ಹುಬ್ಬಳ್ಳಿ: ಬಾಲಕಿ ಹತ್ಯೆ ಮಾಡಿರುವ ರಿತೇಶ್ ಕುಮಾರ ಎನ್‌ಕೌಂಟರ್ ಮಾಡಿರುವುದು ತಪ್ಪೋ, ಸರಿಯೋ ಎನ್ನುವ ಕುರಿತಂತೆ ಈಗಲೇ ಹೇಳಲು ಸಾಧ್ಯವಿಲ್ಲ. ಆಯೋಗದ ಎಡಿಜಿಪಿ ಮತ್ತು ಡಿವೈಎಸ್‌ಪಿ ತಂಡ ಪ್ರಕರಣದ ಕುರಿತು ತನಿಖೆ ನಡೆಸಿ ನಮಗೆ ವರದಿ ಸಲ್ಲಿಸಿದ ನಂತರ ನಾವು ರಾಜ್ಯ ಸರ್ಕಾರಕ್ಕೆ ವರದಿ ಮತ್ತು ಶಿಫಾರಸು ಮಾಡುತ್ತೇವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ ಭಟ್ ಹೇಳಿದರು.
ಸೋಮವಾರ ಹುಬ್ಬಳ್ಳಿಯ ಬಾಲಕಿ ನಿವಾಸ ಮತ್ತು ಪ್ರಕರಣ ನಡೆದ ಸ್ಥಳ ಹಾಗೂ ಎನ್‌ಕೌಂಟರ್ ಆದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ಕುರಿತಂತೆ ಮಾಹಿತಿ ಕಲೆ ಹಾಕಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಎರಡು ತಿಂಗಳ ಅವಧಿಯಲ್ಲಿ ಆಯೋಗದಿಂದ ಈ ಕುರಿತು ತನಿಖೆ ನಡೆದು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಬಾಲಕಿ ಹತ್ಯೆ ಕುರಿತಂತೆ ಸಿಐಡಿ ತನಿಖೆ ನಡೆಸುತ್ತಿರುವುದರಿಂದ ಆ ಪ್ರಕರಣದಲ್ಲಿ ಆಯೋಗ ತನಿಖೆ ನಡೆಸಲ್ಲ ಎಂದು ಸ್ಪಷ್ಟಪಡಿಸಿದರು.
ಆಯೋಗಕ್ಕೆ ಪೊಲೀಸ್ ಕಮಿಷನರ್ ಪ್ರಕರಣದ ಕುರಿತು ವರದಿ ಸಲ್ಲಿಸಿದ್ದರು. ಅದರ ಮೇಲೆ ಆಯೋಗದಲ್ಲಿ ಪ್ರಕರಣ ದಾಖಲಿಸಿಕೊಂಡು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಎನ್‌ಕೌಂಟರ್ ನಡೆದಾಗ ರಾಜ್ಯ ಅಥವಾ ಕೇಂದ್ರದ ಮಾನವ ಹಕ್ಕುಗಳ ಆಯೋಗದಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತದೆ. ಇಲ್ಲಿ ವರೆಗೆ ಕೇಂದ್ರ ಆಯೋಗದಲ್ಲಿ ಪ್ರಕರಣ ದಾಖಲಾಗದಿರುವುದರಿಂದ ರಾಜ್ಯ ಆಯೋಗ ಈ ತನಿಖೆಗೆ ಮುಂದಾಗಿದೆ. ಪೊಲೀಸರು ಎನ್‌ಕೌಂಟರ್ ಮಾಡಿರುವುದು ಸರಿಯೋ, ಇಲ್ಲವೋ ಎನ್ನುವುದನ್ನು ತನಿಖೆ ಮಾಡುತ್ತೇವೆ. ಇನ್ಸ್‌ಪೆಕ್ಟರ್ ಅವರನ್ನು ಈ ಕುರಿತಂತೆ ವಿಚಾರಣೆ ನಡೆಸಲಾಗಿದೆ. ಗುಂಡುಹಾರಿಸಿದ ಪಿಎಸ್‌ಐ ಅನ್ನಪೂರ್ಣಾ ಅನಾರೋಗ್ಯದಿಂದ ರಜೆ ಮೇಲಿದ್ದಾರೆ. ಪೊಲೀಸರ ತನಿಖೆ ಮುಗಿದ ನಂತರ ನಾವು ಈ ಕುರಿತು ತನಿಖೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಮತ್ತು ಶಿಫಾರಸು ಮಾಡುತ್ತೇವೆ ಎಂದರು.ಆಯೋಗದ ಸದಸ್ಯ ಎಸ್.ಕೆ. ವಂಟಗೋಡಿ ಮಾತನಾಡಿ, ಆರೋಪಿಯ ಜೀವನ ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈ ಪ್ರಕರಣದಲ್ಲಿ ಆ ಹಕ್ಕು ಕಸಿದುಕೊಂಡಿರುವುದರಿಂದ ಆಯೋಗ ಪ್ರವೇಶ ಮಾಡಿದೆ. ಯಾವ ಕಾರಣದಿಂದ ಅವರ ಜೀವನದ ಹಕ್ಕು ಕಸಿದುಕೊಂಡರು ಎನ್ನುವ ಕುರಿತಂತೆ ವಿಚಾರಣೆ ನಡೆಸುತ್ತೇವೆ. ಎಡಿಜಿಪಿ ಮತ್ತು ಡಿವೈಎಸ್‌ಪಿ ನೀಡುವ ವರದಿ ಆಧರಿಸಿ ಸಾಕ್ಷಿ, ಪೊಲೀಸರ ವಿಚಾರಣೆ ಕೈಗೊಂಡು ಅಂತಿಮವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಬಾಲಕಿ ಕುಟುಂಬಕ್ಕೆ ಸಾಂತ್ವನ: ಮೃತ ಬಾಲಕಿ ಮನೆಗೆ ಭೇಟಿ ನೀಡಿದ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶಾಮ ಭಟ್ ಮತ್ತು ಸದಸ್ಯ ಎಸ್.ಕೆ. ವಂಟಗೋಡಿ ಅವರು ಕುಟುಂಬಕ್ಕೆ ಸಾಂತ್ವನ ಹೇಳಿದರು. ಬಾಲಕಿ ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರಿಂದ ಮಾಹಿತಿ ಪಡೆದಕೊಂಡರು. ಬಳಿಕ ಎನ್‌ಕೌಂಟರ್ ನಡೆದ ಸ್ಥಳಕ್ಕೆ ಭೇಟಿ ಅಲ್ಲಿ ಪೊಲೀಸರಿಂದ ಮಾಹಿತಿ ಪಡೆದರು.ಜನಿವಾರದ ಕುರಿತೂ ದೂರು: ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿರುವ ಕುರಿತಂತೆಯೂ ಆಯೋಗದಲ್ಲಿ ಪ್ರಕರಣ ದಾಖಲಾಗಿದೆ. ಇದರ ಕುರಿತಂತೆಯೂ ಆಯೋಗ ವಿಚಾರಣೆ ನಡೆಸುತ್ತಿದೆ ಎಂದು ಆಯೋಗದ ಅಧ್ಯಕ್ಷ ಶಾಮ್ ಭಟ್ ತಿಳಿಸಿದರು.