ಹೊನ್ನಾವರ: ಜನರ ನಡುವೆ ಗೋಡೆ ಕಟ್ಟುವ, ಮತದ ನೆಲೆಯಲ್ಲಿ, ಜಾತಿ ನೆಲೆಯಲ್ಲಿ ಬೇರೆ ಬೇರೆ ಆವರಣ ನಿರ್ಮಾಣ ಮಾಡಿ, ಆ ಆವರಣದೊಳಗೆ ಮನುಷ್ಯರನ್ನು ಇರಿಸಿ, ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದನ್ನು ಯಾವಾಗ ನಿರಾಕರಿಸುತ್ತೇವೆಯೋ ಆಗ ಸಾಹಿತ್ಯದ ಸದುದ್ದೇಶ ನಿಜಕ್ಕೂ ಸಾರ್ಥಕವಾಗಿ ಯಶಸ್ವಿಯಾಗುತ್ತದೆ ಎಂದು ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕ ಪ್ರೊ. ಜಯರಾಮ ಶೆಟ್ಟಿ ತಿಳಿಸಿದರು.
ತಾಲೂಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆ ಆವರಣದಲ್ಲಿ ನಡೆದ ೧೧ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ವಿಷ ಎಲ್ಲ ಕಾಲದಲ್ಲಿಯೂ ಇರುತ್ತದೆ. ಆದರೆ ಈ ವಿಷವನ್ನು ನಿರಸನ ಮಾಡುವ ನಂಜುಂಡರು ಬೇಕಾಗುತ್ತದೆ. ಆ ದಿಸೆಯಲ್ಲಿ ಕನ್ನಡದ ಜನ ರೂಪುಗೊಂಡರೆ ಇಲ್ಲಿಯ ಸಹಬಾಳ್ವೆ ಬದುಕನ್ನು ಅತ್ಯಂತ ಜತನವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.
ಶನಿವಾರ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿ, ಅನುದಾನವಿಲ್ಲದೇ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತಿದೆ. ಪರಿಷತ್ತನ್ನು ಗಟ್ಟಿಗೊಳಿಸಬೇಕು. ಮಕ್ಕಳಲ್ಲಿ ಓದುವ ಸಂಸ್ಕೃತಿ, ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹೊನ್ನಪ್ಪಯ್ಯ ಗುನಗಾ ಮಾತನಾಡಿ, ಸಾಹಿತ್ಯ ಗಟ್ಟಿ ವ್ಯಕ್ತಿ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರೇರಣೆ ನೀಡಬೇಕು. ಸಹೃದಯತೆಯೆ ಸಾಹಿತ್ಯದ ಜೀವತಂತು. ಅಂತಹ ಜೀವ ತಂತುವನ್ನು ಮೀಟುವ ಸಾಹಿತ್ಯ ಇಂದಿನ ಅಗತ್ಯ. ಜಾತಿ, ಮತ ಪಂಥಗಳ ಆಚೆ ಯೋಚಿಸುವ ಮಾನವೀಯ ಸ್ಪರ್ಶ ನೀಡುವ ಸಾಹಿತ್ಯ ಕೃತಿಗಳು ಹೆಚ್ಚಾಗಿ ಸೃಜಿಸಬೇಕು. ಸಮಾಜದ ಎಲ್ಲರೂ ಪ್ರೀತಿಯಿಂದ ಬಾಳುವ, ಬೆರೆಯುವ ಹೃದಯ ವೈಶಾಲ್ಯವನ್ನು ರಚಿಸುವ ಮೌಲ್ಯಗಳು ಜಾಗೃತವಾಗಬೇಕಿದೆ. ಹೊನ್ನಾವರದ ಸಾಹಿತ್ಯ ವಲಯ ಹಿಂದಿನಿಂದಲೂ ಅನೇಕ ಪ್ರತಿಭಾವಂತ ಬರಹಗಾರರಿಂದ ನಾಡಿನ ಗಮನ ಸೆಳೆದಿದೆ. ಈಗಲೂ ಸಶಕ್ತ ಸಾಹಿತಿಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಶ್ರೀಮಂತ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ ಎಂದರು.
ಶಾಸಕ ದಿನಕರ ಶೆಟ್ಟಿ ಪುಸ್ತಕ ಬಿಡುಗಡೆಗೊಳಿಸಿ, ಬೆಂಗಳೂರಿನಲ್ಲಿ ಅಂಗಡಿಗಳಿಗೆ ಹೋದರೆ ಇಂಗ್ಲಿಷ್‌ನಲ್ಲಿ ಮಾತನಾಡಬೇಕೆಂಬ ಸ್ಥಿತಿ ಇತ್ತು. ಕನ್ನಡಪರ ಹೋರಾಟಗಾರರಿಂದಾಗಿ ಮೊದಲಿನ ಸ್ಥಿತಿ ಬದಲಾಗಿದೆ. ಕನ್ನಡದಲ್ಲಿ ಮಾತನಾಡುವ ವಾತಾವರಣ ಬಂದಿದೆ ಎಂದರು.ಹಿರಿಯ ಪತ್ರಕರ್ತ ಜಿ.ಯು. ಭಟ್ ಮಾತನಾಡಿ, ಯಾವುದೇ ಭಾಷೆ ಕಲಿತರೂ ಮಾತೃಭಾಷೆ ಕನ್ನಡ ಬೇಕು. ಕನ್ನಡದ ಅನ್ನ ತಿನ್ನುವ, ಕನ್ನಡ ಕಲಿಸುವ ಬಹುತೇಕ ಶಿಕ್ಷಕರು ಯಾವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಭಾಗವಹಿಸುತ್ತಿಲ್ಲ ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಜಿ. ಭಟ್, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಸ್.ಡಿ. ಹೆಗಡೆ, ಸಾಹಿತಿ ಡಾ. ಶ್ರೀಪಾದ ಶೆಟ್ಟಿ, ವೆಂಕಟರಮಣ ಹೆಗಡೆ ಕವಲಕ್ಕಿ, ಮುಗ್ವಾ ಗ್ರಾಪಂ ಅಧ್ಯಕ್ಷ ಐ.ವಿ. ನಾಯ್ಕ, ಶ್ರೀ ಸುಬ್ರಹ್ಮಣ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ಟಿ. ಭಟ್ ಬೆಕ್ಕುತ್ತೆ ಮಾತನಾಡಿದರು.ಡಾ. ಎಸ್.ಡಿ. ಹೆಗಡೆ, ಬಿಇಒ ಜಿ.ಎಸ್. ನಾಯ್ಕ, ಸತೀಶ ನಾಯ್ಕ, ಪತ್ರಕರ್ತ ಸತೀಶ ತಾಂಡೇಲ, ಆರ್.ಟಿ. ಭಟ್ ಬೆಕ್ಕುತ್ತೆ, ಎಂ.ಜಿ. ನಾಯ್ಕ, ಮುರ್ತುಜಾ ಹುಸೇನ್ ಮತ್ತಿತರರು ಇದ್ದರು.
ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು. ಗಜಾನನ ನಾಯ್ಕ ವಂದಿಸಿದರು. ತಹಸೀಲ್ದಾರ್ ಪ್ರವೀಣ ಕರಾಂಡೆ ರಾಷ್ಟ್ರ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪರಿಷತ್ತಿನ ಧ್ವಜಾರೋಹಣ, ಕಸಾಪ ಅಧ್ಯಕ್ಷ ಎಸ್.ಎಚ್. ಗೌಡ ನಾಡ ಧ್ವಜಾರೋಹಣ ನೆರವೇರಿಸಿದರು. ಉದ್ಯಮಿ ವೆಂಕಟರಮಣ ಹೆಗಡೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು.