ಪ್ರಧಾನಿ ಮೋದಿ ವಿಕಸಿತ ಭಾರತ ಕನಸು ನನಸು ಮಾಡೋಣ-ಡಾ. ಶೇಖರ ಸಜ್ಜನರ

KannadaprabhaNewsNetwork | Published : Jan 20, 2024 2:02 AM

ಸಾರಾಂಶ

ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2040ರ ವೇಳೆಗೆ ಸದೃಢ ಭಾರತ ನಿರ್ಮಾಣ ಮಾಡುವ ಕನಸನ್ನು ನನಸು ಮಾಡಲು ನಾವು ಇಂದೇ ಪಣತೊಡುವ ಕಾರ್ಯ ಮಾಡೋಣ ಎಂದು ಗದಗನ ಖ್ಯಾತ ವೈದ್ಯ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರ ಟಿಕೆಟ್ ಆಕಾಂಕ್ಷಿ ಡಾ. ಶೇಖರ ಸಜ್ಜನರ ಹೇಳಿದರು.

ಲಕ್ಷ್ಮೇಶ್ವರ: ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2040ರ ವೇಳೆಗೆ ಸದೃಢ ಭಾರತ ನಿರ್ಮಾಣ ಮಾಡುವ ಕನಸನ್ನು ನನಸು ಮಾಡಲು ನಾವು ಇಂದೇ ಪಣತೊಡುವ ಕಾರ್ಯ ಮಾಡೋಣ ಎಂದು ಗದಗನ ಖ್ಯಾತ ವೈದ್ಯ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರ ಟಿಕೆಟ್ ಆಕಾಂಕ್ಷಿ ಡಾ. ಶೇಖರ ಸಜ್ಜನರ ಹೇಳಿದರು. ಸಮೀಪದ ಅಡರಕಟ್ಟಿ ಗ್ರಾಪಂ ಎದುರಿನ ಬಯಲಿನಲ್ಲಿ ಶುಕ್ರವಾರ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಎಲ್ಲ ರಂಗಗಳಲ್ಲಿ ಉತ್ತುಂಗ ಸ್ಥಾನದಲ್ಲಿ ವಿರಾಜಮಾನವಾಗಿದೆ. ಭಾರತವನ್ನು ಸರ್ವ ರಂಗಗಳಲ್ಲಿ ಸರ್ವತೋಮುಖ ಅಭಿವೃದ್ಧಿಗೊಳಿಸಿ ಜಗತ್ತಿನ ಮುಂಚೂಣಿಯಲ್ಲಿ ನಿಲ್ಲಿಸುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಅವರ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಡಬೇಕಾಗಿದೆ. ದೇಶದ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುತ್ತಿದ್ದ 370 ರದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಭಾರತವನ್ನು ಜಾಗತಿಕ ಆಧ್ಯಾತ್ಮಿಕ ಕೇಂದ್ರವನ್ನಾಗಿಸುವ ಕಾರ್ಯ ಮಾಡಿದ್ದಾರೆ. ಚಂದ್ರಯಾನ ಮತ್ತು ಸೂರ್ಯಯಾನದ ಯಶಸ್ವಿ ಸಾಧನೆಗೆ ಪ್ರಧಾನಿ ಪ್ರೋತ್ಸಾಹ ನೀಡುವ ಕಾರ್ಯಮಾಡಿರುವುದು. ಉಜ್ವಲಾ ಯೋಜನೆ, ರಸಗೊಬ್ಬರ ಸಬ್ಸಿಡಿ ಯೋಜನೆ, ಬೇವು ಮಿಶ್ರಿತ ಯೂರಿಯಾ ರೈತರಿಗೆ ನೀಡುವುದು. ಆಯುಷ್ಮಾನ್ ಕಾರ್ಡ್‌ ನೀಡುವ ಮೂಲಕ ಬಡವರ ಆರೋಗ್ಯಕ್ಕೆ 5 ಲಕ್ಷ ರು.ಗಳ ಸಹಾಯಧನ ನೀಡುವುದು. ಹೆದ್ದಾರಿ ನಿರ್ಮಾಣ, ಒಂದೇ ಭಾರತ ರೈಲು ಯೋಜನೆ, ಕೋವಿಡ್ ಲಸಿಕೆ ಅಭಿಯಾನ, ರೈತರಿಗೆ ವಾರ್ಷಿಕ ಆರು ಸಾವಿರ ಸಹಾಯಧನ ನೀಡುವುದು ಹೀಗೆ ನೂರಾರು ಯೋಜನೆಗಳನ್ನು ದೇಶದ ಪ್ರತಿಯೊಬ್ಬ ನಾಗರಿಕರಿಗೆ ಮುಟ್ಟಿಸುವ ಕಾರ್ಯವನ್ನು ಮಾಡಿರುವುದನ್ನು ಗ್ರಾಮೀಣ ಭಾಗದ ಜನರಿಗೆ ಮುಟ್ಟಿಸುವ ಮೂಲಕ ಮತ್ತೊಮ್ಮೆ ನಮ್ಮ ದೇಶಕ್ಕೆ ಮೋದಿ ಪ್ರಧಾನಿಯಾಗಬೇಕು ಎನ್ನುವ ಸಂದೇಶವನ್ನು ಎಲ್ಲೆಡೆ ಮೊಳಗಿಸುವ ಕಾರ್ಯವನ್ನು ಮಾಡೋಣ ಎಂದು ಹೇಳಿದರು. ಸಭೆಯಲ್ಲಿ ಅಡರಕಟ್ಟಿ ಗ್ರಾಪಂ ಪ್ರೇಮವ್ವ ಲಮಾಣಿ, ಗ್ರಾಪಂ ಸದಸ್ಯ ನಿಂಗಪ್ಪ ಪ್ಯಾಟಿ, ಸೋಮಣ್ಣ ಹವಳದ, ಪಿಡಿಓ ಸವಿತಾ ಸೋಮಣ್ಣವರ, ರೂಪಾ ಬೊಮ್ಮನಹಳ್ಳಿ, ಮಲ್ಲನಗೌಡ ಪಾಟೀಲ, ನೀಲಪ್ಪ ಕದಡಿ, ಕಲ್ಲಪ್ಪ ಗಂಗಣ್ಣವರ, ಈರಣ್ಣ ಬಡಿಗೇರ, ರಾಮಣ್ಣ ಅಡರಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article