ಕನ್ನಡಪ್ರಭ ವಾರ್ತೆ ಬೀದರ್
ಡಾ. ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಎಲ್ಲರೂ ಸೇರಿ ಏ.14ರಂದು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೋಕಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಳೆದ ವರ್ಷ ಆಚರಿಸಿದಂತೆ ಈ ವರ್ಷವೂ ಡಾ. ಅಂಬೇಡ್ಕರ್ ಜಯಂತಿಯನ್ನು ಆಚರಿಸೋಣ. ಏ.14ರಂದು ಬೆಳಗ್ಗೆ 9ಕ್ಕೆ ನಗರದಲ್ಲಿರುವ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಲಾಗುತ್ತದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಅಂದು ಡಾ. ಅಂಬೇಡ್ಕರ್ ಅವರ ಪೋಟೊ ಇಟ್ಟು ಪೂಜೆ ಸಲ್ಲಿಸಬೇಕೆಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್ಎಲ್ ಮಾತನಾಡಿ, ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಅವರ ಭಾವಚಿತ್ರದ ಮೆರವಣಿಗೆಯ ಸಂದರ್ಭದಲ್ಲಿ ಒಂದೊಂದು ಒಳ್ಳೆಯ ಸಂದೇಶಗಳನ್ನು ಬರೆದುಕೊಂಡು ಬರಬೇಕು. ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗುತ್ತದೆ ಎಂದು ತಿಳಿಸಿದರು.ಒಳ್ಳೆಯ ಸಂದೇಶ ಹಾಗೂ ಡಾ. ಅಂಬೇಡ್ಕರ್ ಒಳ್ಳೆಯ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ಕೊಡುವಂತಾಗಬೇಕೆಂದು ಹೇಳಿದರು.
ಮೆರವಣಿಗೆ ಸಂದರ್ಭದಲ್ಲಿ ಸಮಯ ನಿಗದಿಪಡಿಸಿ. ಪ್ರತಿ ಪ್ರದೇಶದಿಂದ ಬರುವ ಮೆರವಣಿಗೆಗೆ ಸ್ವಯಂ ಸೇವಕರನ್ನು ನಿಯೋಜನೆ ಮಾಡಿ ಆಗ ನಮ್ಮ ಪೊಲೀಸರು ಅವರನ್ನು ಸಂಪರ್ಕಿಸಲು ಅನುಕೂಲವಾಗುತ್ತದೆ ಮತ್ತು ಮೆರವಣಿಗೆ ಸುಸೂತ್ರವಾಗಿ ನಡೆಯಲು ಅನುಕೂಲವಾಗುತ್ತದೆ ಎಂದರು.ಆಸ್ಪತ್ರೆ, ನ್ಯಾಯಾಲಯದ ಆವರಣದಂತಹ ಪ್ರದೇಶಗಳಲ್ಲಿ ಡಿಜೆ ಬೇಡ:
ಆಸ್ಪತ್ರೆ ಮತ್ತು ನ್ಯಾಯಾಲಯದ ಆವರಣದಂತಹ ಪ್ರದೇಶಗಳಲ್ಲಿ ಡಿಜೆ ಶಬ್ಧ ಇಡಬಾರದು. ಚುನಾವಣಾ ನೀತಿ ಸಂಹಿತೆ ಪ್ರಕಾರ ರಾತ್ರಿ 10 ಗಂಟೆಯ ವರಗೆ ಕಾರ್ಯಕ್ರಮ ಮಾಡಲು ಅವಕಾಶವಿದೆ. ಮೆರವಣಿಗೆ ಪಾಳೆ ಪ್ರಕಾರ ಒಂದಾದ ನಂತರ ಒಂದು ಬಂದರೆ ಯಾವುದೇ ಗೊಂದಲ ಆಗುವದಿಲ್ಲ ಎಂದರು.ಸಭೆಯಲ್ಲಿ ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು ಎಚ್‌ಎಸ್, ಬೀದರ್ ನಗರಸಭೆ ಆಯುಕ್ತರಾದ ಶಿವರಾಜ ರಾಠೋಡ, ಸಮಾಜದ ಮುಖಂಡರಾದ ಅನೀಲ ಬೆಲ್ದಾರ್, ಬಾಬು ಪಾಸ್ವಾನ, ಮಾರುತಿ ಬೌದ್ದೆ, ರಾಜು ಕಡ್ಯಾಳ, ಮಹೇಶ ಗೋರನಾಳಕರ್, ವಿಷ್ಣುವರ್ಧನ್ ವಾಲದೊಡ್ಡಿ, ಕಲ್ಯಾಣರಾವ್ ಬೋಸ್ಲೆ, ರಾಜಕುಮಾರ ಬನ್ನೂರ, ಸುಧಾಕರ ಎಕಂಬೆಕರ್, ಫರ್ನಾಂಡಿಸ್ ಹಿಪ್ಪಳಗಾಂವ್, ರಾಜಕುಮಾರ ಮೂಲಭಾರತಿ, ಪಂಡಿತ ಚಿದ್ರಿ, ವಿಜಯಕುಮಾರ ಸೋನಾರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.