ಸವಗಳು ನಡೆಯಲಿ ಎಂದರು.
ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿದರಿಗೆ ಅವಕಾಶಗಳನ್ನು ನೀಡುವ ಮೂಲಕ ವಿಜೃಂಭಣೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದೆ. ಬನವಾಸಿ ಯಾವುದೇ ಕ್ಷೇತ್ರಕ್ಕೆ ಸೀಮಿತವಾದ ಪ್ರದೇಶವಲ್ಲ. ಕನ್ನಡದ ಮೊದಲ ರಾಜಧಾನಿ ಇದು. ಕನ್ನಡ ಭವನಕ್ಕೆ ಪ್ರಸ್ತಾವನೆ ಕಳುಹಿಸಿ ಬನವಾಸಿಯಲ್ಲಿ ಪಂಪ ಭವನ ನಿರ್ಮಾಣ ಮಾಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕಬ್ಬಿನಾಲೆ ವಸಂತ ಭಾರದ್ವಾಜ, ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರೀಯಾ, ಅಪರ ಜಿಲ್ಲಾಧಿಕಾರಿ ಸಾಜೀದ್ ಅಹ್ಮದ್ ಮುಲ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಮಂಗಲಾ ನಾಯಕ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ ಖಾನ್, ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ ಮತ್ತಿತರರು ಇದ್ದರು.