ದಸರಾ ಅನುದಾನಕ್ಕಾಗಿ ರಾಜಕೀಯ ಮುಖಂಡರು ಶ್ರಮಿಸಲಿ

KannadaprabhaNewsNetwork | Published : Sep 11, 2024 1:14 AM

ಸಾರಾಂಶ

ಹರಿಹರ ನಗರದಲ್ಲಿ ಅ.3ರಿಂದ ಅ.12 ರವರೆಗೆ 9 ದಿನಗಳ ಕಾಲ ನಡೆಯಲಿರುವ ದಸರಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಂಕರ್ ಕಟಾವ್‍ಕರ್‌ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರದಲ್ಲಿ ದಸರಾ ಉತ್ಸವ ಸಮಿತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಶಂಕರ್ ಕಟಾವ್‍ಕರ್‌ ಮನವಿ - - - ಕನ್ನಡಪ್ರಭ ವಾರ್ತೆ ಹರಿಹರ ನಗರದಲ್ಲಿ ಅ.3ರಿಂದ ಅ.12 ರವರೆಗೆ 9 ದಿನಗಳ ಕಾಲ ನಡೆಯಲಿರುವ ದಸರಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಂಕರ್ ಕಟಾವ್‍ಕರ್‌ ಹೇಳಿದರು.

ನಗರದ ಓಂಕಾರ ಮಠದಲ್ಲಿ ಭಾನುವಾರ ಸಂಜೆ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೈಸೂರು ಹಾಗೂ ಇನ್ನಿತರ ದಸರಾ ಮಹೋತ್ಸವಕ್ಕೆ ಇದುವರೆಗೆ ನೀಡಿರುವ ಅನುದಾನದ ಸಂಪೂರ್ಣ ವಿವರ ನನ್ನ ಬಳಿ ಇದೆ. ಅದೇ ರೀತಿ ಹರಿಹರದಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲು ಪಕ್ಷಬೇಧ ಮರೆತು ರಾಜಕೀಯ ಮುಖಂಡರು ಶ್ರಮಿಸಿ, ಸಹಕರಿಸಬೇಕು ಎಂದು ಮನವಿ ಮಾಡಿದರು.

ಸೂರ್ಯಾಸ್ತ ಆಗುವ ಮೊದಲೇ ಬನ್ನಿ ಮುಡಿಯುವ ಕಾರ್ಯಕ್ರಮ ಆಗಬೇಕಿದೆ. ಆದ್ದರಿಂದ ಎಲ್ಲ ದೇವಸ್ಥಾನಗಳ ಉತ್ಸವಮೂರ್ತಿ, ಅದರ ಪದಾಧಿಕಾರಿಗಳು ಮಧ್ಯಾಹ್ನ 1.30ಕ್ಕೆ ಹರಿಹರೇಶ್ವರ ದೇವಸ್ಥಾನ ಮುಂಭಾಗ ಸೇರಿ, 2 ಗಂಟೆಗೆ ಮೆರವಣಿಗೆ ಪ್ರಾರಂಭಿಸೋಣ. ತಾಲೂಕಿನ ಗ್ರಾಮಗಳಿಂದ ಯಾವುದೇ ಕಮಿಟಿ, ಸಂಘ ಸಂಸ್ಥೆಗಳು ಭಾಗವಹಿಸಲು ಬಂದರೂ ಅವರನ್ನು ಸೇರಿಸಿಕೊಳ್ಳೊಣ ಎಂದರು.

ಮಹಿಳೆಯರಿಗಾಗಿ ಮತ್ತೊಂದು ಸಭೆ:

ಇದೇ ತಿಂಗಳು ನಗರದ ನಾಮದೇವ ಸಿಂಪಿ ಕಲ್ಯಾಣ ಮಂಟಪದಲ್ಲಿ ಮಹಿಳೆಯರಿಗಾಗಿ ಮತ್ತೊಂದು ಸಭೆ ಕರೆಯಲಾಗುವುದು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆ ಹಾಗೂ ಉತ್ಸವದಲ್ಲಿ ಭಾಗವಹಿಸಿ ಮೆರವಣಿಗೆಗೆ ಮೆರಗು ತನ್ನಿ ಎಂದರು.

ಯುವ ಮುಖಂಡ ಸಿ.ಎನ್. ಹುಲುಗೇಶ್ ಮಾತನಾಡಿ, ಹರಿಹರ ತಾಲೂಕಿನಲ್ಲಿ ಬಹುತೇಕ ಮಠಗಳಿವೆ. ಅದರ ಸ್ವಾಮೀಜಿಗಳನ್ನು ಪ್ರತಿವರ್ಷ ಒಬ್ಬರಂತೆ ಮೆರವಣಿಗೆಗೆ ಕರೆಸುವ ಬದಲು ಎಲ್ಲರನ್ನೂ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಮನವಿ ಮಾಡೋಣ. ತಾಲೂಕಿನ ಎಲ್ಲ ಗ್ರಾಮಗಳ ದೇವಸ್ಥಾನಗಳ ಉತ್ಸವ ಮೂರ್ತಿ ಹಾಗೂ ಅಲ್ಲಿನ ಜನತೆಯನ್ನು ಆಹ್ವಾನಿಸೋಣ. ಇದರಿಂದ ಮೆರವಣಿಗೆಗೆ ಮೆರಗು ಬರುತ್ತದೆ ಎಂದು ಸಲಹೆ ನೀಡಿದರು.

ಮುಖಂಡರಾದ ವೀರೇಶ್ ಹನಗವಾಡಿ, ನಂದಿಗಾವಿ ಶ್ರೀನಿವಾಸ್, ಎಚ್.ಕೆ. ಕೊಟ್ರಪ್ಪ ಕಳೆದ 20 ವರ್ಷದಿಂದ ಸಮಿತಿಯಿಂದ ದಸರಾ ಕಾರ್ಯಕ್ರಮ ಅತ್ಯದ್ಭುತವಾಗಿ ನಡೆದುಬರುತ್ತಿದೆ ಎಂದು ಶ್ಲಾಘಿಸಿದ ಅವರು, ಎಲ್ಲ ಸಹಕಾರ ನೀಡುವುದಾಗಿ ಘೋಷಿಸಿದರು.

ಶಾಸಕ ಬಿ.ಪಿ. ಹರೀಶ್, ನಗರಸಭಾ ಆಧ್ಯಕ್ಷೆ ಕವಿತಾ ಎಂ. ಬೇಡರ್, ಉಪಾಧ್ಯಕ್ಷ ಜಂಬಣ್ಣ, ಅಮರಾವತಿ ಗೌಡರ ಮಹದೇವಪ್ಪ, ನಾರಾಯಣ ಜೋಯ್ಸ್, ಟಿ.ಜೆ. ಮುರುಗೇಶಪ್ಪ, ಡಾ.ರಶ್ಮಿ, ನಾಗಮಣಿ ಶಾಸ್ತ್ರಿ, ಅಜಿತ್ ಸಾವಂತ್, ಮಾಲತೇಶ್ ಭಂಡಾರಿ, ಶಿವಪ್ರಕಾಶ್ ಶಾಸ್ತ್ರಿ ಸೇರಿದಂತೆ ಸಮಿತಿಯ ಹಾಗೂ ವಿವಿಧ ಸಮಾಜ ಹಾಗೂ ದೇವಸ್ಥಾನಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

- - -

ಕೋಟ್‌

ಈಗಾಗಲೇ ತಾಲೂಕು ಹಾಗೂ ರಾಜ್ಯದಲ್ಲಿ ಸಾಕಷ್ಟು ಮಳೆಯಾಗಿದೆ. ಕೆರೆ, ಕಟ್ಟೆಗಳು, ಡ್ಯಾಂಗಳು ತುಂಬಿವೆ. ಕೋವಿಡ್‍ ಹಾವಳಿ, ಬರಗಾಲದಿಂದ ತತ್ತರಿಸಿದ್ದ ರೈತರು ಹಾಗೂ ವ್ಯಾಪಾರಸ್ಥರು ಸುಸ್ಥಿತಿಗೆ ತಲುಪಿದ್ದಾರೆ. ನಮ್ಮ ರಾಜ್ಯ ಹಾಗೂ ಧರ್ಮದ ಸಂಸ್ಕೃತಿ, ಪರಂಪರೆ ಉಳಿಸಲು ಹಾಗೂ ಬೆಳೆಸಲು ಸರ್ವರೂ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಹಬ್ಬಕ್ಕೆ ಕಳೆ ನೀಡಿ

- ಶಂಕರ್ ಕಟಾವ್‍ಕರ್‌, ಅಧ್ಯಕ್ಷ

- - - -9ಎಚ್‍ಆರ್‍ಆರ್ 1a: ಹರಿಹರದ ಓಂಕಾರ ಮಠದಲ್ಲಿ ಭಾನುವಾರ ದಸರಾ ಉತ್ಸವ ಸಮಿತಿಯ ಪೂರ್ವಭಾವಿ ಸಭೆ ನಡೆಯಿತು.

Share this article