- ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ,
ನಾವೆಲ್ಲರೂ ಕನ್ನಡತನ ಉಳಿಸಿಕೊಳ್ಳಲು ಕಂಕಣಬದ್ಧರಾಗೋಣ, ತಾಯಿ ಭುವನೇಶ್ವರಿ ಸೇವೆಯನ್ನು ಮನ:ಪೂರ್ವಕವಾಗಿ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಕರೆ ನೀಡಿದರು.
ಜಿಲ್ಲಾಡಳಿತ ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು. ನಮ್ಮ ಭಾರತ ದೇಶ ಗಣರಾಜ್ಯವಾದ ನಂತರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ಕೂಗು ಮಹತ್ವ ಪಡೆದಿತ್ತು. ಸುಗಮ ಆಡಳಿತ ವ್ಯವಸ್ಥೆಗೆ ಸ್ಥಳೀಯ ಪ್ರಾಂತ್ಯದ ಭಾಷೆ ಆಧಾರಿತ ಆಡಳಿತ ವ್ಯವಸ್ಥೆ ಪರಿಣಾಮಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಪಂಡಿತ್ ಜವಾಹರಲಾಲ್ ನೆಹರು ರವರ ದೂರ ದೃಷ್ಟಿ ಆಡಳಿತದ ಪರಿಣಾಮ ಕನ್ನಡ ಭಾಷೆ ಮಾತನಾಡುವ ನಮ್ಮ ಪ್ರದೇಶಕ್ಕೆ ಮಾನ್ಯತೆ ಸಿಕ್ಕಿತು. ದೇಶಾದ್ಯಂತ ಭಾಷಾ ವಾರು ರಾಜ್ಯಗಳ ರಚನೆಗೆ ನಾಂದಿ ಹಾಡಲಾಯಿತು. ಅದರ ಪರಿಣಾಮವಾಗಿ 1956ರ ನ. 1 ರಂದು ಭಾಷಾವಾರು ರಾಜ್ಯ ರಚನೆ ಅನುಷ್ಠಾನಕ್ಕೆ ಬಂದು ಮೈಸೂರು ರಾಜ್ಯವಾಗಿ ಉಗಮವಾಯಿತು ಎಂದರು.ಉತ್ತರ ಕರ್ನಾಟಕದ ಹಲವು ಮಹನೀಯರ ಬೇಡಿಕೆ ಹಾಗೂ ಆ ಕಾಲಘಟ್ಟದ ಸಾಹಿತಿಗಳು, ಕವಿಗಳು, ವಿಮರ್ಶಕರು ಹಾಗೂ ಬುದ್ಧಿಜೀವಿಗಳ ಹೋರಾಟದ ಫಲವಾಗಿ ಮೈಸೂರು ರಾಜ್ಯವನ್ನು ನಮ್ಮ ರಾಜ್ಯದ ಎಲ್ಲಾ ಬಹುಭಾಗ ಹಾಗೂ ಸಂಸ್ಕೃತಿ ಪ್ರತಿನಿಧಿಸುವಂತಹ ’ಕರ್ನಾಟಕ’ ಎಂಬ ಹೆಸರು ನಮ್ಮ ರಾಜ್ಯಕ್ಕೆ 1973ರ ನವಂಬರ್ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ನೇತೃತ್ವದಲ್ಲಿ ನಾಮಕರಣವಾಯಿತು ಎಂದು ಹೇಳಿದರು.
"ಕರುನಾಡು " ಎಂಬ ಪದ ಎತ್ತರದ ಭೂಭಾಗ ಎನ್ನುವ ಅರ್ಥ ನೀಡುತ್ತದೆ. ಕರ್ನಾಟಕದ ಜನತೆ ನಿಜಕ್ಕೂ ಎಲ್ಲಾ ಅರ್ಥದಲ್ಲೂ ಎತ್ತರದ, ಗೌರವದ ಸ್ಥಾನಮಾನಗಳಿಗೆ ಸದಾ ಅರ್ಹರಾಗಿದ್ದಾರೆ ಎಂದು ಹೇಳಿದರು.
ಕನ್ನಡಕ್ಕೆ ಹೊಸ ಕಾಯಕಲ್ಪ ನೀಡಲು ಶ್ರಮಿಸಿದ ಗೋವಿಂದ ಪೈ, ಪಂಜೆ ಮಂಗೇಶರಾಯರು, ಬಿಎಂಶ್ರೀ, ಅಂಬಳೆ ಕೃಷ್ಣ ಶಾಸ್ತ್ರಿ ಹಾಗೂ ಕನ್ನಡಕ್ಕೆ ದೇಶದಲ್ಲಿಯೇ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಗೌರವ ತಂದು ಕೊಟ್ಟ ಕುವೆಂಪು, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿನಾಯಕ ಕೃಷ್ಣ ಗೋಕಾಕ್, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಹಾಗೂ ಚಂದ್ರಶೇಖರ ಕಂಬಾರರು ಕನ್ನಡಿಗರನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದು ಹೇಳಿದರು.
ಶಾಸಕ ಎಚ್.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಉಪಸ್ಥಿತರಿದ್ದರು.
ನಾಡಿನ ಮಹತ್ವ ಸಾರಿದ ಕಾರ್ಯಕ್ರಮ
- 1 ಕೆಸಿಕೆಎಂ 1