ವಿದ್ಯಾರ್ಥಿ ದಿಶೆಯಲ್ಲಿ ದೇಶಪ್ರೇಮಿಗಳು ಮಾದರಿಯಾಗಲಿ: ಸಂಸದ ರಾಘವೇಂದ್ರ

KannadaprabhaNewsNetwork | Published : Jun 29, 2024 12:32 AM

ಸಾರಾಂಶ

ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಮೈಸೇವಾ ಮೈ ಸೇವಾ ಟ್ರಸ್ಟ್ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ಸಂಸದ ರಾಘವೇಂದ್ರ ಶಾಸಕ ವಿಜಯೇಂದ್ರ ಮತ್ತಿತರರು ವಿತರಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರೌಢಶಾಲಾ ಹಂತ ಪ್ರಮುಖ ಕಾಲಘಟ್ಟವಾಗಿದ್ದು, ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉನ್ನತ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶುಕ್ರವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ‘ಮೈ ಸೇವಾ ಟ್ರಸ್ಟ್’ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಿ ಅವರು ಮಾತನಾಡಿದರು.

ಮೈತ್ರಾದೇವಿ ಯಡಿಯೂರಪ್ಪ ನವರ ಹೆಸರಿನಲ್ಲಿ ಮೈ ಸೇವಾ ಸಂಸ್ಥೆ ಮೂಲಕ ಸಾಮಾಜಿಕ ಕಾರ್ಯ ಆಯೋಜಿಸುತ್ತಿರುವುದು ನಮ್ಮ ಹೆಮ್ಮೆ ಎಂದ ಅವರು ನಮಗೆ ಗಾಂಧೀಜಿ, ಅಂಬೇಡ್ಕರ್, ಸಾವರ್ಕರ್, ಆಜಾದ್ ಚಂದ್ರಶೇಖರ್ ರೀತಿಯ ಹೋರಾಟಗಾರರು, ದೇಶಪ್ರೇಮಿಗಳು ಮಾದರಿಯಾಗಿರಬೇಕು ಎಂದರು.

ತಾಲೂಕಿನಲ್ಲಿ ಅತೀ ಹೆಚ್ಚು ಸರ್ಕಾರಿ ಶಿಕ್ಷಣ ಸಂಸ್ಥೆಗಳು ವಸತಿ ಶಾಲೆಗಳಿದ್ದು ಅಂದಾಜು 7,500 ಮಕ್ಕಳಿಗೆ ವಸತಿ ಶಿಕ್ಷಣವನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ ಇದು ಯಡಿಯೂರಪ್ಪನವರ ಶಿಕ್ಷಣ ಪ್ರೇಮದ ಕಾಳಜಿಯ ಪ್ರತೀಕವಾಗಿದೆ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ .ವಿಜಯೇಂದ್ರ ಮಾತನಾಡಿ, ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ವಿದ್ಯಾರ್ಥಿ ಜೀವನದಲ್ಲಿಯೇ ಮೈಗೂಡಿಸಿಕೊಳ್ಳಬೇಕಾಗಿದೆ, ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ತಂದೆ ತಾಯಿ ತಿನ್ನುವ ತುತ್ತಿನಲ್ಲಿ ಮಕ್ಕಳಿಗೆ ತುತ್ತು ಕೊಟ್ಟು ಸಾಕಿ ಬೆಳೆಸಿದ್ದಾರೆ. ಎಂಬುದನ್ನು ಮರೆಯಬಾರದು, ಇಳಿ ವಯಸ್ಸಿನ ತಂದೆ ತಾಯಿ ಮನಸ್ಸಿಗೆ ನೋವಾಗದಂತೆ ಅವರನ್ನು ದೂರ ಮಾಡದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು.

ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ ಹೆದರಿ ಓಡಿ ಹೋಗದೆ, ಅವುಗಳನ್ನು ಧೈರ್ಯವಾಗಿ ನಿಂತು ದಿಟ್ಟವಾಗಿ ಎದುರಿಸಿ ಎಂದು ಸಲಹೆ ನೀಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಪರೀತವಾಗಿದ್ದ ಬಸ್ಸುಗಳ ಸಮಸ್ಯೆ ಬಗ್ಗೆ ಸಚಿವರ ಜತೆ ಮಾತುಕತೆ ನಡೆಸಿ ಹಲವು ಭಾಗಗಳಿಗೆ ಬಸ್ ಸಂಚಾರ ಆರಂಭವಾಗಿದೆ. ಬಾಕಿ ಇರುವ ಪ್ರದೇಶಗಳಿಗೆ ಪುನಃ ಸಾರಿಗೆ ಸಚಿವರ ಜತೆ ಮಾತುಕತೆ ನಡೆಸಿ ಹೆಚ್ಚುವರಿ ಬಸ್ ಓಡಿಸಲು ಶೀಘ್ರ ವ್ಯವಸ್ಥೆ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಸಚ್ಚಿದಾನಂದ ಬಿ.ಮಠದ್ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಶಾಸಕ ರಾಮಮೂರ್ತಿ,ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಮೈ ಸೇವಾ ಟ್ರಸ್ಟಿನ ಕಾರ್ಯದರ್ಶಿ ಹಾಗೂ ಹಿರಿಯ ವಕೀಲ ಸಂದೀಪ್ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹಮ್ಮದ್‌ ರಫೀಕ್‌ ಖಾನ್, ಅಶೋಕ್ ನಾಯ್ಕ,ಸೋಮಶೇಖರ್,ಪಾಪಯ್ಯ,ಸಿದ್ದಲಿಂಗಪ್ಪ ,ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ,ತಾ.ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

Share this article