ಹುಬ್ಬಳ್ಳಿ:
ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ ಉಗ್ರರನ್ನು ಹಿಡಿದು ಇಂಡಿಯಾ ಗೇಟ್ ಮುಂದೆ ಬೆತ್ತಲೆ ಮಾಡಿ, ಸುಡಬೇಕು. ಇಲ್ಲವೇ ಎನ್‌ಕೌಂಟರ್ ಮಾಡಬೇಕು ಎಂದು ಟಿಪ್ಪು ಸುಲ್ತಾನ್ ಮರಿ ಮೊಮ್ಮಗ ಸೈಯದ್ ಮನ್ಸೂರ್ ಅಲಿ ಟಿಪ್ಪು ಸುಲ್ತಾನ್ ಹೇಳಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರಾನ್ ಯಾರನ್ನೂ ಹತ್ಯೆ ಮಾಡಬಾರದು, ನಿಂದನೆ ಮಾಡಬಾರದು ಎಂದು ಹೇಳುತ್ತದೆ. ಆದರೆ, ಈ ಉಗ್ರರಿಗೂ ನಮ್ಮ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ. ಕಾಶ್ಮೀರ ದಾಳಿ ಸಂದರ್ಭದಲ್ಲಿ ಅನೇಕ ಮುಸ್ಲಿಂ ಸಮುದಾಯದ ಜನರು ಅಪಾಯದಲ್ಲಿರುವ ಜನರನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಕೆಲವರು ಈ ಘಟನೆಯನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಂಡು ಧರ್ಮವನ್ನು ತಂದು ಹಿಂದೂ- ಮುಸ್ಲಿಂ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದರು.
ಸದ್ಯ ಪಾಕಿಸ್ತಾನ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯಗಳಿಗೆ ಬದ್ಧವಾಗಿದ್ದು, ಒಂದು ವೇಳೆ ಯುದ್ದವಾದಲ್ಲಿ ನಾನೂ ಹೋರಾಟ ಮಾಡಲು ಸಿದ್ಧ. ಯುದ್ಧವಾದರೆ ರಾಷ್ಟ್ರಕ್ಕೆ ಅಪಾರ ಪ್ರಮಾಣದ ನಷ್ಟ ಆಗಲಿದೆ. ರಾಷ್ಟ್ರದ ಗೌರವ ವಿಷಯ ಬಂದಾಗ ಯುದ್ಧ ಅನಿವಾರ್ಯ ಆಗಲಿದೆ ಎಂದರು.ಟಿಪ್ಪು ಕುಟುಂಬದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ನಮ್ಮ ಮುತ್ತಾತನ ಹೆಸರನ್ನು ಹೇಳಿಕೊಂಡು ರಾಜ್ಯದಲ್ಲಿ ಅನೇಕರು ರಾಜಕೀಯ ಮಾಡಿ, ಶಾಸಕರು, ಸಚಿವರಾಗಿದ್ದಾರೆ. ಆದರೆ, ಈವರೆಗೆ ಟಿಪ್ಪು ಸುಲ್ತಾನ್ ಅವರಿಗೆ ರಾಜಕಾರಣಿಗಳು, ಸರ್ಕಾರ ಏನು ಮಾಡಿದೆ? ಅವರ ಕುಟುಂಬ ಹೇಗಿದೆ ಎಂಬ ಬಗ್ಗೆ ಯಾರೂ ಕೇಳಿಲ್ಲ. ಟಿಪ್ಪು ಸುಲ್ತಾನ್ ವಕ್ಫ್‌ಗೆ 600 ಎಕರೆ ಜಾಗ ಕೊಟ್ಟಿದ್ದಾರೆ, ಆದರೆ, ಅದನ್ನೇ ರಾಜಕಾರಣಿಗಳು ಎನ್ಒಸಿ ಮಾಡಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಟಿಪ್ಪು ಸುಲ್ತಾನ್ ಸಮಾಧಿ, ಗುಂಬಜ್‌ಯಿದೆ. ಅದರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸಲಿ: ಇನ್ನು ಟಿಪ್ಪು ಜಯಂತಿ ಬಂದಾಗ ಸರ್ಕಾರಕ್ಕೆ ಒಂದು ಟ್ವೀಟ್ ಸಹ ಮಾಡಲು ಆಗುವುದಿಲ್ಲ, ಹಾಗಾಗಿ ಕಡ್ಡಾಯವಾಗಿ ರಾಜ್ಯಾದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಬೇಕು, ಇಲ್ಲವಾದರೆ ರಾಜ್ಯಾದ್ಯಂತ ಸಂಚರಿಸಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.