ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪಾಕಿಸ್ತಾನ ವಿರುದ್ಧ ಯುದ್ಧ ಅನಿವಾರ್ಯ ಆದರೆ ಯುದ್ಧ ಮಾಡಲಿ, ಆದರೆ ಭಯೋತ್ಪಾದನೆ ನಿರ್ಮೂಲನೆ ಮಾಡಬೇಕು, ಇದನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಕೂಡಲಸಂಗಮ ಹೆಲಿಪ್ಯಾಡ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯುದ್ಧದ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚೆ ವಿಚಾರ ಪ್ರಸ್ತಾಪಿಸಿದ ಅವರು, ಎಲ್ಲರಿಗೂ ಭದ್ರತೆ ಕೊಡಬೇಕು, ನಾನು ಯುದ್ಧ ಮಾಡಬೇಡಿ ಅಂತ ಹೇಳಿಲ್ಲ, ಯುದ್ಧ ಮಾಡೋದಾದ್ರೆ ಮಾಡಿ, ಭಯೋತ್ಪಾದನೆ ನಾಶ ಮಾಡಿ, ಇಂದಿರಾ ಗಾಂಧಿ ಯುದ್ಧ ಮಾಡಿ ಪಾಕಿಸ್ತಾನ ಬಗ್ಗು ಬಡಿದಿದ್ರು, 80 ಸಾವಿರ ಜನ ಪಾಕ್ ಸೈನಿಕರು ಭಾರತಕ್ಕೆ ಶರಣಾಗತರಾಗಿದ್ದರು ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಮೋದಿ ರುಂಡವಿಲ್ಲದ ಫೋಟೋ ಹಾಕಿದ್ದರ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು ಸೋಸಿಯಲ್ ಮಿಡಿಯಾದಲ್ಲಿ ಈ ರೀತಿ ಯಾರೂ ಮಾಡಲಿಕ್ಕೆ ಹೋಗಬಾರದು, ಮೋದಿಯವ್ರದಾಗಲಿ, ಇನ್ಯಾರದೇ ಕೂಡ ಮಾಡಬಾರದು, ವಾಕ್, ಸಾಮಾಜಿಕ ಸ್ವಾತಂತ್ರ್ಯ ಇದೆ ಅಂತೇಳಿ ಏನೆಲ್ಲ ಮಾಡಕ್ಕಾಗಲ್ಲ ಎಂದು ಹೇಳಿದರು.ಕೇಂದ್ರ ಸರ್ಕಾರ ಸಹ ಜಾತಿ ಜನಗಣತಿಗೆ ತೀರ್ಮಾನ ಮಾಡಿರುವ ಬಗ್ಗೆ ಕೂಡಲಸಂಗಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿದ್ದೇವು, ಸಾಮಾಜಿಕ, ಆರ್ಥಿಕ, ಜಾತಿ ಜನಗಣತಿ ಮಾಡ್ತೇವೆ ಎಂದು, ಅವರು ಯಾವ ಜನಗಣತಿ ಮಾಡ್ತಾರೆ ಅಂತ, ಅವರು ಸಾಮಾಜಿಕ ಜನಗಣತಿ ಮಾಡ್ತಾರಾ? ಆರ್ಥಿಕ ಜನಗಣತಿ ಮಾಡ್ತಾರಾ? ಅಥವಾ ಜಾತಿ ಜನಗಣತಿ ಮಾಡ್ತಾರಾ ನನಗೆ ಗೊತ್ತಿಲ್ಲ, ನೋಡಿಕೊಂಡು ಪ್ರತಿಕ್ರಿಯಿಸುತ್ತೇನೆ. ಈಗಿನದು ಕೇವಲ ಜಾತಿ ಗಣತಿ, ಜನಗಣತಿ ಮಾಡ್ತೀವಿ ಅಂದಿದ್ದಾರೆ, ಸಾಮಾಜಿಕ, ಆರ್ಥಿಕ ಸರ್ವೇ ಬಹಳ ಮುಖ್ಯ. ಸಾಮಾಜಿಕ ನ್ಯಾಯ ಕೊಡಬೇಕಾದರೆ, ಸಾಮಾಜಿಕ, ಆರ್ಥಿಕ ಸರ್ವೆ ಮಾಡಬೇಕಾಗುತ್ತದೆ ಎಂದ ಸಿಎಂ, ರಾಜ್ಯದಲ್ಲಿ ಜಾತಿಗಣತಿ ಮಾಡಿರೋದನ್ನು ಸಂಪುಟದಲ್ಲಿ ಮಂಡಿಸಿದ್ದೇವೆ, ಎಲ್ಲ ಸಚಿವರಿಗೆ ಒಪ್ಪಿಗೆ ಕೊಡಿ ಎಂದು ಹೇಳಿದ್ದೇನೆ, ಅವರು ಒಪ್ಪಿಗೆ ಕೊಟ್ಟ ಮೇಲೆ ಮತ್ತೆ ಕ್ಯಾಬಿನೆಟ್ ಮುಂದೆ ತಗೊಂಡು ಚರ್ಚೆ ಮಾಡ್ತೀನಿ ಎಂದು ಸಿಎಂ ತಿಳಿಸಿದರು.