ಸಾಂಸ್ಕೃತಿಕ ಜೀವನ ವಿಧಾನಕ್ಕೆ ಆದ್ಯತೆ ನೀಡೋಣ

KannadaprabhaNewsNetwork |  
Published : Mar 22, 2026, 02:30 AM IST
ಹಾವೇರಿ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಮಟ್ಟದ ಯುವಜನೋತ್ಸವವನ್ನು ಡಾ. ರೇಣುಕಾ ಮೇಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಾಂಸ್ಕೃತಿಕ ಚಿಂತನೆಗಳನ್ನು ಬಲಿಷ್ಠಪಡಿಸಿಕೊಂಡು ಯುವಜನೋತ್ಸವವನ್ನು ಹಬ್ಬವಾಗಿ ಆಚರಿಸುವ ಮೂಲಕ ಪ್ರತಿಭೆಯ ಪ್ರಾಜ್ವಲ್ಯಕ್ಕೆ ಅವಕಾಶ ಮಾಡಿಕೊಳ್ಳಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ರೇಣುಕಾ ಮೇಟಿ ಹೇಳಿದರು.

ಹಾನಗಲ್ಲ: ಸಾಂಸ್ಕೃತಿಕ ಚಿಂತನೆಗಳನ್ನು ಬಲಿಷ್ಠಪಡಿಸಿಕೊಂಡು ಯುವಜನೋತ್ಸವವನ್ನು ಹಬ್ಬವಾಗಿ ಆಚರಿಸುವ ಮೂಲಕ ಪ್ರತಿಭೆಯ ಪ್ರಾಜ್ವಲ್ಯಕ್ಕೆ ಅವಕಾಶ ಮಾಡಿಕೊಳ್ಳಬೇಕು ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ರೇಣುಕಾ ಮೇಟಿ ಹೇಳಿದರು.

ಇಲ್ಲಿನ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಾವೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ಹಾವೇರಿ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾಳುಗಳಲ್ಲಿ ಕೀಳರಿಮೆ ಸಲ್ಲದು. ಮೊಬೈಲ್ ಬದುಕಿನ ದಾರಿ ತಪ್ಪಿಸುತ್ತಿದೆ. ಈಗ ಮನಃಶಾಂತಿ ಅತ್ಯಂತ ಮುಖ್ಯವಾದುದು. ನಮ್ಮ ಪ್ರತಿಭೆ ಪ್ರಜ್ವಲಗೊಳಿಸಿಕೊಂಡು ಮೌಲ್ಯವರ್ಧನೆ ಮಾಡಿಕೊಳ್ಳಬೇಕು. ನಮಗೆ ಎತ್ತರದ ಗುರಿ ಇದ್ದರೆ ಎಲ್ಲವನ್ನು ಸಾಧಿಸಲು ಸಾಧ್ಯ. ಮೊಬೈಲ್ ಗೀಳಿನಿಂದ ಹೊರಬಂದು ಸಾಂಸ್ಕೃತಿಕ ಜೀವನ ವಿಧಾನಕ್ಕೆ ಆದ್ಯತೆ ನೀಡೋಣ ಎಂದರು.

ಕಲಾವಿದ ಬಾಲಚಂದ್ರ ಅಂಬಿಗೇರ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಮನಸ್ಸು ಯಾವಾಗಲೂ ಕೆರಳಬಾರದು, ಅರಳಬೇಕು. ಪುರಾತನ ಕಾಲದಿಂದಲೂ ಕಲೆಗೆ ಬೆಲೆ ಇದ್ದೇ ಇದೆ. ನಾಟಕ ಅತ್ಯಂತ ಪ್ರಭಾವಯುತ ಸಾಮಾಜಿಕ ಜಾಗೃತಿಯ ಮಾಧ್ಯಮವಾಗಿದೆ. ನಮ್ಮ ಮನಸ್ಸು, ಬುದ್ಧಿ, ವಿವೇಕಗಳನ್ನು ಜಾಗೃತಗೊಳಿಸುವ ದಿವ್ಯಶಕ್ತಿ ನಾಟಕಗಳಲ್ಲಿದೆ. ಹಮ್ಮು-ಬಿಮ್ಮುಗಳನ್ನು ಬಿಟ್ಟು ಹೊರಬರಬೇಕು. ಮೋಸ, ಅನ್ಯಾಯ, ದ್ರೋಹದ ಮನಸ್ಸು ಬೇಡ. ಒಳ್ಳೆಯ ಬದುಕಿನ ಚಿಂತನೆಗಳಿರಲಿ. ಅದಕ್ಕಾಗಿ ಕಲೆಯ ಪೋಷಣೆ ಇರಲಿ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎಂ.ಎಚ್. ಹೊಳೆಯಣ್ಣನವರ, ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲದಂತೆ ಎಲ್ಲರನ್ನೂ ಸಮಾನವಾಗಿ ಕಂಡು ಕಲೆಗೆ ಬೆಲೆ ನೀಡುವ ಸ್ಪರ್ಧೆ ಇದಾಗಿದೆ. ಒಳ್ಳೆಯ ಪ್ರತಿಭೆಗಳಿಗೆ ಅವಕಾಶ ನೀಡುವ ಸಂಕಲ್ಪ ನಮ್ಮದಾಗಲಿ ಎಂದರು.

ಹಾವೇರಿ ವಿಶ್ವವಿದ್ಯಾಲಯದ ಡೀನ್ ಡಾ. ಎನ್. ಸದಾಶಿವಪ್ಪ, ಯುವಜನೋತ್ಸವ ಸಂಯೋಜಕ ಡಾ. ಬಸನಗೌಡ ಲಕ್ಷ್ಮೇಶ್ವರ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಪ್ರಕಾಶ ಹೊಳೇರ ಪಾಲ್ಗೊಂಡಿದ್ದರು.

ಲಕ್ಷ್ಮೀ ಡಾಂಗೆ ಸಂಗಡಿಗರು ಪ್ರಾರ್ಥನೆ ಹಾಡಿದರು. ಉಪನ್ಯಾಸಕರ ಮಹಮ್ಮದ್‌ ಸಾದಿಕ್ ಬಡಗಿ ಸ್ವಾಗತಿಸಿದರು. ಸುಚಿತ್ರಾ ಅಂಬಿಗ ಕಾರ್ಯಕ್ರಮ ನಿರೂಪಿಸಿದರು. ಹೊನ್ನಪ್ಪ ಬೋವಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಂಬಳದಲ್ಲಿ ಮೂಲ ಸೌಕರ್ಯ ಇಲ್ಲದೇ ನಿವಾಸಿಗಳ ಪರದಾಟ
ನಾಟಕಗಳು ಇಂದಿಗೂ ಹಳ್ಳಿಗಳ ಜೀವಾಳ