ರಾಮನಗರ: ನಿರುದ್ಯೋಗಿಗಳು, ಪದವೀಧರರ ಸಮಸ್ಯೆಗಳು ಹಾಗೂ ಅಕ್ರಮ ನೇಮಕಾತಿ ವಿರುದ್ಧ ಉದಯ್ ಸಿಂಗ್ ಧ್ವನಿಯಾಗುವುದರಲ್ಲಿ ಅನುಮಾನ ಇಲ್ಲ. ಪದವೀಧರರು ಪ್ರಜ್ಞಾವಂತ ವ್ಯಕ್ತಿಯಾಗಿರುವ ಅವರನ್ನು ಬೆಂಬಲಿಸಬೇಕು ಎಂದು ಕರ್ನಾಟಕ ವೈಜ್ಞಾನಿಕ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟಿನಲ್ಲಿ ವಕೀಲರು ಮತ್ತು ಸಿಂಡಿಕೇಟ್ ಸದಸ್ಯರಾಗಿರುವ ಉದಯ್ ಸಿಂಗ್ ರವರು ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಸಮಾಜ ಸೇವೆ ಜೊತೆಗೆ ನಿರುದ್ಯೋಗ ಸಮಸ್ಯೆ, ಅಕ್ರಮ ನೇಮಕಾತಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ವಿಧಾನ ಪರಿಷತ್‌ನಲ್ಲಿ ಕಿಂಗ್ ಬದಲು ಕಿಂಗ್ ಮೇಕರ್ ಆಗುವ ಎಲ್ಲ ಲಕ್ಷಣಗಳು ಉದಯ್ ಸಿಂಗ್ ಅವರಲ್ಲಿದೆ ಎಂದು ಹೇಳಿದರು.ಕೋವಿಡ್ ಕಾಲದಲ್ಲಿ ಸ್ಪಂದಿಸುವ ಮೂಲಕ ತಾವೊಬ್ಬ ಬದ್ಧತೆ ಉಳ್ಳ ವ್ಯಕ್ತಿ ಎಂಬುದನ್ನು ನಿರೂಪಿಸಿದ್ದಾರೆ. ಒಳ್ಳೆಯ ಚಿಂತಕ, ಜನರೊಂದಿಗೆ ಒಡನಾಡ ಹೊಂದಿದ್ದು, ಪದವೀಧರ ಯುವ ಮನಸ್ಸುಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಅವರು ಲೆಫ್ಟು ಅಲ್ಲ ರೈಟು ಅಲ್ಲ, ಹ್ಯುಮನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ನಟರಾಜ್ ಹೇಳಿದರು.
ಪರಿಷತ್ ಗೌರವಾಧ್ಯಕ್ಷ ಚಿಕ್ಕಹನುಮಂತೇಗೌಡ ಮಾತನಾಡಿ, ವಿಧಾನ ಪರಿಷತ್ ಚಿಂತಕರ ಚಾವಡಿ. ಅಲ್ಲಿ ಶಿಕ್ಷಕರು, ವಿದ್ಯಾವಂತರು ಹಾಗೂ ಚಿಂತಕರು ಇರಬೇಕು. ಆಗ ಮಾತ್ರ ನಿರುದ್ಯೋಗ, ಪದವೀಧರರ ಸಮಸ್ಯೆ ಹಾಗೂ ಭ್ರಷ್ಟಾಚಾರದ ವಿರುದ್ಧ ಸಂವಿಧಾನತ್ಮಕವಾಗಿ ಹೋರಾಟ ನಡೆಸಲು ಸಾಧ್ಯವಾಗಲಿದೆ. ಆ ಎಲ್ಲ ಗುಣಗಳು ಉದಯ್ ಸಿಂಗ್ ಅವರಲ್ಲಿದೆ ಎಂದರು.ನಾವು ಐದಾರು ಚುನಾವಣೆಗಳನ್ನು ನೋಡಿದ್ದೇವೆ. ಈವರೆಗೆ ಗೆದ್ದವರು ಯಾರೂ ಪದವೀಧರರ ಪರವಾಗಿ ಧ್ವನಿ ಎತ್ತಲ್ಲೇ ಇಲ್ಲ. ಹಾಗಾಗಿ ಈಗ ಪದವೀಧರರನ್ನು ನೋಂದಣಿ ಮಾಡಿಸಿ ಮತದಾರರಲ್ಲಿ ಅರಿವು ಮೂಡಿಸಲಾಗಿದೆ. ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗಲು ಪ್ರಜ್ಞಾವಂತ ವ್ಯಕ್ತಿಯಾಗಿರುವ ಉದಯ್ ಸಿಂಗ್ ಅವರನ್ನು ಮೇಲ್ಮನೆಗೆ ಕಳುಹಿಸೋಣ ಎಂದು ಹೇಳಿದರು.
ಪರಿಷತ್ ನ ಉಪಾಧ್ಯಕ್ಷ ಡಾ.ಆನಂಜನಪ್ಪ ಮಾತನಾಡಿ, ಹಳ್ಳಿಗಾಡಿನಿಂದ ಕಷ್ಟ ಸುಖ ನೋಡಿಕೊಂಡು ಬಂದವರು.ಅವರಿಗೆ ಸಮಾಜ ದ ಕಷ್ಟ ಗೊತ್ತಿದ್ದು, ಸಾಮಾಜಿಕ ಜವಾಬ್ದಾರಿ ಉಳ್ಳವರಾಗಿದ್ದಾರೆ. ಪದವೀಧರರ ಆತ್ಮ ಗೌರವ ರಕ್ಷಣೆ ಮಾಡಲು ಉದಯ್ ಸಿಂಗ್ ಸ್ಪರ್ಧೆ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.ಮುಖಂಡ ಮಧು ಕುಮಾರ್ ಮಾತನಾಡಿ, ಚಿಂತಕರ ಚಾವಡಿ ಎನಿಸಿಕೊಳ್ಳುವ ವಿಧಾನ ಪರಿಷತ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಚರ್ಚೆಗಳು ನಡೆಯುತ್ತಿಲ್ಲ. ನಾಲ್ಕೈದು ಸದಸ್ಯರನ್ನು ಹೊರತು ಪಡಿಸಿದರೆ ಉಳಿದ ಸದಸ್ಯ ಹೆಸರುಗಳೇ ಜನರಿಗೆ ಗೊತ್ತಿಲ್ಲ. ಇದರ ಅರ್ಥ ಅವರೆಲ್ಲರು ನಿಷ್ಕ್ರೀಯರಾಗಿದ್ದಾರೆ ಎಂಬುದಾಗಿದೆ ಎಂದು ಕಿಡಿಕಾರಿದರು.
ಕಾನೂನಿನ ಅರಿವಿರುವ ಹಾಗೂ ಸಿಂಡಿಕೇಟ್ ಸದಸ್ಯರಾಗಿರುವ ಉದಯ್ ಸಿಂಗ್ ವಿಧಾನ ಪರಿಷತ್ ಗೆ ಹೋಗಲು ಅಸರ್ಹರಾಗಿದ್ದು, ಅವರು ಆಯ್ಕೆಯಾದಲ್ಲಿ ಮೇಲ್ಮನೆಯಲ್ಲಿ ಚರ್ಚೆ, ವಿಮರ್ಶೆ ಹಾಗೂ ಹೋರಾಟಗಳು ನಡೆಯುತ್ತವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರೇಣುಕಾಪ್ರಸಾದ್ , ಪೂರ್ಣಚಂದ್ರ, ಚಂದ್ರು ಇದ್ದರು.23ಕೆಆರ್ ಎಂಎನ್ 1.ಜೆಪಿಜಿ
ಕರ್ನಾಟಕ ವೈಜ್ಞಾನಿಕ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.