ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳು, ಪ್ರೇರಕರು ಮತ್ತು ಸಂಘಟಕರ ಅಮೂಲ್ಯ ಕೊಡುಗೆಗಳನ್ನು ಗುರುತಿಸಲು ಮೀಸಲಾಗಿರುವ ವಿಶ್ವ ರಕ್ತದಾನಿಗಳ ದಿನವನ್ನು ಗುರುವಾರ ಆಚರಿಸಲಾಯಿತು.
ಎಂಜಿಎಂ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಮತ್ತು ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ ಉಪಸ್ಥಿತರಿದ್ದರು.ಅತ್ಯಧಿಕ ಸಂಖ್ಯೆಯ ರಕ್ತದಾನ ಶಿಬಿರಗಳ ಸಂಘಟಕರು, ಪ್ರೇರಕರು ಮತ್ತು ಸ್ವಯಂ ರಕ್ತದಾನ ಸೇವೆಗಾಗಿ 80ಕ್ಕಿಂತ ಹೆಚ್ಚು ಸಂಘ ಸಂಸ್ಥೆಗಳನ್ನು ಮತ್ತು ದಾನಿಗಳನ್ನು ಗೌರವಿಸಲಾಯಿತು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದ ಅತ್ಯುತ್ತಮ ತಾಂತ್ರಿಕ ಸಿಬ್ಬಂದಿ ಮತ್ತು ಅತ್ಯುತ್ತಮ ತಾಂತ್ರಿಕೇತರ ಸಿಬ್ಬಂದಿಗಳಿಗೆ ಡಾ. ಸತೀಶ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಪ್ರಶಸ್ತಿ ವಿತರಿಸಲಾಯಿತು.ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ವರ್ಣಚಿತ್ರವೊಂದನ್ನು ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಅನಾವರಣಗೊಳಿಸಲಾಯಿತು. ಸಮುದಾಯ ವೈದ್ಯಕೀಯ ವಿಭಾಗದ ಕಲಾವಿದ ಶ್ರೀನಾಥ್ ಮಣಿಪಾಲ್ ಈ ಕಲಾಕೃತಿ ರಚಿಸಿದ್ದರು.
ರಕ್ತಪೂರಣ ಔಷಧ ವಿಭಾಗದ ಪ್ರಾಧ್ಯಾಪಕಿ ಡಾ. ಶಮೀ ಶಾಸ್ತ್ರಿ ಸ್ವಾಗತಿಸಿ, ಕಾರ್ಯಕ್ರಮದ ಅವಲೋಕನ ನೀಡಿದರು. ರಕ್ತ ಕೇಂದ್ರ ಮತ್ತು ರಕ್ತಪೂರಣ ಔಷಧ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಮೋಹನ್ ವಂದಿಸಿದರು. ವಿಶ್ವೇಶ್ ಎನ್. ನಿರೂಪಿಸಿದರು.