ಹೊಸಕೋಟೆ: ನಮ್ಮ ಪೂರ್ವಜರು ಶುದ್ಧ ನೀರನ್ನು ನದಿ, ಕೆರೆ ಹಾಗೂ ಬಾವಿಗಳ ಮೂಲದಿಂದ ಪಡೆಯುತಿದ್ದರು. ಆದರೆ ಇಂದು ಬಾಟಲಿಗಳಲ್ಲಿ ಖರೀದಿಸುವ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಮಾತ್ರೆಗಳ ರೂಪದಲ್ಲಿ ಸೇವಿಸಬೇಕಾಗುತ್ತದೆ, ಆದ್ದರಿಂದ ಇಂದಿನಿಂದಲೇ ಜಲ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ತಿಳಿಸಿದರು.
ನಗರಸಭೆ ಆಯುಕ್ತ ನೀಲಲೋಚನ ಪ್ರಭು ಮಾತನಾಡಿ, ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಬೆರೆತು ಜೀವನ ಸಾಗಿಸುತಿದ್ದರು. ಇಂದಿನ ಪೀಳಿಗೆ ಪ್ರಕೃತಿಯನ್ನು ನಾಶ ಪಡಿಸಿ ಆ ಸ್ಥಳದಲ್ಲಿ ವಾಸಿಸುತ್ತಿದೆ. ಇದರಿಂದ ಪ್ರಕೃತಿಯಲ್ಲಿ ವೈಪರೀತ್ಯಗಳು ಸಂಭವಿಸಿ ಮಂಜಿನ ಬೆಟ್ಟಗಳು ಕರಗಿ ಸಮುದ್ರ ಸೇರುತ್ತಿರುವುದು ಅಪಾಯದ ಮುನ್ಸೂಚನೆ. ಆದ್ದರಿಂದ ನೀರನ್ನು ಸಂರಕ್ಷಣೆಗೆ ಮಾಡಿಕೊಳ್ಳಬೇಕು ಎಂದರು.
ತಾಪಂ ಇಒ ಡಾ. ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಬೂದ ಗುಂಡಿಗಳನ್ನು ನಿರ್ಮಾಣ ಮಾಡುವ ಕಾರ್ಯ ಶೇ.೯೦ರಷ್ಟು ಮುಗಿದಿದೆ. ಇದರಿಂದ ಸ್ನಾನ ಮಾಡುವ, ಬಟ್ಟೆ ತೊಳೆಯುವ ನೀರನ್ನು ಮನೆಯ ಅಂಗಳದಲ್ಲೇ ಇಂಗಿಸುವ ಅಂತರ್ಜಲ ವೃದ್ಧಿಗೆ ಸರ್ಕಾರ ಕ್ರಮ ಕೈಗೊಂಡಿದ್ದು ಪ್ರತಿ ಬೂದ ಗುಂಡಿ ನಿರ್ಮಾಣಕ್ಕೆ 11,500 ರು. ಅನುದಾನ ನೀಡುತ್ತಿದ್ದು ಗ್ರಾಮಸ್ಥರು ಸದ್ಬಳಸಿಕೊಳ್ಳಬೇಕು ಎಂದರು.ವಕೀಲರ ಸಂಘದ ಅದ್ಯಕ್ಷ ಕೆ.ರಮೇಶ್ ಮಾತನಾಡಿ, ನೀರಿನ ಸಂರಕ್ಷಣೆಗಾಗಿ ಗ್ರಾಮ ಮಟ್ಟದಿಂದ ವಿಶ್ವ ಮಟ್ಟದವರೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಹನಿ ನಿರಾವರಿ ಪದ್ಧತಿ, ಮಳೆ ಕೊಯ್ಲು ಪದ್ಧತಿ, ಇಂಗು ಗುಂಡಿ ನಿರ್ಮಾಣ ಪದ್ಧತಿಗಳನ್ನು ಸಮಾಜಕ್ಕೆ ಪರಿಚಯಿಸಿದವರ ಆದರ್ಶಗಳಡಿ ನಾವು ಜಲ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕಿ ನಿರ್ಮಲಾ ಕುಮಾರಿ, ವಕೀಲರ ಸಂಘದ ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜಂಟಿ ಕಾರ್ಯದರ್ಶಿ ಆನಂದ್, ಸಂಪನ್ಮೂಲ ವ್ಯಕ್ತಿ ಅವಿನಾಶ್ ಕೃಷ್ಣ ಇತರರಿದ್ದರು.ಫೋಟೋ: 29 ಹೆಚ್‌ಎಸ್‌ಕೆ 4
ಹೊಸಕೋಟೆ ತಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಉದ್ಘಾಟಿಸಿದರು.