ಹುಬ್ಬಳ್ಳಿಯಲ್ಲಿ ಇಂದಿನಿಂದ ಮೂರು ದಿನ ಕರಾವಳಿ ಉತ್ಸವ

KannadaprabhaNewsNetwork | Published : May 1, 2025 12:48 AM

ಸಾರಾಂಶ

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಹಾಗೂ ಇನ್ನರ್ ವೀಲ್ ಕ್ಲಬ್ ಮಿಡ್‌ಟೌನ್ ಆಶ್ರಯದಲ್ಲಿ ಮೇ 1ರಿಂದ 3ರ ವರೆಗೆ ಇಲ್ಲಿನ ಹೊಸ ಕೋರ್ಟ್‌ ಹಿಂಭಾಗದಲ್ಲಿರುವ ಕಲ್ಲೂರ ಲೇ ಔಟ್ ಮೈದಾನದಲ್ಲಿ ವಸ್ತು ಪ್ರದರ್ಶನ, ಮಾರಾಟ ಮೇಳ, ಕರಾವಳಿ ಉತ್ಸವವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಹಾಗೂ ಇನ್ನರ್ ವೀಲ್ ಕ್ಲಬ್ ಮಿಡ್‌ಟೌನ್ ಆಶ್ರಯದಲ್ಲಿ ಮೇ 1ರಿಂದ 3ರ ವರೆಗೆ ಇಲ್ಲಿನ ಹೊಸ ಕೋರ್ಟ್‌ ಹಿಂಭಾಗದಲ್ಲಿರುವ ಕಲ್ಲೂರ ಲೇ ಔಟ್ ಮೈದಾನದಲ್ಲಿ ವಸ್ತು ಪ್ರದರ್ಶನ, ಮಾರಾಟ ಮೇಳ, ಕರಾವಳಿ ಉತ್ಸವವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 1ರಂದು ಸಂಜೆ 5ಕ್ಕೆ ಸ್ಪೀಕರ್‌ ಯು.ಟಿ. ಖಾದರ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಸಂತೋಷ ಲಾಡ್, ವಿಪ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಜಗದೀಶ ಶೆಟ್ಟರ್ ಹಾಗೂ ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್ ಸೇರಿದಂತೆ ಅನೇಕರು ಭಾಗಹಿಸುವರು ಎಂದರು.

ಇನ್ನರ್‌ವ್ಹೀಲ್‌ ಅಧ್ಯಕ್ಷೆ ಶಿಲ್ಪಾ ಶೆಟ್ಟಿ ಮಾತನಾಡಿ, ಉತ್ಸವದಲ್ಲಿ ಆಹಾರ ಮಳಿಗೆ, ಸಿದ್ಧ ಉಡುಪು ಹಾಗೂ ಗೃಹೋಪಯೋಗಿ ವಸ್ತುಗಳಲ್ಲದೇ 50ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿರಲಿವೆ. ಅಂದು ಸಂಜೆ 7ರಿಂದ 9ರ ವರೆಗೆ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದಿಂದ “ಮಂದಾರ್ತಿ ಮಹಾತ್ಮೆ” ನೃತ್ಯ ರೂಪಕವಿದೆ. ಕರ್ಜೆ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಇದಕ್ಕೆ ಚಾಲನೆ ನೀಡುವರು.

ಮೇ 2ರಂದು ಸಂಜೆ 6ರಿಂದ 9ರ ವರೆಗೆ ಮೂಡಬಿದ್ರೆಯ ಅಳ್ವಾಸ್‌ನಿಂದ “ನರ ಶಾರ್ದೂಲ” ಯಕ್ಷಗಾನ, ಮೇ 3ರಂದು ಸಂಜೆ 6.30 ರಿಂದ 9ರ ವರೆಗೆ ಕುದ್ರೋಳಿ ಗಣೇಶ ಅವರಿಂದ ವಿಸ್ಮಯ ಜಾದೂ ಹಾಗೂ ಪಿಲಿ ಡ್ಯಾನ್ಸ್ ಆಯೋಜಿಸಲಾಗಿದೆ. ಪ್ರತಿದಿನ ಚೆಂಡೆ ಮೇಳ ಇರಲಿದೆ ಎಂದರು.

ಕರ್ಜೆ ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಉತ್ಸವ ಮಾಡುವ ಯೋಚನೆ ಇತ್ತು. ಅದು ಈ ವರ್ಷ ಸಾಕಾರಗೊಂಡಿದೆ. ಮುಂದಿನ ವರ್ಷದಿಂದ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್‌ಟೌನ್ ಕಾರ್ಯದರ್ಶಿ ಪ್ರವೀಣ ಬನ್ಸಾಲಿ, ಶೈಲಜಾ ಬಾಂಡಗೆ, ಕೌಸ್ತುಬ್‌ ಸೋಮಶೇಖರ್ ಮತ್ತಿತರರಿದ್ದರು.

Share this article