ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಪಂಚಾಯ್ತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಆರೋಗ್ಯದ ಬಗ್ಗೆ ಇರಲಿ ಗಮನ- ಟಿಬಿ ಮುಕ್ತ ಭಾರತ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಮಾಡಲು 100 ದಿನಗಳ ಕಾಲ ಕ್ಷಯ ರೋಗ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ನಿಕ್ಷಯ ಪೋರ್ಟಲ್‌ನಲ್ಲಿ ಕ್ಷಯ ರೋಗಿಗಳನ್ನು ಅಡಾಪ್ಟ್ ಮಾಡಿಕೊಳ್ಳಲು ಅವಕಾಶ ಇದೆ. ಈ ರೋಗಿಗಳ ಔಷಧಿಗಳನ್ನು ನೀಡಲು ಕಡಿಮೆ ಮೊತ್ತದ ಹಣವನ್ನು ಒದಗಿಸಬಹುದು. ಯಾರು ಬೇಕಾದರೂ ಅಡಾಪ್ಟ್ ಮಾಡಿಕೊಳ್ಳಬಹುದು. ಮೊದಲು ನಾವು ಕ್ಷಯ ರೋಗಿಗಳನ್ನು ಪತ್ತೆ ಹಚ್ಚಬೇಕು. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಆಗಿರುವುದರಿಂದ ಇದಕ್ಕೆ ಚಿಕಿತ್ಸೆ ನೀಡಿ, ಹರಡದಂತೆ ನೋಡಿಕೊಳ್ಳ್ಳಬೇಕು ಎಂದರು.3- 4 ವಾರಗಳಿಗೂ ಹೆಚ್ಚು ಕೆಮ್ಮು ಇದ್ದರೆ ಅದು ಕ್ಷಯ ಆಗಿರಬಹುದು. ಹೀಗಾಗಿ, ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಪತ್ತೆ ಹಚ್ಚಿದವರಿಗೆ 500 ರು. ಪ್ರೋತ್ಸಾಹ ಧನ ನೀಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪರೀಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹೆಚ್ಚಿನ ರೀತಿ ಕಾರ್ಯ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಪಂ ಅಧಿಕಾರಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಇಂದಿನಿಂದ 100 ದಿನಗಳ ಕಾಲ ಟಿಬಿ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2005- 06ರಿಂದ ಆರ್ ಎಂಪಿಟಿಸಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಟಿಬಿಯನ್ನು ಕಡಿಮೆ ಮಾಡುವುದು ಆಗಿದೆ. 1 ಲಕ್ಷ ಜನರಿಗೆ 50 ಕಡಿಮೆ ಜನರಿಗೆ ಟಿಬಿ ಇರುವಂತೆ ಮಾಡುವುದು ನಮ್ಮ ಗುರಿ ಆಗಿದೆ. ಮುಂದಿನ 100 ದಿನಗಳ ಕಾಲ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಟಿಬಿಯನ್ನು ಕಡಿಮೆ ಮಾಡಲು ಗ್ರಾಮಗಳಿಗೆ ಭೇಟಿ ನೀಡಿ ಸರ್ವೇ ಮಾಡಿ, ಕ್ಷಯ ರೋಗ ಇದೆ ಎಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು ಎಂದರು.
8 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು:
ವಿಧಾನ ಪರಿಷತ್ತು ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ರೈತರು, ವೈದ್ಯರು, ಸೈನಿಕರು, ಪೊಲೀಸರು ಹಾಗೂ ಶಿಕ್ಷಕರು ದೇಶಕ್ಕೆ ಪಂಚ ರತ್ನಗಳಿದ್ದಂತೆ. ಕ್ಷಯ ರೋಗ ಅಂಟು ರೋಗ. ಇಂತಹ ರೋಗಕ್ಕೆ ಚಿಕಿತ್ಸೆ ನೀಡುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಧನ್ಯವಾದಗಳು. ವೈದ್ಯರು ಹಾಗೂ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ತಮ್ಮ ವೃತ್ತಿಯನ್ನು ಮಾಡುತ್ತಾರೆ ಎಂದು ಪ್ರಶಂಸಸಿದರು.
ಮುಂದುವರಿದ ರಾಷ್ಟ್ರಗಳಲ್ಲಿ ಕ್ಷಯ ರೋಗ ಇಲ್ಲ. ಹಿಂದುಳಿದ ಹಾಗೂ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಇದು ಇದೆ. ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಗ್ರಾಮ ಮಟ್ಟದಲ್ಲಿ ಕ್ಷಯ ರೋಗ ಪತ್ತೆ ಮಾಡಿ, ಚಿಕಿತ್ಸೆ ನೀಡಿ ಕ್ಷಯ ರೋಗ ಮುಕ್ತ ಗ್ರಾಮವನ್ನಾಗಿ ಮಾಡಬೇಕು. ಹೀಗೆ ಎಲ್ಲಾ ಗ್ರಾಮಗಳನ್ನು ಮಾಡಿದರೆ ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಮಾಡಲು ಸಾಧ್ಯ.