ಜಾತಿ ಹೆಸರಲ್ಲಿ ದೇಶ ಕಟ್ಟುವ ಮೋದಿ ಪ್ರಯತ್ನ ತಡೆಯೋಣ: ಪಿಜಿಆರ್‌ ಸಿಂಧಿಯಾ

KannadaprabhaNewsNetwork | Published : Apr 18, 2024 2:27 AM

ಸಾರಾಂಶ

ದೇಶಕ್ಕೆ ಮೋದಿಯಂತಹ ದುಬಾರಿ ಪ್ರಧಾನಿ ಬೇಕಾ? ಎಂದು ಶಾಸಕ ಬಿಆರ್‌ ಪಾಟೀಲ್‌ ಪ್ರಶ್ನಿಸಿದರು. ಬೀದರ್‌ ನಗರದ ಗಣೇಶ ಮೈದಾನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಪ್ರಚಾರದ ಬಹಿರಂಗ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಜಾತಿ ಹೆಸರಿನಲ್ಲಿ ದೇಶ ಕಟ್ಟಲು ಸಾಧ್ಯವಿಲ್ಲ. ದೇಶದಲ್ಲಿ ಯಾವುದೇ ಒಂದು ಜಾತಿಯಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಜಾತಿ ಹೆಸರಿನಲ್ಲಿ ದೇಶ ಕಟ್ಟಲು ಹೊರಟಿದ್ದಾರೆ ಇದು ಸರಿಯಲ್ಲ ಎಂದು ಮಾಜಿ ಸಚಿವ ಪಿಜಿಆರ್‌ ಸಿಂಧಿಯಾ ತಿಳಿಸಿದರು.

ಬುಧವಾರ ನಗರದ ಗಣೇಶ ಮೈದಾನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಪ್ರಚಾರದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಾಗರ ಖಂಡ್ರೆಗೆ ಒಳ್ಳೆಯ ಭವಿಷ್ಯವಿದೆ. ಯುವಕನಿಗೆ ಅವಕಾಶ ನೀಡಿ ಬೀದರ್ ಜಿಲ್ಲೆಯ ಚಿತ್ರಣವೇ ಬದಲಾವಣೆ ಮಾಡಬಲ್ಲ ಎಂದರು.ಮುಖ್ಯಮಂತ್ರಿಗಳ ಸಲಹೆಗಾರ ಶಾಸಕ ಬಿಆರ್‌ ಪಾಟೀಲ್‌ ಮಾತನಾಡಿ, ದೇಶದಲ್ಲಿ ಸಂವಿಧಾನ ಉಳಿಸುವುದಲ್ಲದೇ ದೇಶ ಉಳಿಸುವುದು ಕೂಡ ಅಗತ್ಯತೆ ಇದೆ. ದೇಶದ ಜನರ ಮುಂದೆ ಕಣ್ಣೀರು ಸುರಿಸುವ ಮೋದಿ ರೈತರ, ಕಾರ್ಮಿಕರ ವಿರೋಧಿಯಾಗಿದ್ದಾರೆ. ದೇಶದ ಆರ್ಥಿಕ ಸ್ಥೀತಿ ಅಧೋಗತಿಯತ್ತ ಸಾಗದಂತೆ ತಡೆಯಿರಿ ಎಂದರು.

ಕುಟುಂಬವೇ ಇಲ್ಲದ ನರೇಂದ್ರ ಮೋದಿ ಅವರಿಗೆ ವಿಲಾಸಿ ಜೀವನ ಏಕೆ ಬೇಕು, ದೇಶಕ್ಕೆ ಇಂತಹ ದುಬಾರಿ ಪ್ರಧಾನಿ ಬೇಕಾ ಎಂದು ಪ್ರಶ್ನಿಸಿ, ಹಿಂದಿನ ಪಾರ್ಲಿಮೆಂಟ್‌ ಹೌಸ್‌ ಇನ್ನೂ ಗಟ್ಟಿಯಾಗಿದೆ. ಆದರೆ 500 ಕೋಟಿ ಖರ್ಚು ಮಾಡಿ ನೂತನ ಕಟ್ಟಡ ಕಟ್ಟಿದ್ದಾರೆ. 1700ಕೋಟಿ ರು. ವಿಮಾನಕ್ಕೆ ಖರ್ಚು ಮಾಡಿದ್ದಾರೆ 6 ಕಾರು 72 ಕೋಟಿ ರು. ವೆಚ್ಚದಲ್ಲಿ ಖರೀದಿಸಿದ್ದಾರೆ. ವಿಲಾಸಿ ಜೀವನಕ್ಕೆ ಯಾರ ದುಡ್ಡು ಖರ್ಚು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಇದ್ದ ಅನೇಕ ಪ್ರಧಾನಿಗಳು ಇಷ್ಟು ದುಂದು ವೆಚ್ಚ ಮಾಡಿಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ಮಾತನಾಡಿ, ದೇಶದಲ್ಲಿ 2ನೇ ಬಾರಿಗೆ ಗೆಲವು ಸಾಧಿಸಿದ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಪರಿಸ್ಥಿಯನ್ನು ಅಧೋಗತಿಯತ್ತ ಕೊಂಡೊಯ್ದಿದ್ದಾರೆ. ಅದು ಮತ್ತಷ್ಟು ವಿಕೋಪಕ್ಕೆ ಹೋಗದಂತೆ ತಡೆಯಬೇಕಾಗಿದೆ. ಹೀಗಾಗಿ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರದಂತೆ ತಡೆಯುವ ಜವಾಬ್ದಾರಿ ಜನರ ಮೇಲಿದೆ ಎಂದು ನುಡಿದರು.

ದೇಶದಲ್ಲಿ ಬದಲಾವಣೆ ಪರ್ವ ಆರಂಭವಾಗಿದ್ದು ಇದು ಬೀದರ್‌ನಿಂದ ಆರಂಭ ಮಾಡಿ ಎಂದು ಜನರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಶಾಸಕ ಡಾ. ಅಜಯಸಿಂಗ್‌ ಕರೆ ನೀಡಿದರು. ಎಲ್ಲರು ಒಗ್ಗಟ್ಟಾಗಿ ಸಾಗರ ಖಂಡ್ರೆ ಅವರನ್ನು ಗೆಲ್ಲಿಸೋಣ ಎಂದರು.

ಮಾಜಿ ಸಚಿವ ರಾಜಶೇಖರ ಪಾಟೀಲ್‌ ಮಾತನಾಡಿ, ಸಾಗರ ಖಂಡ್ರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ. ಮಲ್ಲಿಕಾರ್ಜುನ ಖರ್ಗೆ ಕೈ ಬಲಪಡಿಸಬೇಕಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಎಲ್ಲರ ಭರವಸೆಗಳು ಈಡೇರಿಸಿದ್ದೇವೆ. 371 (ಜೆ) ಜಾರಿಗೆ ಬಂದಿದ್ದರಿಂದ ಅನೇಕ ಮಕ್ಕಳಿಗೆ ಅನುಕೂಲವಾಗಿದೆ ಎಂದು ನುಡಿದರು.

Share this article