ಕನ್ನಡಪ್ರಭ ವಾರ್ತೆ ಅಥಣಿ

ದೇಶದ ಎಲ್ಲ ಉನ್ನತ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠವಾದದ್ದು, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಶಿಕ್ಷಕ ಮತ್ತು ಶಿಕ್ಷಕಿಯರು ಸಮಾಜದಲ್ಲಿ ಗುರುವಿನ ಸ್ಥಾನ ಪಡೆದುಕೊಳ್ಳುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆ ಮತ್ತು ಗುರುವಿನ ಸ್ಥಾನಕ್ಕೆ ಅತ್ಯಂತ ಶ್ರೇಷ್ಠವಾದ ಗೌರವವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಹಾಗೂ ಸಂಸ್ಕೃತ ಚಿಂತಕ ಅರವಿಂದರಾವ ದೇಶಪಾಂಡೆ ಹೇಳಿದರು.

ಇಲ್ಲಿನ ರಾಘವೇಂದ್ರಸ್ವಾಮಿ ಕಲ್ಯಾಣ ಮಂಟಪದಲ್ಲಿ ನಿವೃತ್ತ ಶಿಕ್ಷಕಿ ಸರೋಜನಿ ಗೋಠೆ ಅಭಿನಂದನೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಥಣಿಯ ಇತಿಹಾಸದಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಜಾಧವಜೀ ಶಿಕ್ಷಣ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 39 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿ ಹೊಂದಿರುವ ಸರೋಜನಿ ನರಸಿಂಹಾಚಾರ್ಯ ಗೋಠೆ ಅವರ ಶೈಕ್ಷಣಿಕ ಸೇವೆ ಅನೇಕ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಸ್ಪೂರ್ತಿಯಾಗಿದೆ. ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಅನೇಕ ಶಿಕ್ಷಕರು ಮತ್ತು ಶಿಕ್ಷಕಿಯರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ಕುಂಬಾರ ಮಾಸ್ತರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರು ಮತ್ತು ಶಿಷ್ಯ ಪರಂಪರೆಗೆ ಬಹಳಷ್ಟು ಮಹತ್ವ ನೀಡಲಾಗಿದೆ. ನನ್ನ ಶಿಷ್ಯ ಸರೋಜನಿ ಗೋಠೆ ಗುರುಮಾತೆಯಾಗಿ ಅನೇಕ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ಕರುಣಿಸಿ ಇತ್ತೀಚೆಗೆ ನಿವೃತ್ತಿಯಾಗಿದ್ದು, ಅವರ ಸಮಾಜಮುಖಿ ಸೇವೆ, ಒಳ್ಳೆಯ ಮಾರ್ಗದರ್ಶನ ಸಮಾಜಕ್ಕೆ ಇನ್ನಷ್ಟು ದೊರಕಲಿ, ಅವರ ನಿವೃತ್ತಿಯ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಸರೋಜನಿ ಗೋಠೆ ಹಾಗೂ ವಾದಿರಾಜ ಜಂಬಗಿ ದಂಪತಿಗಳಿಗಹೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಲಾಯಿತು.


ಈ ಸಮಾರಂಭದಲ್ಲಿ ಎ.ಆರ್.ಕುಲಕರ್ಣಿ, ಡಾ.ಆರ್.ಜಿ.ಗುಡಿ, ಡಾ.ಪಿ.ಪಿ.ಮಿರಜ, ಸಂದೀಪ ಸಂಗೋರಾಮ, ಸುಹಾಸ್ ದಾತಾರ, ಆನಂದ ಜಂಬಗಿ, ಗುರುರಾಜ ಜಂಬಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮೋಹನ ಕುಲಕರ್ಣಿ ಸ್ವಾಗತಿಸಿದರು. ವೈಭವಿ ಕುಲಕರ್ಣಿ ನಿರೂಪಿಸಿದರು. ರಾಘವೇಂದ್ರ ಜಂಬಗಿ ವಂದಿಸಿದರು.