ಕೃಷ್ಣ ಎನ್. ಲಮಾಣಿ ಹಂಪಿ (ಗಾಯತ್ರಿಪೀಠ ವೇದಿಕೆ)
ಹಂಪಿಯ ಗಾಯತ್ರಿ ಪೀಠದಲ್ಲಿ ಶುಕ್ರವಾರ ನಗಾರಿ ಬಾರಿಸುವ ಮೂಲಕ ಹಂಪಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಅವರು, ವಿಜಯನಗರ ಅರಸರ ಕಾಲದಲ್ಲಿ ಈ ಸಾಮ್ರಾಜ್ಯ ಅತ್ಯಂತ ಸುಭೀಕ್ಷವಾಗಿತ್ತು. ಎಲ್ಲರೂ ಸುಖವಾಗಿ ಇದ್ದರು. ಅಂತಹ ಸಮೃದ್ಧತೆಯನ್ನು ಮತ್ತೆ ನಮ್ಮ ರಾಜ್ಯದಲ್ಲಿ ಕಾಣುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ. ಇಡೀ ದೇಶಕ್ಕೆ ಕರ್ನಾಟಕವನ್ನು ಮಾದರಿ ರಾಜ್ಯ ಮಾಡುತ್ತೇವೆ ಎಂದರು.
ಯಾರೇ ಆಗಲಿ ಮೊದಲು ಇತಿಹಾಸವನ್ನು ತಿಳಿಯಬೇಕು. ಒಂದು ವೇಳೆ ಇತಿಹಾಸ ಅರಿಯದೇ ಹೋದರೆ ಕೇಂದ್ರದಲ್ಲಿರುವ ಕೋಮುವಾದಿ ಪಕ್ಷದ ಮುಖಂಡರು ಹೇಳುವುದನ್ನೇ ಸತ್ಯ ಎಂದು ಅರಿಯಬೇಕಾದ ಸ್ಥಿತಿ ಬರಲಿದೆ. ಡಾ. ಬಿ.ಆರ್. ಅಂಬೇಡ್ಕರ್ ಸಹ ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರ ಎಂದು ತಿಳಿಸಿದ್ದರು. ನಾವೆಲ್ಲಾ ಅವರ ಮಾತನ್ನು ಅರಿತು ನಿಜ ಇತಿಹಾಸ ಅರಿಯಬೇಕು. ಆಗಲೇ ಭವಿಷ್ಯ ರೂಪಿಸಲು ಸಾಧ್ಯ ಎಂದರು.ನಮ್ಮ ಸರ್ಕಾರ ಯುರೋಪ್ ಮಾದರಿಯಲ್ಲಿ ಪ್ರತಿ ನಾಗರಿಕರಿಗೆ ಕನಿಷ್ಠ ಆದಾಯ ದೊರಕುವಂತೆ ಮಾಡಲು ಯೋಜನೆ ರೂಪಿಸಿದೆ. ಇಂದು ನಾವು ನೀಡುತ್ತಿರುವ ಐದು ಗ್ಯಾರಂಟಿಗಳ ಗುರಿ ಇದೇ ಆಗಿದೆ. ಇದರ ಮೂಲಕ ಯುನಿವರ್ಸಲ್ ಮಿನಿಮಮ್ಮ ಇನ್‌ಕಂ ಎಂಬ ಯುರೋಪ್ ನಾಡಲ್ಲಿ ಇರುವ ಪದ್ಧತಿಯನ್ನು ಇಲ್ಲಿಗೆ ತಂದಿದ್ದೇವೆ ಎಂದರು.
ಇಂದಿನ ನಾಡ ಹಬ್ಬ ದಸರಾ ಮೊದಲು ವಿಜಯನಗರಲ್ಲಿ ನಡೆಯುತ್ತಿತ್ತು. ಸಾಮ್ರಾಜ್ಯ ಪತನವಾದ ನಂತರ ಅದನ್ನು ಮೈಸೂರು ಮಹಾರಾಜರು ಅಲ್ಲಿ ಆರಂಭಿಸಿದರು. ಇದನ್ನೇ ಎಂ.ಪಿ. ಪ್ರಕಾಶ್ ಅವರು ಹಂಪಿ ಉತ್ಸವ ಆಚರಿಸಬೇಕು ಎಂದು ಕೋರಿದ್ದರು. ೧೯೮೭ರಲ್ಲಿ ನಾನು ಮೊಟ್ಟ ಮೊದಲ ಹಂಪಿ ಉತ್ಸವಕ್ಕೆ ಅನುದಾನ ನೀಡಿದೆ ಎಂದರು.
ಧರ್ಮ, ಧರ್ಮಗಳ ನಡುವೆ, ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುವವರನ್ನು ಹಿಮ್ಮೆಟ್ಟಿಸಬೇಕು. ನಾವು ವಿರೋಧ ಮಾಡಬೇಕು. ನಾವು ಜಾಗ್ರತರಾಗಿ ವಿರೋಧ ಮಾಡಿದರೆ ಮಾತ್ರ ಕೋಮುವಾದಿಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದರು.
ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ. ನಾವು ರೈತರಿಗೆ ₹650 ಕೋಟಿ ಮಧ್ಯಂತರ ಪರಿಹಾರ ನೀಡಿದ್ದೇವೆ. ಐದು ಗ್ಯಾರಂಟಿಗಳಿಂದಲೂ ಬರಗಾಲದ ತೀವ್ರತೆ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ರೈತರಿಗೆ ನೆರವಿಗಾಗಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ, ಸಚಿವರಾದ ಶಿವರಾಜ್ ತಂಗಡಗಿ, ಬಿ. ನಾಗೇಂದ್ರ, ಜಮೀರ್ ಅಹಮದ್ ಖಾನ್, ಶಾಸಕರಾದ ಗವಿಯಪ್ಪ, ಅಜಯ್ ಸಿಂಗ್, ಕೃಷ್ಣ ನಾಯಕ, ನಾಗರಾಜ, ನೇಮರಾಜ್ ನಾಯ್ಕ, ಎಂ.ಪಿ. ಲತಾ, ಡಾ. ಎನ್.ಟಿ. ಶ್ರೀನಿವಾಸ್, ಭರತ್ ರೆಡ್ಡಿ, ಮಾಜಿ ಶಾಸಕ ಭೀಮಾ ನಾಯ್ಕ, ಮಾಜಿ ಸಂಸದರಾದ ಐ.ಜಿ. ಸನದಿ, ವಿ.ಎಸ್. ಉಗ್ರಪ್ಪ, ದಯಾನಂದ ಪುರಿ ಸ್ವಾಮೀಜಿ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿಗೌಡ ಮತ್ತಿತರರಿದ್ದರು.