ಗಾಂಧಿ, ನೆಹರೂ, ಅಂಬೇಡ್ಕರ್‌ ಬಗ್ಗೆ ಜನಜಾಗೃತಿಯಾಗಲಿ: ಸಚಿವ ಸತೀಶ್‌ ಜಾರಕಿಹೊಳಿ

KannadaprabhaNewsNetwork | Published : Feb 19, 2025 12:46 AM

ಸಾರಾಂಶ

ಮಂಗಳೂರು ನೆಹರೂ ವಿಚಾರ ವೇದಿಕೆ ವತಿಯಿಂದ ಮಹಾತ್ಮ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಜವಾಹರಲಾಲ್‌ ನೆಹರು ಅವರ ಕುರಿತಾಗಿ ಸ್ವಾತಂತ್ರ್ಯ-ಸಂವಿಧಾನ-ದೂರದೃಷ್ಟಿ ವಿಷಯದಲ್ಲಿ ಉರ್ವಾಸ್ಟೋರ್‌ನ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ನಡೆದ ವಿಚಾರಗೋಷ್ಠಿಯನ್ನು ‘ಗಾಂಧಿ ಚಕ್ರ’ವನ್ನು ತಿರುಗಿಸುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬುದ್ಧ, ಬಸವಣ್ಣನವರ ತತ್ವಗಳು ಮನೆ ಮನೆಗಳಿಗೆ ತಲುಪಿರುವಂತೆ, ನೆಹರೂ, ಮಹಾತ್ಮ ಗಾಂಧಿ, ಬಿ.ಆರ್‌. ಅಂಬೇಡ್ಕರ್‌ರವರ ಚಿಂತನೆಗಳನ್ನು ತಲುಪಿಸಬೇಕಿದೆ. ಇದಕ್ಕಾಗಿ ಕಾರ್ನರ್‌, ಬೀದಿ ಸಭೆಗಳ ರೀತಿಯಲ್ಲಿ ಜನಜಾಗೃತಿಯನ್ನು ಮೂಡಿಸುವ ಕೆಲಸ ಆಗಬೇಕು ಎಂದು ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅಭಿಪ್ರಾಯಿಸಿದ್ದಾರೆ.ಮಂಗಳೂರು ನೆಹರೂ ವಿಚಾರ ವೇದಿಕೆ ವತಿಯಿಂದ ಮಹಾತ್ಮ ಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಜವಾಹರಲಾಲ್‌ ನೆಹರು ಅವರ ಕುರಿತಾಗಿ ಸ್ವಾತಂತ್ರ್ಯ-ಸಂವಿಧಾನ-ದೂರದೃಷ್ಟಿ ವಿಷಯದಲ್ಲಿ ಉರ್ವಾಸ್ಟೋರ್‌ನ ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ನಡೆದ ವಿಚಾರಗೋಷ್ಠಿಯನ್ನು ‘ಗಾಂಧಿ ಚಕ್ರ’ವನ್ನು ತಿರುಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಮಾತನಾಡಿ, ಗಾಂಧಿ, ನೆಹರೂ, ಅಂಬೇಡ್ಕರ್‌ರನ್ನು ಪ್ರಶ್ನಿಸುವವರನ್ನು ಪ್ರತಿಯಾಗಿ ಪ್ರಶ್ನಿಸಿ. ಗಾಂಧಿ, ನೆಹರೂ ಮತ್ತು ಅಂಬೇಡ್ಕರ್‌ ವಿರುದ್ಧ ಪ್ರಶ್ನೆಗಳನ್ನು ಎತ್ತುವ ಮೂಲಕ ಗೊಂದಲ ಸೃಷ್ಟಿಸಿ ನಮ್ಮ ಆಲೋಚನೆಗಳನ್ನು ನಿಲ್ಲಿಸುವ ಪ್ರಯತ್ನಗಳನ್ನು ಅತ್ಯಂತ ವ್ಯವಸ್ತಿತವಾಗಿ ನಡೆಸಲಾಗುತ್ತಿದ್ದು, ಇದಕ್ಕಾಗಿ ಆರೆಸ್ಸೆಸ್‌ ಹಾಗೂ ಬಿಜೆಪಿಯವರ ಪ್ರಶ್ನೆಗಳಿಗೆ ಪ್ರತಿ ಪ್ರಶ್ನೆಗಳನ್ನು ಕೇಳುವ ಕಾರ್ಯ ಆಗಬೇಕು ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ವಕ್ತಾರ ಮುನೀರ್‌ ಜನ್ಸಾಲೆ, ಮಾಜಿ ಸಚಿವ ಅಭಯಚಂದ್ರ ಜೈನ್‌, ಶಾಸಕ ಅಶೋಕ್‌ ಕುಮಾರ್‌ ರೈ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಮತ್ತಿತರರು ಇದ್ದರು.

ಸತೀಶ್‌ ಅರಳ ಅವರ ಸಂವಿಧಾನ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯ ಅಧ್ಯಕ್ಷ ನವೀನ್‌ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇತನ್‌ ಕಾರ್ಯಕ್ರಮ ನಿರೂಪಿಸಿದರು.

...................

ಸಂವಿಧಾನವೇ ಕಾಂಗ್ರೆಸ್‌ ಪಕ್ಷದ ಸಿದ್ಧಾತ ಎಂದು ಎದೆತಟ್ಟಿ ಹೇಳಿ

ಭಾರತದಲ್ಲಿ ಸಂವಿಧಾನ ಅನುಷ್ಟಾನಕ್ಕೆ ಬಂದಿದ್ದರೆ ಅದಕ್ಕೆ ಕಾಂಗ್ರೆಸ್‌ ಕಾರಣ. ಆದ್ದರಿಂದ ಸಂವಿಧಾನವೇ ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಎಂಬುದನ್ನು ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಎದೆತಟ್ಟಿ ಹೇಳಬೇಕು ಮತ್ತು ಅದನ್ನು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಅಂಬೇಡ್ಕರ್‌ ಮತ್ತು ಸಂವಿಧಾನ ವಿಷಯದ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಕಾಂಗ್ರೆಸಿಗರಿಗೆ ಸಲಹೆ ನೀಡಿದರು.

ಸಂವಿಧಾನ ರಚನೆಯ 75 ವರ್ಷಗಳ ನಂತರ ಸಂವಿಧಾನ ರಕ್ಷಣೆಯ ವಿಚಾರದಲ್ಲಿ ಮಾತನಾಡುತ್ತಿರಲು ಏನು ಕಾರಣ ಎಂಬ ಬಗ್ಗೆ ನಾವು ಅರ್ಥ ಮಾಡಿಕೊಳ್ಳಬೇಕು. ಒಂದು ಸಿದ್ಧಾಂತವನ್ನು ಎದುರಿಸಲು ಅಥವಾ ಸೋಲಿಸಲು ಇನ್ನೊಂದು ಸಿದ್ಧಾಂತವನ್ನು ಹುಟ್ಟು ಹಾಕಬೇಕು. ಅದು ಕತ್ತಿ, ತ್ರಿಶೂಲಗಳಿಂದ ಆಗುವುದಿಲ್ಲ ಎಂದು ದಿನೇಶ್‌ ಅಮೀನ್‌ ಮಟ್ಟು ಹೇಳಿದರು.

.

Share this article