ನೈಜ ಸಮಾಜ ಸೇವಕರು ರಾಜಕೀಯಕ್ಕೆ ಬರಲಿ

KannadaprabhaNewsNetwork | Published : Oct 3, 2023 6:01 PM

ಸಾರಾಂಶ

ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಸ್ವಾಮೀಜಿ ಸಲಹೆ । ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ವ್ಹೀಲ್‌ ಚೇರ್‌, ವಾಕರ್, ಶ್ರವಣ ಸಾಧನ ವಿತರಣೆ

ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಸ್ವಾಮೀಜಿ ಸಲಹೆ । ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ವ್ಹೀಲ್‌ ಚೇರ್‌, ವಾಕರ್, ಶ್ರವಣ ಸಾಧನ ವಿತರಣೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಗಾಂಧಿ ತತ್ವ ಹೇಳುವವರು ಹೆಚ್ಚಾಗಿದ್ದರೂ, ಅದರಂತೆ ನಡೆದುಕೊಳ್ಳುವವರು ಕಡಿಮೆಯಾಗುತ್ತಿದ್ದು, ನಿಜವಾದ ಸಮಾಜ ಸೇವೆ ತುಡಿತ ಇರುವವರು ಮಾತ್ರ ರಾಜಕೀಯಕ್ಕೆ ಬರಬೇಕು ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಸೋಮವಾರ ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಕಲಚೇತನರಿಗೆ ವ್ಹೀಲ್‌ ಚೇರ್‌, ವಾಕರ್, ಶ್ರವಣ ಸಾಧನ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಇರುವವರು ರಾಜಕೀಯ ಕ್ಷೇತ್ರಕ್ಕೆ ಅಗತ್ಯವಾಗಿದ್ದಾರೆ ಎಂದರು.

ಮತದಾರ ಬದಲಾಗದ ಹೊರತು, ನೇತಾರನೂ ಬದಲಾಗುವುದಿಲ್ಲ. ರಾಜಕೀಯ ಕ್ಷೇತ್ರ ಅಷ್ಟೊಂದು ಸುಲಭವೂ ಅಲ್ಲ. ಯಾರನ್ನಾದರೂ ಅದು ಮೇಲಕ್ಕೊಯ್ಯಬಹುದು ಅಥವಾ ಪಾತಾಳಕ್ಕೆ ನೂಕಬಹುದು. ಆದರೆ, ಪ್ರಯತ್ನ ಬಿಡದೇ ಮುನ್ನುಗ್ಗುತ್ತಿರಬೇಕು ಎಂದು ತಿಳಿಸಿದರು.

ರಾಜಕೀಯ ಕ್ಷೇತ್ರಕ್ಕೆ ಯುವಕರು ಬರಲಿ:

ಹೊಸದುರ್ಗ ಕನಕ ಗುರುಪೀಠದ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ಎಲ್ಲಾ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಆಗ ಮಾತ್ರ ಹಿಂದುಳಿದ, ದಲಿತ, ತುಳಿತಕ್ಕೊಳಗಾದ ಸಮುದಾಯಗಳೂ ಮುಖ್ಯವಾಹಿನಿಗೆ ಬರಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ರಾಜಕೀಯವೆಂದರೆ ಹಣ ಮಾಡುವ ಕ್ಷೇತ್ರವಾಗಿದೆ. ರಾಜಕಾರಣಕ್ಕೆ ಬಡವರು, ನಿರ್ಗತಿಕರು, ಸಮಾಜ ಸೇವೆ ಮಾಡುವಂತಹ ಮನೋಭಾವದವರು ಹೆಚ್ಚಾಗಿ ಬರಬೇಕಾದ ಅಗತ್ಯವಿದೆ. ಮುಖ್ಯವಾಗಿ ಯುವಕರು ರಾಜಕೀಯಕ್ಕೆ ಕಾಲಿಡಬೇಕಿದೆ ಎಂದು ಹೇಳಿದರು.

ಸಮಾಜ ಸೇವೆಗೂ ಮುಂದಾಗಿ:

ಇನ್‌ ಸೈಟ್ಸ್‌ ಐಎಎಸ್‌ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಮಾತನಾಡಿ, ತಮ್ಮ ಸಂಸ್ಥೆ ಮೂಲಕ ತರಬೇತಿ ಪಡೆದ 1,200ಕ್ಕೂ ಹೆಚ್ಚು ಅಭ್ಯರ್ಥಿಗಳು ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಿದ್ದಾರೆ. ಹಣ, ಅಂತಸ್ತು ಬಂದಾಗ ಗುಡ್ಡೆ ಹಾಕಿ ಕೂರುವುದಲ್ಲ. ಆತ್ಮ ಸಂತೋಷಕ್ಕಾಗಿ ಸಮಾಜ ಸೇವೆಗೂ ಮುಂದಾಗಬೇಕು. ಈ ನಿಟ್ಟಿನಲ್ಲಿ ಇಂದಿನ ಸೇವಾ ಕಾರ್ಯಕ್ರಮಗಳ ಕೈಗೊಳ್ಳಲಾಗಿದೆ ಎಂದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ನರಸೀಪುರದ ಶ್ರೀ ಅಂಬಿಗರ ಚೌಡಯ್ಯ ಸ್ವಾಮೀಜಿ, ಫಾಸ್ಟರ್ ರಾಜಶೇಖರ, ತುಮಕೂರು ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಮಧುಕುಮಾರ, ನಿಂಚನ ಪಬ್ಲಿಕ್ ಶಾಲೆ ಸಂಸ್ಥಾಪಕ ನಿಂಗಪ್ಪ ಇತರರಿದ್ದರು. 60 ಜನರಿಗೆ ವ್ಹೀಲ್ ಚೇರ್‌, 100 ಜನರಿಗೆ ಶ್ರವಣ ಸಾಧನ, 80ಕ್ಕೂ ಹೆಚ್ಚು ಜನರಿಗೆ ಬಳಗದಿಂದ ವಾಕರ್‌ಗಳನ್ನು ವಿತರಿಸಲಾಯಿತು. ವಿನಯಕುಮಾರ ಸಮಾಜ ಸೇವೆ ಮೂಲಕ ಗಾಂಧಿ ತತ್ವ ಪಾಲಿಸುತ್ತಿದ್ದಾರೆ. ಬಡವರು, ಅಶಕ್ತರ ಬಗ್ಗೆ ಕಾಳಜಿ ಹೊಂದಿರುವುದು ಮೆಚ್ಚುವ ಸಂಗತಿ. ಹಣ, ಹೆಂಡ, ಬಟ್ಟೆ ಕೊಟ್ಟು ರಾಜಕೀಯ ಕ್ಷೇತ್ರವನ್ನೇ ಕುಲಗೆಡಿಸಿದ ಪರಿಸ್ಥಿತಿಯಲ್ಲಿ ವಿನಯಕುಮಾರನಂತಹ ಯುವಕರು ಭರವಸೆಯ ಬೆಳಕಾಗಿದ್ದಾರೆ.

ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಸ್ವಾಮೀಜಿ, ತರಳಬಾಳು ಶಾಖಾ ಮಠ

...............................ತುಳಿತಕ್ಕೆ ಒಳಗಾದವರ ಮೇಲೆತ್ತಬೇಕು: ವಿನಯ್‌

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ನಾನೂ ಆಕಾಂಕ್ಷಿ. ಮುಂದಿನ ದಿನಗಳಲ್ಲಿ ರೈತರು, ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು, ಮಹಿಳೆಯರು, ಯುವಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಮಾಡುವೆ ಎಂದು ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಇನ್‌ ಸೈಟ್ಸ್‌ ಐಎಎಸ್‌ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು. ಯಾವುದೇ ಜಾತಿ, ಧರ್ಮ, ಸಮಾಜ, ವರ್ಗಗಳು ಮೇಲೇಳಬೇಕು, ಮುಖ್ಯ ವಾಹಿನಿಗೆ ಬರಬೇಕೆಂದರೆ ಆ ಸಮಾಜವು ರಾಜಕಾರಣದಲ್ಲಿ ಉನ್ನತ ಸ್ಥಾನಮಾನ, ಉನ್ನತ ಹುದ್ದೆಗಳಲ್ಲಿ ಇರಬೇಕಾಗುತ್ತದೆ. ತುಳಿತಕ್ಕೆ ಒಳಗಾದವರ ಮೇಲೆತ್ತುವ ಕೆಲಸವಾಗಬೇಕೆ ಹೊರತು, ಅಂತಹವರಿಗೆ ಅನ್ಯಾಯ ಮಾಡಬಾರದು ಎಂದು ಹೇಳಿದರು.

.............

2ಕೆಡಿವಿಜಿ4-

ದಾವಣಗೆರೆಯಲ್ಲಿ ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಗಾಂಧೀಜಿ-ಶಾಸ್ತ್ರೀಜಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಕಲಚೇತನರಿಗೆ ವ್ಹೀಲ್‌ ಚೇರ್‌, ವಾಕರ್, ಶ್ರವಣ ಸಾಧನ ವಿತರಿಸಲಾಯಿತು.

.............

2ಕೆಡಿವಿಜಿ5

ದಾವಣಗೆರೆಯಲ್ಲಿ ಜಿ.ಬಿ.ವಿನಯಕುಮಾರ ಅಭಿಮಾನಿ ಬಳಗದಿಂದ ಗಾಂಧೀಜಿ-ಶಾಸ್ತ್ರೀಜಿ ಜಯಂತಿ ಹಾಗೂ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ವಿಕಲಚೇತನರಿಗೆ ವ್ಹೀಲ್‌ ಚೇರ್‌, ವಾಕರ್, ಶ್ರವಣ ಸಾಧನ ವಿತರಣೆ ಸಮಾರಂಭ ಉದ್ಘಾಟನೆ.

Share this article