ಪಂಚ ಗ್ಯಾರಂಟಿ ಸಮರ್ಪಕವಾಗಿ ತಲುಪಿಸೋಣ: ಎಸ್.ಆರ್. ಮೆಹರೋಜ್ ಖಾನ್

KannadaprabhaNewsNetwork |  
Published : Aug 05, 2025, 11:47 PM IST
ಹೊಸಪೇಟೆಯ ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿ ಸಮಾಲೋಚನ ಸಭೆಯಲ್ಲಿ ಎಸ್.ಆರ್. ಮೆಹರೋಜ್ ಖಾನ್ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ, ಬಡವರ್ಗದ ಅರ್ಹ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ, ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಮಾಡಬೇಕು.

ಹೊಸಪೇಟೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಮಾಲೋಚನೆ ಸಭೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ, ಬಡವರ್ಗದ ಅರ್ಹ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ, ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಮಾಡಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಸರ್ಕಾರ ಮತ್ತು ಅಧಿಕಾರಿಗಳ ವರ್ಗ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದೆ. ಆದರೆ ಗ್ರಾಮೀಣ ಭಾಗದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿಂದ ಅರ್ಹ ಫಲಾನುಭವಿಗಳು ಯೋಜನೆಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದರೆ ಅಂತಹ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲು ಸಮಿತಿ ಸದಸ್ಯರು ಕಾರ್ಯೋನ್ಮುಖರಾಗಬೇಕಿದೆ ಎಂದರು.

ಕೌಶಲ್ಯಾಧಾರಿತ ತರಬೇತಿ:

ವಿಶೇಷವಾಗಿ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಲ್ಲಿ 8007 ಯುವಕರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ವಿಜಯನಗರ ಜಿಲ್ಲೆಯಿಂದಲೇ ಯುವನಿಧಿ ಫಲಾನುಭವಿಗಳಿಗೆ ಕೌಶಲ್ಯಾಧಾರಿತ ತರಬೇತಿ ನೀಡಲು ಜಿಲ್ಲಾ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳಲಾಗುವುದು. ಬಹುತೇಕ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳ ಅಗತ್ಯವಿದೆ. ಅಂತಹ ಕಂಪನಿಗಳಿಗೆ ಇಲ್ಲಿನ ಯುವಕರಿಗೆ ಉದ್ಯೋಗ ಕಲ್ಪಿಸುವ ಭರವಸೆ ಮೂಡಿಸುವ ನಿಟ್ಟಿನಲ್ಲಿ ಜಿಪಂ ಮತ್ತು ತಾಪಂ ಸಹಯೋಗದಲ್ಲಿ ವಿಶೇಷ ಕಾರ್ಯಾಗಾರ ಏರ್ಪಡಿಸಲು ಸಿದ್ಧತೆ ಕೈಗೊಂಡಿದ್ದೇವೆ ಎಂದರು.

ಸಮಿತಿ ಸದಸ್ಯ ಪರಶುರಾಮ ಮಾತನಾಡಿ, ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿಯಿಂದ ಗ್ರಾಪಂ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಸಮಸ್ಯೆ ಆಲಿಸುತ್ತಿದ್ದೇವೆ. ಶಕ್ತಿ ಯೋಜನೆ ಮೂಲಕ ಸಮಸ್ಯೆಗಳಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ವೇಳೆಗೆ ಬಸ್‌ಗಳ ಕೊರತೆ ನೀಗಿಸಲಾಗಿದೆ. ಹಗರಿಬೊಮ್ಮನಹಳ್ಳಿ ಡಿಪೋದಲ್ಲಿ ಸುಮಾರು 27 ಚಾಲಕ ಕಂ ನಿರ್ವಾಹಕರ ಸಿಬ್ಬಂದಿ ಕೊರತೆಯಿದೆ. 15 ಬಸ್‌ಗಳ ಅಗತ್ಯವಿದೆ ಎಂದು ತಿಳಿದುಬಂದಿದೆ ಎಂದರು.

ಇದಕ್ಕೆ ಸದಸ್ಯೆ ಭಾಗ್ಯಲಕ್ಷ್ಮೀ ಭರಾಡೆ ಧ್ವನಿಗೂಡಿಸಿದರು. ವಿಭಾಗೀಯ ಸಂಚಾರ ಅಧಿಕಾರಿ ರಾಜಶೇಖರ್ ವಾಜಂತ್ರಿ ಪ್ರತಿಕ್ರಿಯಿಸಿ, ಬಸ್ ನಿಲ್ದಾಣದಲ್ಲಿನ ಸಮಸ್ಯೆ ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಸದಸ್ಯರಾದ ಗಿರೀಶ್ ಗೌರಜ್ಜನವರ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯಲ್ಲಿ ಮರಣ ಹೊಂದಿದ ಫಲಾನುಭವಿಗಳ ಖಾತೆಯಲ್ಲಿರುವ ಹಣವನ್ನು ನಾಮಿನಿಗಳಿಗೆ ನೀಡಲು ಬ್ಯಾಂಕ್‌ನವರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಜಿಪಂ ಸಿಇಒ ಅವರು ಬ್ಯಾಂಕ್‌ಗಳಿಗೆ ನಿಯಮಾನುಸಾರ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ಜಿಪಂ ಸಿಇಒ ಅಕ್ರಮ್ ಶಾ ಮಾತನಾಡಿ, ಬ್ಯಾಂಕಿನ ಸಮಸ್ಯೆಗಳಿಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗುವುದು. ಆಹಾರ ಇಲಾಖೆಯಲ್ಲಿ ಹೊಸ ಪಡಿತರ ಅರ್ಜಿಗೆ ಅವಕಾಶ ನೀಡಿಲ್ಲ. ಈಗಾಗಲೇ ಶೇ. 90ರಷ್ಟು ಪಡಿತರ ನೋಂದಣಿ ಕಾರ್ಯವಾಗಿದೆ. ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸೇವೆಗಳಿಗೆ ಆದ್ಯತೆ ನೀಡಿ ರೇಷನ್ ಕಾರ್ಡ್‌ಗಳಲ್ಲಿ ಸೇರಿಸುವ ಪ್ರಕ್ರಿಯೆ ನಿರಂತರವಾಗಿ ಅವಕಾಶ ನೀಡಲಾಗಿದೆ ಎಂದರು.

ಜಿಲ್ಲಾ ಮಟ್ಟದ ಪ್ರಾಧಿಕಾರದ ಉಪಾಧ್ಯಕ್ಷ ಕೆ. ಬಡಾವಲಿ, ಕೆ.ಎಸ್. ಶಾಂತನಗೌಡ, ಎಚ್. ಜಂದಿಸಾಹೇಬ್ ಸದಸ್ಯರಾದ ಎಸ್. ಯರ‍್ರಿಸ್ವಾಮಿ, ಡಿ. ವೆಂಕಟರಮಣ, ಪ್ರಭಾಕರ, ಶೇಕ್ ಮಹಮ್ಮದ್ ಜಿಲಾನ್, ಸೊನ್ನದ ಗುರುಬಸವರಾಜ, ದೇವರಾಜ ಪಿ.ಎಚ್., ಪರಶುರಾಮ, ಗೌರಜ್ಜನವರ್ ಗಿರೀಶ, ಜಿಪಂ ಯೋಜನಾಧಿಕಾರಿ ಜೆ.ಎಂ. ಅನ್ನದಾನಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಿಯಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ವೇತಾ, ಹೊಸಪೇಟೆ ವಿಭಾಗದ ಕೆಕೆಆರ್‌ಟಿಸಿ ಅಧಿಕಾರಿ ರಾಜಶೇಖರ್, ಜೆಸ್ಕಾಂ ಕಾರ್ಯಪಾಲಕ ಅಭಿಯಂತರ ಸತೀಶ್ ಕುಮಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ