ಮಹಿಳೆಯರ ಪ್ರಗತಿಗೆ ಕೈಜೋಡಿಸೋಣ : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

KannadaprabhaNewsNetwork |  
Published : Mar 12, 2024, 02:04 AM IST
ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಯಾದಗಿರಿ ನಗರದ ಜಿಲ್ಲಾಡಳಿತ ಭವನದದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಪ್ರಮುಖ ಹುದ್ದೆ ಸೇರಿದಂತೆ ಮಹಿಳಾ ಅಧಿಕಾರಿಗಳ ಕೈಯಲ್ಲಿಯೇ ಜಿಲ್ಲಾಡಳಿತ ಇರುವುದು ನಮ್ಮ ಜಿಲ್ಲೆಗೆ ಕೀರ್ತಿ ಹಾಗೂ ಸಮಾಜದಲ್ಲಿ ಸ್ತ್ರೀ ಸಮಾನತೆಗೆ ಸಾಕ್ಷಿಯಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ, "ಬೇಟಿ ಬಚಾವೋ, ಬೇಟಿ ಪಡಾವೋ.. " ಜಾಗೃತಿ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಮಹಿಳೆಯರನ್ನು ದೇವತೆಯ ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಗೌರವ ನೀಡಬೇಕು, ಅವರ ಆಲೋಚನೆಗಳಿಗೆ ಗಮನ ಕೊಡಬೇಕು. ಆ ಮಹಿಳೆ ನಮ್ಮ ತಾಯಿ, ಸಹೋದರಿ, ಪತ್ನಿ, ಸಹೋದ್ಯೋಗಿ ಯಾರೇ ಆಗಿರಲಿ ಅವರಿಗೆ ಸಮಾನ ಹಕ್ಕು ಸಿಗಲು ಎಲ್ಲರೂ ಕೊಡುಗೆ ನೀಡಬೇಕು ಮತ್ತು ಅದಕ್ಕೆ ನಾವೇ ಪ್ರತ್ಯಕ್ಷ ಉದಾಹರಣೆ ಆಗಬೇಕು ಎಂದರು.

ಇಂದಿನ ಯುಗದಲ್ಲಿ ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಪುರುಷರಿಗಿಂತ ಹಿಂದೆ ಬಿದ್ದಿಲ್ಲ ಎಂದರೆ ಅವರಿಗೇಕೆ ಹಲವು ತಾರತಮ್ಯ, ಇಂದಿನಿಂದ ನಾವೆಲ್ಲರೂ ಮಹಿಳೆಯರನ್ನು ಗೌರವಿಸಿ ಅವರ ಪ್ರಗತಿಗೆ ಕೈಜೋಡಿಸೋಣ ಎಂದರು.

ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಮಾತನಾಡಿ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ, ಅವರ ಶಿಕ್ಷಣದ ಪ್ರಾಮುಖ್ಯತೆ, ಅವರ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಮಾಜದಲ್ಲಿ ಅವರ ಜೀವನವನ್ನು ಉತ್ತಮಗೊಳಿಸುವ ಜತೆಗೆ, ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಾನವನ್ನು ಉತ್ತೇಜಿಸಲು ಸಹಕಾರ ನೀಡುವುದು ಬಹಳ ಮುಖ್ಯವಾಗಿದೆ ಎಂದರು.

ನಮ್ಮ ಜಿಲ್ಲೆಯಲ್ಲಿ ಬಾಲ್ಯವಿವಾಹ, ಲಿಂಗ ಆಧರಿತ ತಾರತಮ್ಯಗಳನ್ನು ಸಂಪೂರ್ಣ ತೊಡೆದು ಹಾಕಬೇಕು ಎಂದರು. ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಮತ್ತು ಕೆಲವೊಮ್ಮೆ ಪ್ರತಿಯೊಂದು ಕ್ಷೇತ್ರದಲ್ಲೂ ಅವರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲರು ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಮಾತನಾಡಿ, ನಿಮ್ಮ ಪರಿಶ್ರಮದ ಮೇಲೆಯೇ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಾಗಿ ಹೆಣ್ಣುಮಕ್ಕಳು ಸ್ವಾವಲಂಬಿಯಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರು ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಲಕ್ಷ್ಮೀಕಾಂತ ಕೆಂಗೇರಿ, ಜಿಲ್ಲಾ ಪಂಚಾಯ್ತಿ ಸಿಪಿಓ ಗರುನಾಥ ಗೌಡಪ್ಪನ್ನೋರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ವೀರನಗೌಡ, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಜಿಲ್ಲಾ ನಿರೂಪಣಾಧಿಕಾರಿ ಪ್ರೇಮಮೂರ್ತಿ ಕೆ, ಯಾದಗಿರಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಲಾಲಸಾಬ್ ಸೇರಿದಂತೆ ಇತರರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ