ಕನಕಗಿರಿ: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ನಮ್ಮ ಹೆಗ್ಗುರುತು. ಅದನ್ನು ಹೆಚ್ಚಾಗಿ ಬಳಸಿ, ಉಳಿಸಿ, ಬೆಳೆಸುವ ಮೂಲಕ ನಾವೆಲ್ಲರೂ ಕನ್ನಡಮ್ಮ ಸೇವೆ ಮಾಡೋಣ ಎಂದು ತಹಸೀಲ್ದಾರ ವಿಶ್ವನಾಥ ಮುರುಡಿ ಹೇಳಿದರು.
ಪಟ್ಟಣದ ಕೆಪಿಎಸ್ ಮೈದಾನದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ 70ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಶನಿವಾರ ಮಾತನಾಡಿದರು.ಕನ್ನಡದ ಏಕೀಕರಣ ಹೋರಾಟದ ನಂತರ ನಾಡಿನ ಸಂಸ್ಕೃತಿ ಹಾಗೂ ಪರಂಪರೆಯ ಶ್ರೀಮಂತಿಕೆ ಇಮ್ಮಡಿಯಾಯಿತು.
1956 ನ.1ರಂದು ದಕ್ಷಿಣ ಭಾರತದ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ (ಕರ್ನಾಟಕ) ಎಂದು ರಚಿಸಲಾಯಿತು. ಜಿಲ್ಲೆಯಲ್ಲಿ ಎಲೆಮರಿಕಾಯಿಯಂತೆ ನಮ್ಮ ನಾಡು, ನುಡಿ ಬೆಳೆಸುವ ನಿಟ್ಟಿನಲ್ಲಿ ಮೂರು ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. ಜಾನಪದ ಕ್ಷೇತ್ರದಲ್ಲಿ ಬರಮಪ್ಪ ಚೌಡ್ಕಿ, ಸಂಗೀತ ಕ್ಷೇತ್ರದಲ್ಲಿ ದೇವೇಂದ್ರಕುಮಾರ ಪತ್ತಾರ ಹಾಗೂ ಸಹಕಾರ ಕ್ಷೇತ್ರದಲ್ಲಿ ಶೇಖರಗೌಡ ಮಾಲಿ ಪಾಟೀಲರಿಗೆ ಪ್ರಶಸ್ತಿ ದೊರಕಿದ್ದು ಹೆಮ್ಮೆ ವಿಷಯವಾಗಿದೆ ಎಂದರು.ನಂತರ ತಾಯಿ ಕನ್ನಡಾಂಬೆ ಹಾಗೂ ಸ್ತಬ್ದಚಿತ್ರ ಮೆರವಣಿಗೆಗೆ ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಚಾಲನೆ ನೀಡಿದರು. ಸುವರ್ಣಗಿರಿ ಸಂಸ್ಥಾನ ಮಠದಿಂದ ಆರಂಭವಾದ ಅದ್ಧೂರಿ ಮೆರವಣಿಗೆ ರಾಜಬೀದಿಯ ಮಾರ್ಗವಾಗಿ ಕನಕಾಚಲಪತಿ ವೇದಿಕೆಯವರೆಗೆ ಸಾಗಿತು.ಸಿದ್ದಾಪೂರದ ಹಗಲುವೇಷಗಾರರ ರಾಮಾಯಣ, ಮಹಾಭಾರತದ ಸನ್ನಿವೇಶದ ನೃತ್ಯ, ಅಲೆಮಾರಿಗಳ ಡ್ರಮ್ ಸೆಟ್ ಕಲಾವಿದರಿಂದ ತಾಷಾ,ಹಲಗೆ ವಾದನ ನೋಡುಗರ ಗಮನ ಸೆಳೆಯಿತು.
ಮಧ್ಯಾಹ್ನ ಅವಧಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯ, ಕಲಾವಿದ ಜೀವನಸಾಬ ಬಿನ್ನಾಳ್ ಜಾನಪದ ಸೊಗಡು ಹಾಗೂ ಗಾಯಕರಿಂದ ಕನ್ನಡ ಚಲನಚಿತ್ರ ಗೀತೆಗಳ ಪ್ರದರ್ಶನ ಅಚ್ಚುಕಟ್ಟಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಸಿಪಿಐ ಎಂ.ಡಿ. ಪೈಜುಲ್ಲಾ, ಸಿಡಿಪಿಒ ವಿರೂಪಾಕ್ಷ, ತಾಪಂ ಇಒ ರಾಜಶೇಖರ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಅನಿಲ ಬಿಜ್ಜಳ್, ಸಂಗಪ್ಪ ಸಜ್ಜನ್, ಹನುಮಂತ ಬಸರಿಗಿಡ, ರಾಕೇಶ ಕಂಪ್ಲಿ, ರಾಜಸಾಬ್ ನಂದಾಪೂರ, ಕನ್ನಡಪರ ಸಂಘಟಕ ಶರಣಪ್ಪ ಪಲ್ಲವಿ, ಶರಣಪ್ಪ ಸಜ್ಜನ, ವಿರೇಶ ಮಿಟ್ಲಕೋಡ, ಹನುಮೇಶ ಮಹಿಪತಿ, ಲಿಂಗಪ್ಪ ಪೂಜಾರ, ಶಾಂತಪ್ಪ ಬಸರಿಗಿಡ, ಗಂಗಾಧರ ಚೌಡ್ಕಿ, ಕನಕಪ್ಪ ಮ್ಯಾಗಡೆ ಸೇರಿದಂತೆ ಇತರರಿದ್ದರು. ಶಿಕ್ಷಕರಾದ ಕನಕಾಚಲ, ಶಾಮೀದಸಾಬ್ ಲಯನ್ದಾರ ನಿರೂಪಿಸಿ, ವಂದಿಸಿದರು.