ನೀಲಗಾರರ ಪರಂಪರೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಲಿ

KannadaprabhaNewsNetwork | Published : May 6, 2025 12:23 AM

ಸಾರಾಂಶ

ಚಾಮರಾಜನಗರದಲ್ಲಿ ಡಾ.ಮಹದೇವಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದಕ್ಷಿಣ ಭಾಗದಲ್ಲಿರುವ ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ, ಶ್ರೀ ಸಿದ್ದಪ್ಪಾಜಿ ಶ್ರೀಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಪ್ರಾಧಿಕಾರ ರಚನೆ ಮಾಡುತ್ತಿರುವುದು ಸ್ವಾಗತಾರ್ಹ ಹಾಗೂ ನೀಲಗಾರರ ಪರಂಪರೆ, ಪೂಜಾ ಕೈಂಕರ್ಯಗಳು ಸುಗಮವಾಗಿ ನಡೆಯುವಂತಹ ವಾತಾವರಣವನ್ನು ಪ್ರಾಧಿಕಾರ ನಿರ್ಮಾಣ ಮಾಡಬೇಕೆಂದು ಡಾ.ಎಚ್.ಸಿ. ಮಹದೇವಪ್ಪ ಅಭಿಮಾನಿಗಳ ಬಳಗದ ಡಾ. ವಿ.ಎನ್. ಮಹದೇವಯ್ಯ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಅನೇಕ ಶ್ರೀಕ್ಷೇತ್ರಗಳಿಗೆ ಈಗಾಗಲೇ ಪ್ರಾಧಿಕಾರ ರಚನೆ ಮಾಡಿ ವ್ಯವಸ್ಥಿತವಾಗಿ ಸರ್ಕಾರ ನಡೆಸುತ್ತಿದೆ. ಶ್ರೀ ಮಂಟೇಸ್ವಾಮಿ ದೇವಸ್ಥಾನವನ್ನು ಪ್ರಾಧಿಕಾರ ವ್ಯಾಪ್ತಿಗೆ ತಂದು ಅಭಿವೃದ್ದಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಇತರೆ ಸಚಿವರು ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿರುವುದು ಸ್ವಾಗತಾರ್ಹ. ಪ್ರಾಧಿಕಾರ ರಚನೆಯಿಂದ ದೇವಸ್ಥಾನಗಳಿಗೆ ಹೆಚ್ಚಿನ ಭದ್ರತೆ ದೊರಕಲಿದೆ. ಭಕ್ತರಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಹಕಾರಿಯಾಗುತ್ತದೆ ಎಂದರು. ಅಭಿವೃದ್ಧಿ ಪ್ರಾಧಿಕಾರ ಮಂಟೇಸ್ವಾಮಿ, ಸಿದ್ದಾಪ್ಪಾಜಿ, ರಾಚಪ್ಪಾಜಿ ಅವರ ಪರಂಪರೆಗೆ ಯಾವುದೇ ರೀತಿಯ ಧಕ್ಕೆಯನ್ನು ಉಂಟು ಮಾಡಬಾರದು. ಕಾನೂನಿನ ಚೌಕಟ್ಟಿನಲ್ಲಿ ದೇವಸ್ಥಾನದ ದೈನಂದಿನ ಕಾಯಕವನ್ನು ಮಾಡಿಕೊಂಡು ಹೋಗಲು ಪ್ರಾಧಿಕಾರವು ಹೆಚ್ಚಿನ ಒತ್ತು ನೀಡಬೇಕು. ನಮಗೆ ನಾವೇ ವಿಧಿಸಿಕೊಂಡಿರುವ ಪ್ರಜಾಪ್ರಭವ್ಯವಸ್ಥೆಯಲ್ಲಿನ ಕಾನೂನುಗಳು ಜನರ ಒಳಿತಿಗಾಗಿಯೇ ಇರುವಂತಹವು. ಅವುಗಳನ್ನು ಅನುಸರಿಸಿ ನಡೆಯುವುದ ನಮ್ಮ ಕರ್ತವ್ಯವಾಗಿದೆ ಎಂದರು. ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ ಸಹ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಆಡಳಿತಕ್ಕೊಳಪಟ್ಟು ಯಾವುದೇ ವಿವಾದಕ್ಕೆ ಒಳಗಾಗದೆ ಅಥವಾ ಅಲ್ಲಿನ ಯಾವುದೇ ಸಂಪ್ರದಾಯಗಳಿಗೆ ಅಡ್ಡಿಯಾಗದಂತೆ ನಡೆದುಕೊಂಡು ಹೋಗುತ್ತಿದೆ. ಈ ಮಾದರಿಯಲ್ಲಿ ಶ್ರೀ ಮಂಟೇಸ್ವಾಮಿ ದೇವಸ್ಥಾನದ ಅಭಿವೃದ್ಧಿ ಆಗಬೇಕು. ಈ ಮೂರು ದೇವಸ್ಥಾನಕ್ಕೂ ತನ್ನದೇ ಆದ ಹಿನ್ನೆಲೆ, ಆಚರಣೆ ಇದೆ. ಎಂದಿನಂತೆ ಸುಸೂತ್ರವಾಗಿ ನಡೆದುಕೊಂಡ ಹೋಗಲು ಪ್ರಾಧಿಕಾರ ಸಹಕಾರಿಯಾಗಲಿದೆ. ಪ್ರಜಾಪ್ರಭುತ್ವದ ಜನಪರವಾದ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅದನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು. ಕರ್ನಾಟಕದಲ್ಲಿ ೩೪೫೬೨ ದೇವಸ್ಥಾನಗಳು ಸರಕಾರದ ಅಧೀನಕ್ಕೆ ಒಳಪಟ್ಟಿವೆ. ಮೈಸೂರಿನಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ಸಹ ಇತ್ತೀಚೆಗೆ ಪ್ರಾಧಿಕಾರದ ವ್ಯಾಪ್ತಿಗೆ ತಂದಿರುವುದು. ಎಲ್ಲರಿಗೂ ತಿಳಿದ ವಿಷಯವಾಗಿದೆ. ಹೀಗಾಗಿ ಪರಂಪರೆಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಕ್ಕೆ ಸಂಪೂರ್ಣ ಬೆಂಬಲ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಿ. ಸಂಘಸೇನಾ, ಕೆಂಪನಪುರ ನಾಗರಾಜು, ಕಾಳಿಂಗಸ್ವಾಮಿ, ಸುಂದರ್, ಚಾಟೀಪುರ ಮರಿಸ್ವಾಮಿ ಇತರರು ಇದ್ದರು.

Share this article