ಘನತೆ ಬದುಕಿಗೆ ಕಾಯಕ ತತ್ವ ಅಳವಡಿಸಿಕೊಳ್ಳೋಣ: ಗೆಣ್ಣೂರು

KannadaprabhaNewsNetwork | Published : Feb 12, 2025 12:31 AM

ಸಾರಾಂಶ

ಜನಸಾಮಾನ್ಯರಾಡುವ ಭಾಷೆಯಲ್ಲಿ ವಚನಗಳನ್ನು ಶರಣರು ನೀಡಿದ್ದಾರೆ. ಶರಣರ ವಚನಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಕಾಯಕ ತತ್ವದ ಮಹತ್ವವನ್ನು ವಚನಗಳಲ್ಲಿ ಕಾಣಬಹುದು.

ಕನ್ನಡಪ್ರಭ ವಾರ್ತೆ ವಿಜಯಪುರ

ಘನತೆ ಬದುಕು ರೂಪಿಸಿಕೊಳ್ಳಲು ಕಾಯಕ ತತ್ವ ಅಳವಡಿಸಿಕೊಂಡು, ಕಾಯಕದಲ್ಲಿ ನಿರತರಾಗುವುದರ ಮೂಲಕ ಜೀವನ ಸುಂದರಗೊಳಿಸಿಕೊಳ್ಳೋಣ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕಾಯಕ ಶರಣರಾದ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ರವರ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಶರಣರು ಮೌಲ್ಯಯುತ ಕಾಯಕ ಜೀವನ ನಡೆಸುವುದರ ಮೂಲಕ ಸಮಾಜಕ್ಕೆ ಜ್ಞಾನದ ಬೆಳಕು ತೋರಿದರು.

ಜನಸಾಮಾನ್ಯರಾಡುವ ಭಾಷೆಯಲ್ಲಿ ವಚನಗಳನ್ನು ಶರಣರು ನೀಡಿದ್ದಾರೆ. ಶರಣರ ವಚನಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಕಾಯಕ ತತ್ವದ ಮಹತ್ವವನ್ನು ವಚನಗಳಲ್ಲಿ ಕಾಣಬಹುದು. ಶರಣರು ತಮ್ಮ ವಚನದ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದ್ದಾರೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ನಾವು ನಿರ್ವಹಿಸುವ ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕು. ಶರಣರ ಆಶಯವೂ ಇದೇ ಆಗಿತ್ತು. ಶರಣರ ವಚನ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕಿ ಪ್ರೊ.ಲಕ್ಷ್ಮಿದೇವಿ, ಶರಣರ ವಚನಗಳಿಂದ ಪ್ರೇರಣೆ ಪಡೆಯುವುದರ ಮೂಲಕ ಶರಣ ತತ್ವಾದರ್ಶ ಹಾಗೂ ಅವರ ಜೀವನಾದರ್ಶ ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದರು. ಪ್ರೊ.ಮಹಾದೇವ ರೆಬಿನಾಳ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ರವರ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಜಿಪಂ ಯೋಜನಾ ಮತ್ತು ಅಂದಾಜು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪೂರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಭೀಮರಾಯ ಜಿಗಜಿಣಗಿ, ಅಶೋಕ ಸೌದಾಗರ, ದಿಲೀಪ ಪೋಳ ಸೇರಿ ವಿವಿಧ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಹಾಗೂ ಸಮಗಾರ ಹರಳಯ್ಯ ರವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಚಾಲನೆ ನೀಡಿದರು. ಮೆರವಣಿಗೆಯು ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತದಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

Share this article