- ಮಹಿಳೆ ಮೇಲೆ 20 ಜನ ಅಮಾನುಷ ಹಲ್ಲೆ ಮಾಡ್ತಾರೆಂದ್ರೆ ಏನರ್ಥ?: ಸದಸ್ಯೆ ಡಾ.ಅರ್ಚನಾ ಮಜುಂದಾರ್ ಕಿಡಿ
- - -
ಕನ್ನಡಪ್ರಭ ವಾರ್ತೆ ದಾವಣಗೆರೆಮುಸ್ಲಿಂ ಮಹಿಳೆಯೊಬ್ಬಳ ಮೇಲೆ ತಾಲಿಬಾನ್ ಮಾದರಿಯಲ್ಲಿ ಅಮಾನುಷವಾಗಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮಕ್ಕೆ ಸೋಮವಾರ ದೆಹಲಿಯಿಂದ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಭೇಟಿ ನೀಡಿ, ಪರಿಶೀಲಿಸಿದರು.
ತಾವರಕೆರೆ ಜಾಮೀಯಾ ಮಸೀದಿ ಬಳಿ ಘಟನಾ ಸ್ಥಳಕ್ಕೆ ಚನ್ನಗಿರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಸೇರಿದಂತೆ ಅಧಿಕಾರಿಗಳ ಸಮೇತ ಭೇಟಿ ನೀಡಿದ್ದ ಡಾ.ಅರ್ಚನಾ ಮಜುಂದಾರ್ ಅವರು, ಸಂತ್ರಸ್ಥ ಮುಸ್ಲಿಂ ಮಹಿಳೆಗೆ ಸಾಂತ್ವನ ಹೇಳಿ, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದರು.
ಅನಂತರ ಮುಸ್ಲಿಂ ಸಮುದಾಯದ ವಿಶೇಷ ಸಭೆಯಲ್ಲಿ ಮಾತನಾಡಿದ ಡಾ.ಅರ್ಚನಾ ಮಜುಂದಾರ್, ಏ.9ರಂದು ಮಹಿಳೆಯ ವಿರುದ್ಧ ಜಾಮೀಯಾ ಮಸೀದಿಯಲ್ಲಿ ದೂರು ದಾಖಲಿಸಿ, ಮಸೀದಿಯಿಂದ ಹೊರಬಂದ ಗುಂಪಿನಲ್ಲಿ ಹತ್ತಾರು ಜನ ಸೇರಿ, ಆಕೆಗೆ ಹಲ್ಲೆ ಮಾಡಿದ್ದು ಅಕ್ಷಮ್ಯ ಮತ್ತು ಖಂಡನೀಯ ಘಟನೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, 6 ಜನರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ತಾವರಕೆರೆ ಘಟನೆ ನಿಜಕ್ಕೂ ಅಮಾನವೀಯವಾಗಿದೆ. ಬುರ್ಖಾ ಧರಿಸಿದ್ದ ಮಹಿಳೆಗೆ ಹತ್ತಾರು ಪುರುಷರು ಹಲ್ಲೆ ಮೂಲಕ ತಮ್ಮ ಪೌರುಷ ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಇಂಥದ್ದನ್ನೆಲ್ಲಾ ಈ ನೆಲದ ಕಾನೂನು, ಸಂವಿಧಾನ ಸಹಿಸುವುದೂ ಇಲ್ಲ. ಮುಂದಿನ ದಿನಗಳಲ್ಲಿ ಇಂತಹ ಗಟನೆಗಳು ನಡೆಯುವುದಕ್ಕೆ ಬಿಡುವುದಿಲ್ಲ. ಸಮಾಜದಲ್ಲಿ ಪುರುಷನಿಗೆ ಸರಿ ಸಮಾನವಾಗಿ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ದೈಹಿಕವಾಗಿ ಆಕೆ ಬಲಿಷ್ಠವಾಗಿಲ್ಲದೇ ಇರಬಹುದು. ಆದರೆ, ಮಾನಸಿಕವಾಗಿ ಅತ್ಯಂತ ಗಟ್ಟಿ ಇರುತ್ತಾಳೆ ಎಂದು ಹೇಳಿದರು.
ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ:
ಈ ಸಂದರ್ಭ ಚನ್ನಗಿರಿ ತಹಸೀಲ್ದಾರ್ ಎನ್.ಜೆ.ನಾಗರಾಜ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರೂಪ್ಲಿ ಬಾಯಿ, ಸಿಡಿಪಿಒ ನಿರ್ಮಲಾ ಬಾಯಿ, ಸಮಾಜದ ಮುಖಂಡರು, ಸಮಾಜದ ಹಿರಿಯರು, ಗ್ರಾಮದ ಮಹಿಳೆಯರು ಇದ್ದರು.
(ಬಾಕ್ಸ್) * ಕಾರಿಗೆ ಅಡ್ಡ ನಿಂತು ಮಹಿಳೆ ಪ್ರತಿಭಟನೆ ದಾವಣಗೆರೆ: ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಡಾ. ಅರ್ಜನಾ ಮಜುಂದಾರ್ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದಲ್ಲಿ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿ, ವಾಪಸ್ಸಾಗಲು ತಮ್ಮ ವಾಹನದಲ್ಲಿ ಕುಳಿತರು. ಆಗ ಗ್ರಾಮದ ಮಹಿಳೆಯೊಬ್ಬರು ಆಯೋಗ ಸದಸ್ಯರ ಕಾರಿಗೆ ಅಡ್ಡ ನಿಂತು ಪ್ರತಿಭಟಿಸಿದರು.
ತಾವರಕೆರೆ ಗ್ರಾಮದ ಮುಸ್ಲಿಂ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಚನ್ನಗಿರಿ ಪೊಲೀಸರು ಅಮಾಯಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಪಾತ್ರ ಇಲ್ಲದವರ ವಿರುದ್ಧವೂ ಕೇಸ್ ಮಾಡಿ, ಬಂಧಿಸಿದ್ದಾರೆ. ತಕ್ಷಣವೇ ಬಂಧಿತರನ್ನು ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿದರು.ಘಟನೆ ಬಗ್ಗೆ ಮಾಹಿತಿ ಇಲ್ಲದ ಮಹಿಳೆ ವಾಹನಕ್ಕೆ ಅಡ್ಡ ಬಂದಿದ್ದರಿಂದ ಸ್ವಲ್ಲ ಹೊತ್ತು ಅಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಆಯೋಗ ಸದಸ್ಯರ ಕಾರಿಗೆ ಅಡ್ಡ ಬಂದಿದ್ದ ಮಹಿಳೆಯನ್ನು ತಕ್ಷಣವೇ ಪೊಲೀಸರು ಪಕ್ಕಕ್ಕೆ ಕರೆ ತಂದು, ವಾಹನ ಮುಂದೆ ಸಾಗಲು ಅನುವು ಮಾಡಿಕೊಟ್ಟರು.
- - --28ಕೆಡಿವಿಜಿ3:
ಚನ್ನಗಿರಿ ತಾಲೂಕಿನ ತಾವರಕೆರೆಗೆ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಡಾ.ಅರ್ಚನಾ ಮಜುಂದಾರ್ ಸೋಮವಾರ ಭೇಟಿ ನೀಡಿ, ಮುಸ್ಲಿಂ ಮುಖಂಡರು, ಸಂತ್ರಸ್ಥ ಮಹಿಳೆಯಿಂದ ಅಹವಾಲು ಆಲಿಸಿದರು. ಎಎಸ್‌ಪಿ ಸ್ಯಾಮ್ ವರ್ಗೀಸ್ ಇನ್ನಿತರ ಅಧಿಕಾರಿಗಳು ಇದ್ದರು.