ಕಾಂಗ್ರೆಸ್‌ನ ಗ್ಯಾರಂಟಿ ಕಿತ್ತಾಕಲಿ ನೋಡೋಣ: ಡಿ.ಕೆ.ಸುರೇಶ್ ಸವಾಲು

KannadaprabhaNewsNetwork |  
Published : Sep 19, 2024, 01:52 AM IST
18ಕೆಎಂಎನ್ ಡಿ23,24 | Kannada Prabha

ಸಾರಾಂಶ

ನಮ್ಮ ಗುರಿ ೨೦೨೮ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಡಿಸೆಂಬರ್‌ಗೆ ಜಿಪಂ, ತಾಪಂ ಚುನಾವಣೆ ಬರುತ್ತಿದೆ. ಅದಕ್ಕೆ ಎಲ್ಲರೂ ಸಜ್ಜಾಗಬೇಕು. ಶಾಶ್ವತವಾಗಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಲು ಮನೆ ಮನೆಗೆ ಹೋಗಿ ಜನರ ಕಷ್ಟ ಕೇಳಬೇಕು. ಅವುಗಳಿಗೆ ಪರಿಹಾರ ದೊರಕಿಸುವುದಕ್ಕೆ ಪ್ರಯತ್ನಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಬಿಜೆಪಿಯವರಿಗೆ ತಾಕತ್ ಇದ್ದರೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಕಿತ್ತಾಕಲಿ ನೋಡೋಣ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಪಟ್ಟಣದ ಶಿವಪುರದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೈಲೂರು ಚಲುವರಾಜು ಹಾಗೂ ಭಾರತೀನಗರ ಬ್ಲಾಕ್ ಅಧ್ಯಕ್ಷ ಅಣ್ಣೂರು ರಾಜೀವ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರೈತರ ಮಕ್ಕಳಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಜಾತಿ ನೋಡಿ ಯೋಜನೆಗಳನ್ನು ಕೊಟ್ಟಿಲ್ಲ, ಎಲ್ಲರಿಗೂ ಕೊಟ್ಟಿದ್ದೇವೆ. ಕುಮಾರಸ್ವಾಮಿಗೆ ವೋಟ್ ಹಾಕಿದವರಿಗೂ ಕೊಟ್ಟಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಕುಮಾರಸ್ವಾಮಿ ವಿರೋಧ ಮಾಡುವುದಾದರೆ ಆ ಯೋಜನೆಗಳ ಲಾಭ ಪಡೆಯದಂತೆ ಅವರ ಕಾರ್ಯಕರ್ತರಿಗೆ ಕರೆ ಕೊಡಲಿ ನೋಡೋಣ ಎಂದು ಸವಾಲೆಸೆದರು.

ಕಾಂಗ್ರೆಸ್ ಸರ್ಕಾರದ ಜನರ ಪರವಾಗಿ ಕೆಲಸ ಮಾಡುತ್ತಿದೆ. ಅದನ್ನು ಬಿಜೆಪಿ- ಜೆಡಿಎಸ್‌ನವರಿಗೆ ಸಹಿಸಲಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿಲ್ಲ ಎಂದು ಹೇಳಿದರು.

ನಮ್ಮ ಗುರಿ ೨೦೨೮ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು. ಡಿಸೆಂಬರ್‌ಗೆ ಜಿಪಂ, ತಾಪಂ ಚುನಾವಣೆ ಬರುತ್ತಿದೆ. ಅದಕ್ಕೆ ಎಲ್ಲರೂ ಸಜ್ಜಾಗಬೇಕು. ಶಾಶ್ವತವಾಗಿ ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಳ್ಳಲು ಮನೆ ಮನೆಗೆ ಹೋಗಿ ಜನರ ಕಷ್ಟ ಕೇಳಬೇಕು. ಅವುಗಳಿಗೆ ಪರಿಹಾರ ದೊರಕಿಸುವುದಕ್ಕೆ ಪ್ರಯತ್ನಿಸಬೇಕು. ರಾಜ್ಯದ ಅನೇಕ ಅಭಿವೃದ್ಧಿ ಕೆಲಸಕ್ಕೆ ಸಿಎಂ, ಡಿಸಿಎಂ ಅನೇಕ ಕಾರ್ಯಕ್ರಮ ಕೊಟ್ಟಿದ್ದಾರೆ. ಅವುಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಿದರು.

ಉತ್ತರ ಕರ್ನಾಟಕ ಮಳೆ ಬರುತ್ತಿದೆ. ಮಂಡ್ಯ, ರಾಮನಗರ ಜಿಲ್ಲೆಯಲ್ಲಿ ಮಳೆ ಕೊರತೆ ಕಾಡಿದೆ. ಈ ಭಾಗದ ಜನರು ಎಚ್ಚರಿಕೆಯಿಂದ ನೀರಿನ ಬಳಕೆ ಮಾಡಬೇಕು. ನೀರಿನ ವಿಚಾರದಲ್ಲಿ ಕೇಂದ್ರದ ವಿರೋಧ ನೀತಿಯನ್ನು ನೋಡಿದ್ದೀರಿ. ಕರ್ನಾಟಕದ ರಕ್ಷಣೆಗೆ ಯಾರೂ ಬರುವುದಿಲ್ಲ. ಸಿದ್ದರಾಮಯ್ಯ ಬಂದ ಮೇಲೆ ಮಳೆ ಬರುತ್ತಿಲ್ಲವೆಂಬುದು ವಿಪಕ್ಷಗಳ ಟೀಕೆಯಾಗಿದೆ. ಮಳೆ ಬರುವುದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೈಯಲ್ಲಿ ಇಲ್ಲ ಎಂದು ಹೇಳಿದರು.

ನೂತನ ತಾಲೂಕು ಅಧ್ಯಕ್ಷರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಪಕ್ಷ ಸಂಘಟನೆ ಹೆಚ್ಚಿನ ಒತ್ತು ನೀಡಿ. ಅನೇಕ ಚುನಾವಣೆಗಳು ಬರುತ್ತಿವೆ. ತಾಳ್ಮೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಂಚಾಯತ್ ಮಟ್ಟದಲ್ಲಿ ತಂಡ ಕಟ್ಟಿ ಎಲ್ಲಾ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು.

ಶಾಸಕ ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಜಯ್‌ಕುಮಾರ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ರ್ಆ.ಮೋಹನ್ ಕುಮಾರ್, ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಾಂಗ್ರೆಸ್ ಮುಖಂಡರಾದ ಸ್ಟಾರ್ ಚಂದ್ರು, ಕೆ.ಎಂ.ರವಿ, ಬಸವರಾಜು, ಮಹಾಲಿಂಗಯ್ಯ, ಕೆ.ಆರ್.ಮಹೇಶ್, ಶಂಕರೇಗೌಡ, ಅಜ್ಜಹಳ್ಳಿ ರಾಮಕೃಷ್ಣ ಇತರರಿದ್ದರು.

ಮಣಿಪುರ ಗಲಭೆ ಬಗ್ಗೆ ಮೋದಿ ಮಾತನಾಡೋಲ್ಲ!:

ನಾಗಮಂಗಲ ಗಲಭೆ ಬಗ್ಗೆ ಪ್ರಧಾನಿ ಮಾತನಾಡುತ್ತಾರೆ. ಆದರೆ, ಮಣಿಪುರದ ಗಲಭೆ ಬಗ್ಗೆ ಮಾತನಾಡುವುದಿಲ್ಲ. ನರೇಂದ್ರ ಮೋದಿ ಅವರಿಗೆ ತಾಯಿ ಮೇಲೆ ಗೌರವ ಇದೆ. ಆ ತಾಯಿಯನ್ನು ಗೌರವಿಸುವಂತವರಿಗೆ ಅವರ ಪಕ್ಷದ ಶಾಸಕರು ಅವರದೇ ಶಾಸಕರು, ದಲಿತರನ್ನು ಜಾತಿ ನಿಂದನೆ ಮಾಡಿರುವುದು ಕೇಳಿಸಿಲ್ಲವೇ? ಅದಕ್ಕೆ ಕ್ರಮ ಕೈಗೊಳ್ಳಲ್ಲವೇ? ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರಶ್ನಿಸಿದರು.

ಕಾಂಗ್ರೆಸ್ ಯಾವುದೇ ಒಂದು ಸಮುದಾಯದವರನ್ನು ಓಲೈಕೆ ಮಾಡುತ್ತಿಲ್ಲ. ಮೂಳೆ ಇಲ್ಲದ ನಾಲಿಗೆಯಲ್ಲಿ ಏನೇನೋ ಮಾತನಾಡುತ್ತಾರೆ. ಮದ್ದೂರು, ಮಳವಳ್ಳಿ, ದೆಹಲಿಯಲ್ಲಿ ಒಂದೊಂದು ಹೇಳಿಕೆ ಕೊಡುತ್ತಾರೆ ಎಂದು ಕುಮಾರಸ್ವಾಮಿ ಹೆಸರೇಳದೆ ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!