ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಸಂಘದಿಂದ ಏರ್ಪಡಿಸಿದ್ದ ಸಮಾರಭದಲ್ಲಿ ಎಸ್.ಎಂ.ಕೃಷ್ಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಸಾರ್ವಜನಿಕ ಬದುಕು ಅನುಭವಿಸಿದವರಿಗಷ್ಟೇ ಗೊತ್ತು. ಅದು ರಾಜಕಾರಣಿಗಳಿಗೆ ಹೆಚ್ಚು ಗೊತ್ತಿರುತ್ತದೆ. ಇದೆಲ್ಲವನ್ನೂ ಎಸ್.ಎಂ.ಕೃಷ್ಣ ಅವರು ಹೇಗೆ ನಿರ್ವಹಿಸಿದರು ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.
ಯುವ ಸಮೂಹವು ದೇಶದ ರಾಜಕಾರಣವನ್ನು ಹೇಗೆ, ಯಾವ ಕಡೆ ಕೊಂಡೊಯ್ಯಬೇಕೆಂದು ಆಲೋಚನೆ ಮಾಡಬೇಕು. ಪ್ರಸ್ತುತದಲ್ಲಿ ಸಾಹಿತ್ಯವನ್ನು ಜನರಿಗೆ ತಲುಪಿಸದೇ ಇದ್ದರೆ ದೇಶದ ಭವಿಷ್ಯಕ್ಕೆ ಖಂಡಿತಾ ಕಷ್ಟವಿದೆ. ಏಕೆಂದರೆ ಜಾತ್ಯತೀತ ಎಂದರೆ ಗೊತ್ತಿಲ್ಲ, ಅಂಬೇಡ್ಕರ್, ಗಾಂಧೀಜಿ ಅವರನ್ನು ಓದಿಕೊಂಡಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ರಾಜಕಾರಣವನ್ನು ಹೋರಾಟದಿಂದಲೇ ಬದಲಾವಣೆ ಮಾಡುತ್ತೇವೆ ಎನ್ನುವುದನ್ನು ಬಿಡಬೇಕು. ಜಾತಿ ವ್ಯವಸ್ಥೆ, ಧಾರ್ಮಿಕ ಅಸಮಾನತೆಯನ್ನು ಶೇ.100 ರಷ್ಟು ವಿದ್ಯಾವಂತರೆ ಮಾಡುತ್ತಾರೆ. ಅದನ್ನು ಬಿಡಬೇಕು ಎಂದು ಅಭಿಪ್ರಾಯಪಟ್ಟರು.
ಮದುವೆ, ತಿಥಿ ಹಾಗೂ ಸಮಾರಂಭಗಳಿಗಿಂತ ಸದನಕ್ಕೆ ಹೋಗುವುದು ಶಾಸಕರಿಗೆ ಮುಖ್ಯ ಎನ್ನುವ ಭಾವನೆ ಜನರಿಗೆ ಬರಬೇಕು. ನಮ್ಮ ಕಾರ್ಯಕ್ರಮಗಳಿಗೆ ಬರಲಿಲ್ಲ ಎನ್ನುವುದನ್ನು ಬಿಟ್ಟು, ಸದನಕ್ಕೆ ಹೋಗಿ ಸಮಸ್ಯೆಗಳ ಬಗ್ಗೆ ಮಾತನಾಡಲಿ ಎಂಬುದು ತಿಳಿದಾಗ ಜನಪ್ರತಿನಿಧಿಗೆ ಜನರ ಸಮಸ್ಯೆ ಅರಿತು ಪರಿಹರಿಸಲು ಸಾಧ್ಯ ಎಂದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ನಿಜವಾಗಿಯೂ ಎಸ್.ಎಂ.ಕೃಷ್ಣರ ಪ್ರಶಸ್ತಿಗೂ ಮೀರಿದ ಯೋಗ್ಯರು ಎನ್ನುವ ವ್ಯಕ್ತಿತ್ವ ಕಿಮ್ಮನೆ ರತ್ನಾಕರ್ ಅವರದ್ದಾಗಿದೆ. ರಾಮಮನೋಹರ ಲೋಹಿಯಾ ಅವರ ಸಿದ್ಧಾಂತ ಓದಿಕೊಂಡು ಬಂದವರು ಕಿಮ್ಮನೆ ಅವರು. ಜಗತ್ತಿನ ನಾಗಾಲೋಟದಲ್ಲಿ ಸಾಗಬೇಕೆನ್ನುವ ದೃಷ್ಟಿಯಿಂದ ಕಾರ್ಖಾನೆ ಸ್ಥಾಪನೆ ಮಾಡುವುದಷ್ಟೇ ಅಲ್ಲ ಅಥವಾ ರೈತರ ಜಮೀನುಗಳಿಗೆ ಪರಿಹಾರ ಕೊಡಿಸುವುದಲ್ಲ. ಬದಲಿಗೆ ರೈತರ ಮಕ್ಕಳು ವಿದ್ಯಾವಂತರಾಗಿ ಅಲ್ಲಿನ ತಾಂತ್ರಿಕತೆ ಜ್ಞಾನ ಬೆಳೆಸಿಕೊಂಡು ಕೆಲಸ ಮಾಡಲಿ ಎಂಬುದಾಗಿತ್ತು. ಅಂದಿನ ಅವರ ಈ ಕನಸಿನ ಶಕೆ ಇಂದಿಗೂ ಮುಂದುವರಿಯುತ್ತಿದೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿದರು. ಬಿಜೆಪಿ ಮುಖಂಡ ಸಿದ್ದರಾಮಯ್ಯ ಹಾಗೂ ನಾಗಮಂಗಲ ವಕೀಲ ಜೀರಹಳ್ಳಿ ರಮೇಶ್‌ಗೌಡ ಅವರು ‘ಎಸ್.ಎಂ.ಕೃಷ್ಣ ಸ್ಥಳೀಯ ನೆಲೆಯಲ್ಲಿ’ ವಿಷಯ ಮಂಡಿಸಿದರು. ವಿದ್ವಾನ್ ಮೈಸೂರು ಎನ್.ಶ್ರೀನಾಥ್ ಮತ್ತು ತಂಡದವರು ಕೃಷ್ಣಾಂಜಲಿ ಗೀತ ಗಾಯನ ನಡೆಸಿಕೊಟ್ಟು ಪ್ರೇಕ್ಷಕರ ಚೆಪ್ಪಾಳೆ ಗಿಟ್ಟಿಸಿದರು.
ಎಸ್.ಎಂ.ಕೃಷ್ಣ ಸಾಹಿತ್ಯ-ಸಾಂಸ್ಕೃತಿಕ ನೆಲೆಯಲ್ಲಿ ಎಂಬುವ ವಿಷಯ ಕುರಿತು ಮಾತನಾಡಿದ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಎಸ್.ಎಂ.ಕೃಷ್ಣ ಅವರಂತಹ ಸುಸಂಸ್ಕೃತ ಮುಖ್ಯಮಂತ್ರಿಯನ್ನು ನಾನು ಕಂಡಿಲ್ಲ. ಸಾಂಸ್ಕೃತಿಕ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿ, ಕಲಾವಿದರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಬೆಂಗಳೂರು ಐಟಿ-ಬಿಟಿ, ಸಿಲಿಕಾನ್ ಸಿಟಿ ಎನಿಸಿಕೊಳ್ಳಲು ಎಸ್.ಎಂ.ಕೃಷ್ಣರ ಕೊಡುಗೆ ಕಾರಣ ಎಂಬುದನ್ನು ಒತ್ತಿ ಹೇಳಿದರು.