ಭವಿಷ್ಯದ ಪೀಳಿಗೆಗೆ ಉಡುಗೊರೆಯಾಗಿ ಕನ್ನಡತನ ನೀಡೋಣ

KannadaprabhaNewsNetwork | Published : Nov 30, 2024 12:50 AM

ಸಾರಾಂಶ

ದಾವಣಗೆರೆ ಇದೀಗ ಸಿಮೆಂಟ್ ರಸ್ತೆಗಳಾಗಿ ನಗರ ಧೂಳುಮುಕ್ತ ನಗರವಾಗಿದೆ. ಹಸಿರು ದಾವಣಗೆರೆ ರೂಪಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡುಗಳಲ್ಲಿ ಪಾಲಿಕೆ ಸದಸ್ಯರು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಮಹಾಪೌರ ಕೆ.ಚಮನ್ ಸಾಬ್ ಮತ್ತು ಪಾಲಿಕೆ ಮಹಿಳಾ ಸದಸ್ಯರು, ಪ್ರತಿಪಕ್ಷದ ಸದಸ್ಯರೆಲ್ಲ ಸೇರಿ ಸರ್ವಜನಾಂಗದ ಶಾಂತಿಯ ತೋಟದ ರೀತಿಯಲ್ಲಿ ಕೆಲಸ ಮಾಡೋಣ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಪಾಲಿಕೆ ರಂಗಮಂದಿರದಲ್ಲಿ ರಾಜ್ಯೋತ್ಸವ 2ನೇ ದಿನದ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಆಶಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಇದೀಗ ಸಿಮೆಂಟ್ ರಸ್ತೆಗಳಾಗಿ ನಗರ ಧೂಳುಮುಕ್ತ ನಗರವಾಗಿದೆ. ಹಸಿರು ದಾವಣಗೆರೆ ರೂಪಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡುಗಳಲ್ಲಿ ಪಾಲಿಕೆ ಸದಸ್ಯರು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಮಹಾಪೌರ ಕೆ.ಚಮನ್ ಸಾಬ್ ಮತ್ತು ಪಾಲಿಕೆ ಮಹಿಳಾ ಸದಸ್ಯರು, ಪ್ರತಿಪಕ್ಷದ ಸದಸ್ಯರೆಲ್ಲ ಸೇರಿ ಸರ್ವಜನಾಂಗದ ಶಾಂತಿಯ ತೋಟದ ರೀತಿಯಲ್ಲಿ ಕೆಲಸ ಮಾಡೋಣ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಮಹಾನಗರ ಪಾಲಿಕೆ ರಂಗಮಂದಿರದಲ್ಲಿ ಶುಕ್ರವಾರ ಸಂಜೆ ದಾವಣಗೆರೆ ಮಹಾನಗರ ಪಾಲಿಕೆ, ಕನ್ನಡಪರ ಸಂಘಟನೆಗಳು, ಪತ್ರಕರ್ತರ ಸಹಯೋಗದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಸಿರು ದಾವಣಗೆರೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ಶ್ರಮಿಸಬೇಕಿದೆ. ಇಡೀ ಜಿಲ್ಲೆಯಲ್ಲಿ ಭಾಷೆ ಮತ್ತು ವಿಚಾರ, ಆಚಾರದಲ್ಲಿ ಕನ್ನಡತನ ಇರಲಿ. ಇದನ್ನು ಭವಿಷ್ಯದ ಪೀಳಿಗೆಗೆ ಉಡುಗೊರೆಯಾಗಿ ನೀಡೋಣ ಎಂದರು.

ರಾಜ್ಯದ 10 ಮಹಾನಗರ ಪಾಲಿಕೆಗಳ ಪೈಕಿ ದಾವಣಗೆರೆಯಲ್ಲಿ ಮಾತ್ರ ₹50 ಲಕ್ಷ ವೆಚ್ಚದಲ್ಲಿ 3 ದಿನಗಳ ಕಾಲ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಇದು ಕನ್ನಡಿಗರ ಅಭಿಮಾನವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪಾಲಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸನ್ಮಾನ ಸ್ವೀಕರಿಸಿದ ನೀವುಗಳು ದಾವಣಗೆರೆ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಿ ಎಂದು ಸನ್ಮಾನಿತರಿಗೆ ಮನವಿ ಮಾಡಿದರು.

ರಾಜ್ಯ ಸರ್ಕಾರ ಕನ್ನಡ ಪರವಾದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಎಲ್ಲ ಜಿಲ್ಲೆಗಳಲ್ಲಿ ಕನ್ನಡದ ಪ್ರಥಮ ಶಾಸಕ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮುಂದಿನ ತಿಂಗಳು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ₹30 ಕೋಟಿ ಅನುದಾನ ನೀಡಿದೆ. ಶೇ.60ರಷ್ಟು ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡಿದೆ ಎಂದರು.

ಶಾಯರಿ ಕವಿ ಅಸಾದುಲ್ಲಾ ಬೇಗ್ ತಮ್ಮ ಶಾಯರಿಗಳ ಮೂಲಕ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ, ಆಯುಕ್ತೆ ರೇಣುಕಾ, ಮೇಯರ್ ಕೆ.ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಟಿವಿ-9 ವರದಿಗಾರ ಬಸವರಾಜ ದೊಡ್ಮನಿ, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಪಾಲಿಕೆ ಸದಸ್ಯರಾದ ಸುಧಾ ಇಟ್ಟಿಗುಡಿ, ಎ.ನಾಗರಾಜ, ವಿನಾಯಕ ಪೈಲ್ವಾನ್, ಎಸ್.ಟಿ.ವೀರೇಶ್, ಜಯಮ್ಮ ಗೋಪಿನಾಯ್ಕ, ಸವಿತಾ ಗಣೇಶ ಹುಲ್ಮನಿ, ಆಶಾ ಉಮೇಶ್, ಗಡಿಗುಡಾಳ ಮಂಜುನಾಥ, ಗೋಣೆಪ್ಪ, ಎಲ್‌ಎಂಎಚ್ ಸಾಗರ್, ಸುರಭಿ ಶಿವಮೂರ್ತಿ, ಕರವೇ ರಾಜ್ಯಾಧ್ಯಕ್ಷ ಎಂ.ಎಸ್.ರಾಮೇಗೌಡ ಇತರರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಯಿತು.

ಅನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್, ಉಪ ಮೇಯರ್, ಸದಸ್ಯರು ಹಾಡಿಗೆ ಹೆಜ್ಜೆ ಹಾಕಿದರು.

- - -

ಬಾಕ್ಸ್‌ * ಡಿಆರ್‌ಎಂ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ: ಬಿಆರ್‌ಎಲ್‌ ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ವಿಶೇಷ ಉಪನ್ಯಾಸ ನೀಡಿ, ಒಬ್ಬ ಕವಿ ನಿಜವಾಗಲೂ ಧನ್ಯನಾಗುವುದು ಆತನ ಕವಿತೆ ಜನಪದ, ಜನರ ಗೀತೆಯಾದಾಗ ಮಾತ್ರ. ನನ್ನ 100ಕ್ಕೂ ಹೆಚ್ಚು ಕವಿತೆಗಳಿಗೆ ಸಿ.ಅಶ್ವಥ್ ಸಂಗೀತ ನೀಡಿದ್ದಾರೆ. ದಾವಣಗೆರೆ ಕಂಡರೆ ನನಗೆ ಅತ್ಯಂತ ಪ್ರೀತಿ. ಕಳೆದ 60 ವರ್ಷಗಳ ಹಿಂದೆ ದಾವಣಗೆರೆಯ ಡಿಆರ್‌ಎಂ ಕಾಲೇಜಿನಲ್ಲಿ ನಾನು ಪಿಯುಸಿ ವಿದ್ಯಾರ್ಥಿಯಾಗಿದ್ದೆ. ಓದಿದ ನೆಲದಲ್ಲಿ ಸನ್ಮಾನ ಪಡೆಯುತ್ತಿರುವುದಕ್ಕೆ ಬಹಳ ಖುಷಿಯಾಗಿದೆ ಎಂದರು.

- - - -29ಕೆಡಿವಿಜಿ47, 48:

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಮೇಯರ್ ಕೆ.ಚಮನ್‌ಸಾಬ್, ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಇತರರು ಇದ್ದರು.

-29ಕೆಡಿವಿಜಿ49:

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್, ಉಪ ಮೇಯರ್, ಸದಸ್ಯರು ಹಾಡಿಗೆ ಹೆಜ್ಜೆ ಹಾಕಿದರು.

Share this article