ವ್ಯಸನಮುಕ್ತ ಭಾರತ ನಿರ್ಮಾಣವಾಗಲಿ

KannadaprabhaNewsNetwork |  
Published : Aug 02, 2025, 12:00 AM IST
1ಡಿಡಬ್ಲೂಡಿ4ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಡಿಮಾನ್ಸ್‌ ಭವನದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಶುಕ್ರವಾರ ಆಯೋಜಿಸಿದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಗಣ್ಯರು ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು.  | Kannada Prabha

ಸಾರಾಂಶ

ಆಧುನಿಕ ಜಗತ್ತಿನಲ್ಲಿ ವ್ಯಸನಗಳ ಸ್ವರೂಪ ಬದಲಾಗಿದ್ದು, ಮೊಬೈಲ್‌ ಘೀಳು, ಆನ್‌ಲೈನ್ ಗೇಮಿಂಗ್, ಜೂಜು ಮುಂತಾದ ಡಿಜಿಟಲ್ ವ್ಯಸನಗಳೂ ಸಹ ಯುವಜನತೆ ಆವರಿಸುತ್ತಿವೆ

ಧಾರವಾಡ: ವ್ಯಸನ ಮುಕ್ತ ದಿನಾಚರಣೆ ಕೇವಲ ಸಾಂಕೇತಿಕ ಆಚರಣೆಯಲ್ಲ, ಬದಲಾಗಿ ಸಮಾಜವನ್ನು ವಿಶೇಷವಾಗಿ ಯುವಪೀಳಿಗೆಯನ್ನು ವ್ಯಸನಗಳೆಂಬ ಮಾರಕ ಪಿಡುಗಿನಿಂದ ರಕ್ಷಿಸಲು ನಾವೆಲ್ಲರೂ ತೆಗೆದುಕೊಳ್ಳಬೇಕಾದ ದೃಢ ಸಂಕಲ್ಪದ ದಿನ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ (ಡಿಮಾನ್ಸ್‌) ಸಭಾಭವನದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಶುಕ್ರವಾರ ಆಯೋಜಿಸಿದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿದ ಅವರು, ಸಾಮಾನ್ಯವಾಗಿ ದಿನಾಚರಣೆಗಳನ್ನು ಸಂತೋಷದಿಂದ ಆಚರಿಸುತ್ತೇವೆ.ಆದರೆ, ವ್ಯಸನ ಮುಕ್ತ ದಿನ ಮಾತ್ರ ಬೇಸರದಿಂದ ಆಚರಿಸುವಂತಾಗಿದೆ. ಯುವ ಜನಾಂಗಕ್ಕೆ ಅಂಟಿದ ದೊಡ್ಡ ರೋಗ ಇದಾಗಿದ್ದು, ಜಾಗೃತಿ, ತಿಳಿವಳಿಕೆ ಮೂಲಕ ವ್ಯಸನ ಮುಕ್ತ ಭಾರತ ನಿರ್ಮಾಣ ಮಾಡಬೇಕಿದೆ ಎಂದರು.

ಆಧುನಿಕ ಜಗತ್ತಿನಲ್ಲಿ ವ್ಯಸನಗಳ ಸ್ವರೂಪ ಬದಲಾಗಿದ್ದು, ಮೊಬೈಲ್‌ ಘೀಳು, ಆನ್‌ಲೈನ್ ಗೇಮಿಂಗ್, ಜೂಜು ಮುಂತಾದ ಡಿಜಿಟಲ್ ವ್ಯಸನಗಳೂ ಸಹ ಯುವಜನತೆ ಆವರಿಸುತ್ತಿವೆ. ಈ ಎಲ್ಲ ವ್ಯಸನಗಳು ಒಂದು ರೀತಿಯಲ್ಲಿ ಗೆದ್ದಲು ಹುಳದಂತೆ ಸಣ್ಣ ಮಕ್ಕಳಿಂದ ದೊಡ್ಡ ವ್ಯಕ್ತಿ, ಅವನ ಕುಟುಂಬ ಮತ್ತು ಇಡೀ ಸಮಾಜವನ್ನು ಒಳಗಿನಿಂದಲೇ ತಿಂದು ಹಾಕುತ್ತವೆ. ವ್ಯಸನಕ್ಕೊಳಗಾದ ವ್ಯಕ್ತಿ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಾನೆ. ಶಿಕ್ಷಣ, ಉದ್ಯೋಗ, ಗುರಿ ಎಲ್ಲವನ್ನೂ ಮರೆತು, ಬದುಕಿನ ಅಮೂಲ್ಯ ಸಮಯ ವ್ಯರ್ಥ ಮಾಡಿಕೊಳ್ಳುತ್ತಾನೆ. ಆತ್ಮವಿಶ್ವಾಸ ಕಳೆದುಕೊಂಡು ಖಿನ್ನತೆಗೆ ಜಾರುತ್ತಾನೆ, ಹೆಣ್ಣು, ಹೊನ್ನು, ಮಣ್ಣು ಯಾವುದೇ ಅತೀ ಆದರೂ,ಅವು ವ್ಯಸನಗಳಾಗುತ್ತವೆ. ಯಾವುದೇ ವಸ್ತು, ವಿಷಯಗಳು ದೇಹಕ್ಕೆ ಸೇರುವ ಮುಂಚೆಯೇ ಚಿಂತನೆ ಮಾಡಬೇಕೆಂಬ ಸಲಹೆ ನೀಡಿದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಒಂದು ಕುಟುಂಬದಲ್ಲಿ ಒಬ್ಬ ವ್ಯಸನಿ ಇದ್ದರೆ, ಆ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಆರ್ಥಿಕ ಸಂಕಷ್ಟ, ಕೌಟುಂಬಿಕ ಕಲಹ, ಹಿಂಸೆ ಹೆಚ್ಚಾಗಿ ಸಂಬಂಧಗಳು ಮುರಿದು ಬೀಳುತ್ತವೆ. ಯಾವುದೇ ವ್ಯಸನಕ್ಕೆ ದಾಸನಾಗುವುದಿಲ್ಲ ಎಂದು ನಾವೆಲ್ಲರೂ ಶಪಥ ಮಾಡಬೇಕು. ಬೇರೆಯವರನ್ನು ವ್ಯಸನದಿಂದ ಮುಕ್ತಗೊಳಿಸಲು ಕೈಲಾದ ಸಹಾಯ ಮಾಡಬೇಕು ಎಂದರು.

ಮುರುಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನಮುಕ್ತ ದಿನಾಚರಣೆ ಆಚರಿಸುತ್ತಿದ್ದು, ಜೋಳಿಗೆ ಹಿಡಿದು ಜನಸಾಮಾನ್ಯರ ಕೆಟ್ಟ ಚಟ ಬಿಡಿಸುವಲ್ಲಿ ಸ್ವಾಮೀಜಿ ಪ್ರಮುಖ ಪಾತ್ರ ವಹಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಅವರ ಜನ್ಮದಿನವನ್ನು ವ್ಯಸನಮುಕ್ತ ದಿನಾಚರಣೆಯಾಗಿ ಆಚರಿಸುತ್ತಿದೆ. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡುವ ದಿನ ಇದಾಗಲಿ ಎಂದರು.

ಡಿಮಾನ್ಸ್‌ನ ಮನೋವೈದ್ಯಕೀಯ ವಿಭಾಗದ ಸಹ ಪ್ರಾದ್ಯಾಪಕ ಡಾ.ಮಂಜುನಾಥ ಭಜಂತ್ರಿ, ಟೆಲಿಮಾನಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ ಪಾಟೀಲ, ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಆರ್.ಎಂ. ತಿಮ್ಮಾಪೂರ ಇದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಮೇಘಮಾಲಾ ತಾವರಗಿ ನಿರೂಪಿಸಿದರು. ಸಹ ಪ್ರಾಧ್ಯಾಪಕ ಡಾ. ಶ್ರೀನಿವಾಸ ಕೊಸಗಿ ಸ್ವಾಗತಿಸಿದರು. ಅಶೋಕ ಕೋರಿ ವಂದಿಸಿದರು. ಗುರುಬಸವ ಮಹಾಂತ ಟ್ರಸ್ಟ್ ಅಧ್ಯಕ್ಷ ರಮೇಶ ತುಂಬರಗುದ್ದಿ, ಡಾ. ಮಹೇಶ ಎಂ. ವಿಶೇಷ ಉಪನ್ಯಾಸ ಮಂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''