ಕುಮಟಾ: ಸುಶಿಕ್ಷಿತ ಸಮಾಜ ನಿರ್ಮಾಣದಿಂದ ಅಪರಾಧಿಕ ಪ್ರಕರಣ ಕಡಿಮೆಯಾಗಲಿ, ಸಮಾಜದಲ್ಲಿ ಮನುಷ್ಯ ಪರಸ್ಪರ ಸ್ಪಂದಿಸುವ ಗುಣ ಬೆಳೆಸಿಕೊಳ್ಳಲಿ ಎಂದು ವಕೀಲೆ ಮಮತಾ ನಾಯ್ಕ ಹೇಳಿದರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಅರಿವು ಹೊಂದಿದಾಗ ಮಾತ್ರ ಅಪರಾಧ ಪ್ರಕರಣಗಳು ಸಮಾಜದಲ್ಲಿ ಕಡಿಮೆಯಾಗುತ್ತವೆ ಎಂದರು. ಫೋಕ್ಸೊ ಪ್ರಕರಣಗಳ ಕುರಿತು ಉದಾಹರಿಸಿದರು. ಶಿಕ್ಷಕ ವಿದ್ಯಾರ್ಥಿಗಳೊಂದಿಗೆ ಸಂವಾದದ ಮೂಲಕ ವಿದ್ಯಾರ್ಥಿಗಳ ಸಂದೇಹ ನಿವಾರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ಪ್ರೀತಿ ಪಿ. ಭಂಡಾರಕರ್, ಬದಲಾದ ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಸಮಾಜದಲ್ಲಿ ಅನ್ಯಾಯ ಅಥವಾ ಇನ್ನಿತರ ಕ್ರೌರ್ಯಗಳಾದಾಗ ಕಾನೂನು ಪ್ರತಿಯೊಬ್ಬರಿಗೂ ನ್ಯಾಯವನ್ನು ಒದಗಿಸುತ್ತದೆ ಎಂದರು.ಕಾರ್ಯದರ್ಶಿಗಳಾದ ಅಮರ ನಾಯ್ಕ ಮತ್ತು ಹರ್ಷಿತಾ ಮೇಸ್ತ ವೇದಿಕೆಯಲ್ಲಿದ್ದರು.
ಸಮೀಕ್ಷಾ ಜೋಷಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಜಿ.ಡಿ.ಭಟ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಲೈಂಗಿಕ ದೌರ್ಜನ್ಯ ವಿರೋಧಿ ಘಟಕದ ಕಾರ್ಯದರ್ಶಿ ಹಿರೇಹನಮಂತಪ್ಪ ಪ್ರತಿಜ್ಞಾವಿಧಿ ಬೋಧಿಸಿದರು. ರ‍್ಯಾಗಿಂಗ್ ವಿರೋಧಿ ಘಟಕದ ಕಾರ್ಯದರ್ಶಿ ಸವಿತಾ ಆಗೇರ ವಂದಿಸಿದರು. ಪಲ್ಲವಿ ನಾಯ್ಕ ಮತ್ತು ಕೀರ್ತಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.