ಕನ್ನಡಪ್ರಭ ವಾರ್ತೆ ಗೋಕಾಕ
ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಸುಮಾರು ₹40 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಅಶ್ವರೂಢ ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣ ಮಾಡಿ ಮಾತನಾಡಿದ ಅವರು, ಪ್ರತಿಮೆಯು ಅತ್ಯಂತ ಸುಂದರವಾಗಿದೆ. ಭಕ್ತರನ್ನು ಕೈ ಬಿಸಿ ಕರೆಯುವಂತಿದೆ. ಗ್ರಾಮದ ಬಸ್ ನಿಲ್ದಾಣ ಬಳಿ ನಿರ್ಮಿಸಿರುವ ಬಸವೇಶ್ವರ ಪ್ರತಿಮೆಯು ಇಂದು ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿ ನಿಂತಿದೆ ಎಂದು ಅವರು ಗ್ರಾಮಸ್ಥರ ಸಮಾಜ ಮುಖಿ ಕೆಲಸವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಸಾಮಾಜಿಕ ನ್ಯಾಯ ಜಾರಿಗೆ ತಂದು ಸರ್ವರಿಗೂ ಸಮಪಾಲು ನೀಡಿದರು. ಎಲ್ಲ ಜಾತಿ- ಜನಾಂಗಗಳನ್ನು ಒಂದುಗೂಡಿಸುವ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಮಹಾನ್ ಚೇತನವಾಗಿರುವ ಬಸವಣ್ಣನವರ ಕಂಚಿನ ಪ್ರತಿಮೆ ಉದ್ಘಾಟಿಸುವ ಅವಕಾಶ ಒದಗಿ ಬಂದಿರುವುದು ನನ್ನ ಪುಣ್ಯವಾಗಿದೆ. ಅದೂ ಬಸವಣ್ಣನವರ 892ನೇ ಜಯಂತಿಯಂದು ಈ ಕಾರ್ಯಕ್ರಮ ನಡೆಯುತ್ತಿರುವುದು ಮತ್ತಷ್ಟು ಖುಷಿ ತಂದಿರುವ ವಿಚಾರವಾಗಿದೆ ಎಂದರು.
ಬಸವೇಶ್ವರ ಕಂಚಿನ ಪ್ರತಿಮೆ ನಿರ್ಮಿಸುವಲ್ಲಿ ಗ್ರಾಮಸ್ಥರು ಸಾರ್ವಜನಿಕ ವಂತಿಗೆ ಮೂಲಕ ಹಣ ಸಂಗ್ರಹಿಸಿದ್ದಾರೆ. ಅಂದಾಜು ₹40 ಲಕ್ಷ ಈ ಪ್ರತಿಮೆ ಸ್ಥಾಪನೆಗೆ ಖರ್ಚು ಆಗಿದ್ದು ಸುಂದರವಾಗಿ ನಿರ್ಮಾಣಗೊಂಡಿದೆ. ಅದಕ್ಕಾಗಿ ಗ್ರಾಮಸ್ಥರನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆಂದರು.ಬಸವಣ್ಣ ಅಂಥವರನ್ನು ನೆನೆಸುವುದು ಪ್ರತಿಯೊಬ್ಬ ಕನ್ನಡಿಗರ ಹಾಗೂ ಭಾರತೀಯನ ಕರ್ತವ್ಯ. ಬಸವಣ್ಣ ವಿಶ್ವ ಗುರುಗಳಾಗಿದ್ದು, ಅವರು ಕೇವಲ ಸಾಮಾಜಿಕ ಕ್ರಾಂತಿ ಮಾಡಿದವರಲ್ಲ, ಸಮಾಜದ ಪರಿವರ್ತನೆಗೆ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸುವ, ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಕೆಲಸವನ್ನು ಬಸವಣ್ಣ ತಮ್ಮ ಜೀವಿತ ಕಾಲದಲ್ಲಿ ಮಾಡಿದ್ದಾರೆ. ಹೀಗಾಗಿ ಅವರು ಸದಾ ಸ್ಮರಣೀಯರು ಎಂದರು. ಬಸವಣ್ಣ ಬರೆದ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ರತ್ನಗಳು. ಸರಳ ಭಾಷೆಯಲ್ಲಿ, ಆಳವಾದ ತತ್ವ ಹೇಳುವ ವಚನಗಳಾಗಿವೆ. ಮಾತ್ರವಲ್ಲದೆ ಎಲ್ಲಾ ವರ್ಗದ ಜನರಿಗೂ ಮನಮುಟ್ಟುತ್ತವೆ. ಸಮಾಜದಲ್ಲಿನ ಮೂಢನಂಬಿಕೆಯನ್ನು ಅವರು ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದ ಮಹಾಪುಷರು. ಹೀಗಾಗಿ ಇಂದಿಗೂ ಅವರು ತಮ್ಮ ಜೀವಂತಿಕೆಯನ್ನು ಜನರು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಲು ಇದೆ ಕಾರಣವಾಗಿದೆ ಎಂದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಇದೇ ಸಂದರ್ಭದಲ್ಲಿ ಮುಖಂಡರು ಸತ್ಕರಿಸಿದರು. ಗೋಕಾಕ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಸುಭಾ? ಪಾಟೀಲ, ತಹಸಿಲ್ದಾರ್ ಡಾ. ಮೋಹನ್ ಭಸ್ಮೇ, ಮುಖಂಡರಾದ ಬಸವರಾಜ್ ಕೋಟಗಿ, ಮುತ್ತೆಪ್ಪ ಕುಳ್ಳೂರ, ಪ್ರಧಾನಿ ಕಳಸಣ್ಣವರ, ಸುನೀಲ್ ಈರೇಶಣ್ಣವರ, ಮಲ್ಲಪ್ಪ ಕಳಸಣ್ಣವರ, ಶ್ರೀಶೈಲ ಬೆಳವಿ, ಚಿದಾನಂದ ಹುಬ್ಬಳ್ಳಿ, ರಾಮಲಿಂಗ ಬೆನವಾಡ, ರಾಘವೇಂದ್ರ ದಪದರ, ಪ್ರಕಾಶ್ ಕಳಸಣ್ಣವರ, ಸಿದ್ಧಾರೂಢ ಹಿಡಕಲ್, ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಾಲಚಂದ್ರ ಜಾರಕಿಹೊಳಿ, ಶಾಸಕರು