- ಬೆಮ್ಮನೆಯಲ್ಲಿ ಸೀತೂರು ಗ್ರಾಪಂನ 8 ಸರ್ಕಾರಿ ಶಾಲೆ ಮಕ್ಕಳಿಗೆ ದಾನಿಗಳಿಂದ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ
ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದು ಎಲ್ಲಾ ಪೋಷಕರು, ಗ್ರಾಮಸ್ಥರು ಒಟ್ಟಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ನಿವೃತ್ತ ಪ್ರಾಂಶುಪಾಲ ಬಿ.ಪಿ.ದಯಾನಂದ್ ಕರೆ ನೀಡಿದರು.
ಶನಿವಾರ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಸರ್ಕಾರಿ ಪ್ರಾಥಮಿಕ ಶಾಲೆಯ 150 ಮಕ್ಕಳಿಗೆ ದಾನಿಗಳು ನೀಡಿದ ಉಚಿತ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದಿದೆ. ಶಿಕ್ಷಣಕ್ಕಾಗಿ ಸರ್ಕಾರ ಕೋಟ್ಯಂತರ ರು. ಖರ್ಚು ಮಾಡುತ್ತಿದೆ. ಬಯಲು ಸೀಮೆಗಳಲ್ಲಿ ಅಲ್ಲಿನ ಗ್ರಾಮಸ್ಥರು ಬಹು ದೊಡ್ಡ ಹೋರಾಟ ಮಾಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆ ತಂದು ಶಾಲೆಗಳನ್ನು ಉಳಿಸಿ ಕೊಳ್ಳುತ್ತಿದ್ದಾರೆ. ಇದೇ ರೀತಿ ಮಲೆನಾಡು ಭಾಗದಲ್ಲೂ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಬೇಕು ಹಾಗೂ ಇತರ ಪೋಷಕರನ್ನು ಮನ ಒಲಿಸಬೇಕು ಎಂದರು.ಈ ಭಾಗದ 8 ಸರ್ಕಾರಿ ಶಾಲೆ 150 ಮಕ್ಕಳಿಗೆ 16 ದಾನಿಗಳು ತಮ್ಮ ಕೈಲಾಸ ಸಹಾಯ ಮಾಡಿದ್ದಾರೆ. ಎಲ್ಲಾ ಮಕ್ಕಳಿಗೂ ಬ್ಯಾಗು ಹಾಗೂ ಇತರ ಕಲಿಕಾ ಸಾಮಗ್ರಿ ನೀಡಿದ್ದು ಪ್ರತಿ ಮಕ್ಕಳಿಗೆ 550 ರು. ಸಾಮಾಗ್ರಿ ನೀಡಲಾಗುತ್ತಿದೆ. ಇನ್ನರ್ ವೀಲ್ ಕ್ಲಬ್ ನವರು ಪ್ರತಿ ಮಕ್ಕಳಿಗೂ ಜಾಮಿಟ್ರಿ ಬಾಕ್ಸ್ ನೀಡಿದ್ದಾರೆ. ಅಂಗನವಾಡಿ ಮಕ್ಕಳಿಗೆ ದಾನಿಗಳು ಸಮವಸ್ತ್ರ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಪುಟ್ಟಸ್ವಾಮಿಯನ್ನು ಸನ್ಮಾನಿಸಲಾಯಿತು. ಸುಬೋದ್ ಸ್ವಾಗತಿಸಿದರು. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.