ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಗವಾನ್ ಬುದ್ಧ, ಜಗಜ್ಯೋತಿ ಬಸವೇಶ್ವರ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರು ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾಚೇತನರು ಎಂದು ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ.ಆರ್.ರಾಜು ಅಭಿಪ್ರಾಯಪಟ್ಟರು.ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕರ್ನಾಟಕ ಸೇನಾಪಡೆ ರಾಜ್ಯ ಘಟಕದ ವತಿಯಿಂದ ನಡೆದ ಜಗಜ್ಯೋತಿ ಬಸವೇಶ್ವರ, ಡಾ ಬಿ.ಆರ್.ಅಂಬೇಡ್ಕರ್, ಹಾಗೂ ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಗವಾನ್ ಬುದ್ದ, ಜಗಜ್ಯೋತಿ ಬಸವೇಶ್ವರ ಸಮಸಮಾಜ ಸಮಾನತೆಗಾಗಿ ಶ್ರಮಿಸಿದರು. ಅವರ ಪರಿಕಲ್ಪನೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿ ಕಾನೂನಾಗಿ ಜಾರಿ ಮಾಡುವ ಮೂಲಕ ಸರ್ವರಿಗೂ ಸಮಾನತೆ ನೀಡಿದ್ದಾರೆ. ಅದೇ ರೀತಿಯಲ್ಲಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರು ದೇಶದ ಕೃಷಿ ಸಚಿವರಾಗಿದ್ದು ಹಸಿರುಕ್ರಾಂತಿ ಮಾಡಿ ದೇಶದಲ್ಲಿ ಹೆಚ್ಚು ಆಹಾರ ಉತ್ಪಾದನೆ ಮಾಡುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಾಲ್ವರು ಮಹಾಚೇತನರು ಹಾಕಿಕೊಟ್ಟ ಸಮಸಮಾಜದ ಭದ್ರ ಬುನಾದಿ ಮೇಲೆ ನಾವೆಲ್ಲರೂ ಫಲ ಅನುಭವಿಸುತ್ತಿದ್ದೇವೆ. ಅವರ ಆದರ್ಶಗಳನ್ನು ನಾವು ಮೈಗೂಡಿಸಿಗೊಂಡು ಸಾಗಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹರವೆ ವಿರಕ್ತದ ಶ್ರೀಸರ್ಪಭೂಷಣಸ್ವಾಮಿ ಮಾತನಾಡಿ, ಬಸವೇಶ್ವರರು, ಅಂಬೇಡ್ಕರ್‌ರು, ಬಾಬು ಜಗಜೀವನರಾಂ ಈ ಮೂವರು ಮಹಾಚೇತನರು. ನಮ್ಮನೆಲ್ಲ ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ದಿದು ಸಮಾನತೆಗಾಗಿ ಶ್ರಮಿಸಿದ್ದಾರೆ ಎಂದರು.
ಪ್ರತಿಭಾ ಪುರಸ್ಕಾರ : ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸರ್ಕಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಪ್ರಸನ್ನ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಪುಷ್ಷಾರ್ಚನೆ ಮಾಡಿದರು. ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್ ವಿಚಾರ ಮಂಡಿಸಿದರು. ಕನ್ನಡ ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ನಗರಸಭಾ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್‌ನಾಯಕ, ಮಾಜಿ ಸದಸ್ಯರಾದ ಮಹಮ್ಮದ್ ಅಸ್ಗರ್, ಸಿ.ಕೆ.ಮಂಜುನಾಥ್, ಸಾಮಾಜಿಕ ನ್ಯಾಯ ವೇದಿಕೆ ಕೇಂದ್ರ ಸಮಿತಿ ಸದಸ್ಯ ಕೆ.ಜಗದೀಶ್, ಗು.ಪುರುಷೋತ್ತಮ್, ಕನ್ನಡ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಋಗ್ವೇದಿ, ನಿಜಧ್ವನಿಗೋವಿಂದರಾಜು ಇತರರು ಹಾಜರಿದ್ದರು.