ಪ್ರವಾದಿಯನ್ನು ಮುಸ್ಲಿಂ ಸಮುದಾಯಕ್ಕೆ ಸೀಮಿತಗೊಳಿಸದಿರೋಣ: ಪ್ರೊ. ಆರ್.ಎಸ್ ನಾಯಕ

KannadaprabhaNewsNetwork | Published : Sep 17, 2024 12:47 AM

ಸಾರಾಂಶ

ಪ್ರವಾದಿ ಮಹಮ್ಮದರ ವಿಚಾರಗಳು, ಎಲ್ಲ ಕಾಲಕ್ಕೆ, ಎಲ್ಲ ಸಮುದಾಯಗಳಿಗೆ ಬೇಕಾಗಿವೆ.

ಭಟ್ಕಳ: ಪ್ರವಾದಿ ಮಹಮ್ಮದರು ಸರ್ವ ಸಮುದಾಯಕ್ಕಾಗಿ ಬಂದ ಪ್ರವಾದಿಯಾಗಿದ್ದು, ಅವರನ್ನು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸದಿರೋಣ ಎಂದು ಅಂಜುಮನ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ, ಲೇಖಕ ಪ್ರೊ. ಆರ್.ಎಸ್ ನಾಯಕ ತಿಳಿಸಿದರು.

ಸೋಮವಾರ ಪಟ್ಟಣದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ಪ್ರವಾದಿ ಮಹಮ್ಮದ ಮಹಾನ್ ಚಾರಿತ್ರ‍್ಯವಂತ ಸೀರತ್ ಅಭಿಯಾನದಲ್ಲಿ ಪ್ರವಾದಿ ಮಹಮ್ಮದರ ಕುರಿತ ಸೀರತ್ ವಿಶೇಷ ಪುರವಣಿ ಹಾಗೂ ಲೇಖನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಏಸು ಕ್ರಿಸ್ತನನ್ನು ಕ್ರೈಸ್ತರಿಗೆ, ಬಸವಣ್ಣನನ್ನು ಲಿಂಗಾಯತರಿಗೆ ಸೀಮಿತಗೊಳಿಸಿದಂತೆ ಪ್ರವಾದಿ ಮುಹಮ್ಮದರನ್ನು ಮುಸ್ಲಿಂ ಸಮುದಾಯಕ್ಕೆ ಸೀಮಿತಗೊಳಿಸಿದರೆ ಅವರ ವಿಶಾಲ ವ್ಯಕ್ತಿತ್ವ ಕುಗ್ಗಿಸಿದಂತಾಗುತ್ತದೆ. ಪ್ರವಾದಿ ಮಹಮ್ಮದರ ವಿಚಾರಗಳು, ಎಲ್ಲ ಕಾಲಕ್ಕೆ, ಎಲ್ಲ ಸಮುದಾಯಗಳಿಗೆ ಬೇಕಾಗಿವೆ. ಅವರ ಸಂದೇಶಗಳು ಇಡೀ ಮನುಕುಲದ ಒಳಿತಾಗಾಗಿದ್ದು, ಅದನ್ನು ಅಳವಡಿಸಿಕೊಳ್ಳುವುದರ ಮೂಲಕ ನಾವು ಮಾನವೀಯ ಮೌಲ್ಯಗಳು ಈ ಸಮಾಜದಲ್ಲಿ ಶಾಶ್ವತವಾಗಿ ನೆಲೆಸುವಂತೆ ನೋಡಿಕೊಳ್ಳಬೇಕು. ಇದು ಎಲ್ಲ ಪ್ರಗತಿಪರರ, ಶಾಂತಿಪ್ರಿಯರ ಕರ್ತವ್ಯವಾಗಿದೆ ಎಂದರು.

ಪುರಸಭಾ ಉಪಾಧ್ಯಕ್ಷ ಮುಹಿದ್ದೀನ್ ಅಲ್ತಾಫ್ ಖರೂರಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರರ ಜೀವನ ಸಂದೇಶಗಳನ್ನು ಎಲ್ಲರಿಗೂ ತಲುಪುವಂತಹ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಸಮಾಜದಲ್ಲಿ ಮುಸ್ಲಿಮರ ಬಗ್ಗೆ ತಪ್ಪುಕಲ್ಪನೆಗಳು ಮನೆಮಾಡಿವೆ ಎಂದರು.

ಜಮಾತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಅಧ್ಯಕ್ಷತೆ ವಹಿಸಿದ್ದರು. ಸೀರತ್ ಅಭಿಯಾನದ ಸಂಚಾಲಕ ಎಂ.ಆರ್. ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಜಮಾತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಪ್ರಮುಖ ಸೈಯ್ಯದ್ ಶಕೀಲ್ ಎಸ್.ಎಂ., ಖಾಝಿ ನಝೀರ್ ಆಹಮದ್, ಸಲಾಹುದ್ದೀನ್ ಎಸ್.ಕೆ., ಮುಜಾಹಿದ್ ಮುಸ್ತಫಾ, ಮೌಲಾನ ಯಾಸೀರ್ ಬರ್ಮಾವರ್ ನದ್ವಿ, ಯೂನೂಸ್ ರುಕ್ನುದ್ದೀನ್, ಮೌಲಾನ ಝೀಯಾವುರ‍್ರಹ್ಮಾನ್ ನದ್ವಿ ರುಕ್ನುದ್ದೀನ್, ಲಿಯಾಖತ್ ಅಲಿ, ಖಮರುದ್ದೀನ್ ಮಷಾಯಿಖ್, ಮೌಲಾನ ಸೈಯ್ಯದ್ ಖುತುಬ್ ಬರ್ಮಾವರ್ ನದ್ವಿ ಮತ್ತಿತರರಿದ್ದರು.

Share this article