ಕನ್ನಡಪ್ರಭ ವಾರ್ತೆ ಹಾಸನ
ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಹೇಗೆ ಎಂಬುದು ನಮ್ಮ ಮುಂದಿನ ಸವಾಲಾಗಿದ್ದು, ಇದಕ್ಕೆ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು ಎಂದು ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿಗೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹುಟ್ಟಿದ ಮೇಲೆ ನಾವೇನನ್ನಾದರೂ ಸಾಧಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಬದಲಾವಣೆಗೆ ಪ್ರತಿಯೊಬ್ಬರೂ ಸಿದ್ಧರಾಗಬೇಕು. ಯಾವುದೇ ಕೆಲಸವಾದರೂ ಶ್ರದ್ಧೆ, ನಿಷ್ಠೆ, ಸೇವೆ ಎಂಬುದು ಮುಖ್ಯವಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ಬದಲಾವಣೆಯ ಪುಟ ಬರೆಯಬೇಕಿರುವುದು ಯುವ ಜನಾಂಗವಾಗಿದೆ. ಕನಸು ಯಾವಾಗಲೂ ದೊಡ್ಡದಾಗಿರಬೇಕು. ಸಮಸಮಾಜದ ನಿರ್ಮಾಣಕ್ಕೆ ಲಿಂಗ ತಾರತಮ್ಯ ಇಲ್ಲದೆ ಒಗ್ಗೂಡಬೇಕಿದೆ. ಕಾನೂನನ್ನು ಅರಿತ ಮಹಿಳೆ ಶಕ್ತಳಾಗುತ್ತಾಳೆ ಎಂದು ತಿಳಿಸಿ, ಮಹಿಳೆಯರ ಸಂರಕ್ಷಣೆಗೆ ಇರುವಂತಹ ಮೊಬೈಲ್ ಅಪ್ಲಿಕೇಷನ್‌ಗಳ ಕುರಿತು ಜಾಗೃತಿ ಮೂಡಿಸಿದರು. ಜ್ಞಾನವೇ ದೇವರು, ಅಜ್ಞಾನವೇ ಸಾವು ಎಂಬ ಅಂಬೇಡ್ಕರ್ ವಾಕ್ಯವನ್ನು ನಮ್ಮಲ್ಲಿ ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆರ್ಥಿಕವಾಗಿ ಸಬಲವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಕ ನುಡಿಗಳನ್ನಾಡಿದರು.
ನಗರದ ಸೆನ್ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಮಧು ಎಂ.ಸಿ. ಅವರು ಮಾತನಾಡಿ, ಪೊಲೀಸ್ ಎಂಬುದು ಭಯ ಅಲ್ಲ ಭರವಸೆ ಎಂದು ವಿದ್ಯಾರ್ಥಿಗಳಿಗೆ ಹೇಳುವ ಮೂಲಕ ವಿದ್ಯಾರ್ಥಿಗಳು ಮೊಬೈಲ್ ದಾಸರಾಗಬೇಡಿ. ಶ್ರಮದ ಓದಿನಿಂದ ಉತ್ತಮ ಫಲ ಸಾಧ್ಯವಾಗುತ್ತದೆ ಎಂದು ಹೇಳಿದರು.ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಲು ಯಾವುದೇ ಭಯಪಡಬಾರದು, ಬಂದು ದೂರುಗಳನ್ನು ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಂಶುಪಾಲರಾದ ಡಾ.ಎಂ.ಬಿ. ಇರ್ಷಾದ್ ಮಾತನಾಡಿ, ಪದವಿಯನ್ನು ಎಲ್ಲಾ ವಿಶ್ವವಿದ್ಯಾನಿಲಯಗಳು ನೀಡುತ್ತವೆ, ಸಂಸ್ಕಾರವನ್ನು ನೀಡುವ ಕೆಲಸ ಆಗಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಗಣ್ಯರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ, ಅಪರ ಜಿಲ್ಲಾಧಿಕಾರಿ ಮಂಜುನಾಥ್, ಶೈಕ್ಷಣಿಕ ಡೀನ್ ರಾಜು ಡಿ. ಎಸ್ , ಪರೀಕ್ಷಾ ನಿಯಂತ್ರಕರಾದ ಡಾ. ಮುರಳೀಧರ ಕೆ.ಡಿ.,ಪತ್ರಾಂಕಿತ ವ್ಯವಸ್ಥಾಪಕರಾದ ಸತ್ಯಮೂರ್ತಿ ಕೆ.ಟಿ. ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು ಉಪಸ್ಥಿತರಿದ್ದರು.