ಕನ್ನಡಪ್ರಭ ವಾರ್ತೆ ವಿಜಯಪುರ
ಜಾತಿಗಣತಿ ಜಾರಿ ವಿಚಾರವಾಗಿ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದು. ಈ ಕುರಿತು ಏನು ಚರ್ಚೆ ಆಗುತ್ತದೆ ನೋಡೋಣ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.ಜಾತಿ ಗಣತಿ ಜಾರಿ ವಿಚಾರವಾಗಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ 2013ರಿಂದಲೇ ಪೆಂಡಿಂಗ್ ಇದೆ. ಬಳಿಕ ನಮ್ಮ ಸರ್ಕಾರ ಹೋಯಿತು. ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಈ ಬಗ್ಗೆ ಗಮನ ಕೊಡಲಿಲ್ಲ. ಹಾಗಾಗಿ ಈಗ ಕ್ಯಾಬಿನೆಟ್‌ನಲ್ಲಿ ತಂದು ಚರ್ಚೆ ಮಾಡುತ್ತೇವೆ. ಜಾತಿಗಣತಿ ಜಾರಿ ವಿಚಾರ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ಆಶಯದಂತೆ ಕೇಂದ್ರದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಜಾತಿಗಣತಿ ಜಾರಿ ವಿಚಾರವಿದೆ ಎಂದು ಹೇಳಿದರು.
ದಲಿತ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಸಿಎಂ ಅಧಿಕಾರ ಹಂಚಿಕೆಯಾಗಿದೆ ಅಂತ ನಿಮಗೆ ಯಾರು ಹೇಳಿದ್ದಾರೆ? ಅಧಿಕಾರ ಹಂಚಿಕೆ ವಿಚಾರ ಮಾಧ್ಯಮಗಳ ಸೃಷ್ಟಿ. ಎಲ್ಲಿಯೂ ಎರಡೂವರೆ ವರ್ಷ ಅಂತ ಚರ್ಚೆ ಆಗಿಲ್ಲ. ಡಿ.ಕೆ.ಸುರೇಶ ಅವರೇ ಹೇಳಿದ್ದಾರೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂದು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ವಿಶ್ವಾಸ ವ್ಯಕ್ತಪಡಿಸದರು.ಸಿ.ಪಿ.ಯೋಗೀಶ್ವರ್‌ಗೆ ಟಿಕೆಟ್ ಕೊಟ್ಟರೆ ಪಕ್ಷ ಎಲ್ಲಿ ಉಳಿಯುತ್ತದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವಿಚಾರಕ್ಕೆ ಉತ್ತರಿಸಿದ ಅವರು, ಆ ಪಕ್ಷ ಈಗ ಎಲ್ಲಿದೆ ಉಳಿಯೋಕೆ? ಎಂದು ವ್ಯಂಗ್ಯವಾಡಿದರು. ಜನ ಎಷ್ಟು ಅಂತಾ ಸಹಿಸಿಕೊಳ್ತಾರೆ, ರಾಮನಗರ ಇತ್ತು, ಅಲ್ಲಿ ಸೋತು ಸುಣ್ಣ ಆಗಿದ್ದಾರೆ. ಚನ್ನಪಟ್ಟಣ ಜನ ಆಯ್ಕೆ ಮಾಡಿದ್ರು, ಅವರನ್ನ ಕೇಳಿ ಎಂಪಿಗೆ ನಿಂತ್ಕೊಂಡ್ರಾ? ಗೆಲ್ಲಿಸಿದ ಚನ್ನಪಟ್ಟಣ ಜನಕ್ಕೆ ಒಂದು ಮಾತು ಹೇಳಿದ್ರಾ? ಪರ್ಮಿಷನ್ ತಗೊಂಡ್ರಾ? ಎಷ್ಟು ಅಂತ ಚನ್ನಪಟ್ಟಣ ಜನ ಇವರನ್ನು ಸಹಿಸಿಕೊಳ್ತಾರೆ? ಈ ಬಾರಿ ಚನ್ನಪಟ್ಟಣದಲ್ಲಿ ಮತದಾರರು ತಕ್ಕಪಾಠ ಕಲಿಸ್ತಾರೆ ಎಂದು ಗುಡುಗಿದರು.
ಸತೀಶ ಜಾರಕಿಹೊಳಿ ಮೈಸೂರು ನಾಯಕರ ಭೇಟಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಅವರು ಯಾರನ್ನು ಭೇಟಿ ಮಾಡಲೇಬಾರದಾ? ಮಾಮೂಲಿ ಮೈಸೂರು ಹೋಗ್ತಾರೆ ಬೆಳಗಾವಿ ಹೋಗ್ತಾರೆ. ನಾನು ಬಿಜಾಪುರಕ್ಕೆ ಬಂದಿದ್ದೀನಿ, ಇಲ್ಲಿ ಯಾರನ್ನಾದ್ರೂ ಭೇಟಿ ಮಾಡಿದರೆ ತಪ್ಪಾ ಎಂದು ಜಮೀರ್ ಪ್ರಶ್ನಿಸಿದರು.---
ಬಾಕ್ಸ್ಯಾರಪ್ಪನ ಆಸ್ತಿ ಎಂದು ವಕ್ಫ್ ಆಸ್ತಿ ಹಂಚೋದು?
ಶಾಸಕ ಯತ್ನಾಳ ವಿರುದ್ಧ ಹರಿಹಾಯ್ದ ಸಚಿವ ಜಮೀರ್ ಅಹ್ಮದ್, ವಕ್ಫ್ ಆಸ್ತಿ ಬಡವರಿಗೆ ಹಂಚಿ ಎಂದಿದ್ದ ಯತ್ನಾಳಗೆ ತಿರುಗೇಟು ನೀಡಿದರು. ಯಾರಪ್ಪನ ಆಸ್ತಿ ಎಂದು ವಕ್ಫ್ ಆಸ್ತಿ ಹಂಚೋದು?, ಇದು ನನ್ನಪ್ಪನ ಆಸ್ತಿ ಆಗಿದ್ರೆ ಬಡವರಿಗೆ ಹಂಚಬಹುದು. ಯತ್ನಾಳ ಅಪ್ಪನ ಆಸ್ತಿಯಾಗಿದ್ದರೆ ಬಡವರಿಗೆ ಹಂಚಬಹುದು. ಇದು ನನ್ನಪ್ಪನ ಆಸ್ತಿಯೂ ಅಲ್ಲ, ಯತ್ನಾಳ ಅಪ್ಪನ ಆಸ್ತಿಯೂ ಅಲ್ಲ. ದಾನಿಗಳು ಸಮಾಜಕ್ಕೆ ದಾನ ಮಾಡಿದ್ದು. ಮಿಸ್ಟರ್ ಯತ್ನಾಳ ಅವರೇ ಒಂದಿಂಚು ಸರ್ಕಾರಿ ಭೂಮಿಯನ್ನೂ ವಕ್ಫ್‌ಗೆ ತಗೊಂಡಿಲ್ಲ. ರಾಜ್ಯದಲ್ಲಿ 1.12 ಲಕ್ಷ ಎಕರೆ ದಾನ ಮಾಡಿರೋ ಭೂಮಿ ಇದೆ. ಇದನ್ನು ಯಾರಪ್ಪನ ಆಸ್ತಿ ಎಂದು ಬಡವರಿಗೆ ಹಂಚೋದು ಎಂದು ಯತ್ನಾಳಗೆ ಸಚಿವ ಜಮೀರ್ ಪ್ರಶ್ನಿಸಿದರು.----
ಕೋಟ್ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಯಾದ್ರೆ ತಾನೆ ಚರ್ಚೆ. ಆ ಕುರ್ಚಿಯಲ್ಲಿ ಟಗರು ಕುಳಿತಿದೆ. ಆ ಟಗರನ್ನು ಕೆಳಗೆ ಇಳಿಸೋದು ಅಷ್ಟು ಸುಲಭನಾ? ಟಗರನ್ನು ಅಲ್ಲಾಡಿಸಲು ಸಾಧ್ಯನಾ? ಐದು ವರ್ಷ ಸಿದ್ದರಾಮಯ್ಯರೇ ಸಿಎಂ ಎಂದು ನಾಯಕಿ ಸೋನಿಯಾ ಗಾಂಧಿ, ರಾಹುಲ್, ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
- ಜಮೀರ್ ಅಹ್ಮದ್ ಖಾನ್, ವಕ್ಫ್ ಸಚಿವ--------------