ಬೆಳೆಗೆ ವಿಷ ಸಿಂಪಡಿಸಿ ಜೀವಕ್ಕೆ ಕುತ್ತು ತರುವ ಪದ್ಧತಿ ನಿಲ್ಲಲಿ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ಮೂಡಲಗಿಯ ವಡೇರಹಟಿಯಲ್ಲಿ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಗುರು ನಮನ ಮಹೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಬಯಲಲ್ಲಿ ಬಯಲಾಗಿ ಹೋಗುವುದೇ ಜೀವನ ಎಂದು ಹೇಳಿದ ಸಿದ್ದೇಶ್ವರ ಸ್ವಾಮೀಜಿ ಮಾತುಗಳು ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು. ನಾವು ಎಷ್ಟೇ ಗಳಿಸಿದರೂ, ಕೋಟಿ, ಕೋಟಿ ಕೂಡಿಟ್ಟರು ಎಲ್ಲವನ್ನು ಇಲ್ಲೆ ಬಿಟ್ಟು ಸಿದ್ದೇಶ್ವರ ಸ್ವಾಮೀಜಿಯವರ ಮಾತಿನಂತೆ ಬಯಲಲ್ಲಿ ಬಯಲಾಗಿಯೇ ಹೋಗುವುದು ಶತಸಿದ್ಧ. ಹೀಗಿರುವಾಗ ಕೃಷಿಯಲ್ಲಿ ಲಾಭದಾಯಕದ ಆಸೆಗಾಗಿ ಎಲ್ಲ ಬೆಳೆಗಳಿಗೂ ವಿಷ ಸಿಂಪಡಿಸಿ ಎಲ್ಲರ ಜೀವಕ್ಕೂ ಕುತ್ತು ತರುವ ಪದ್ಧತಿ ನಿಲ್ಲಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲೂಕಿನ ವಡೇರಹಟ್ಟಿ ಗ್ರಾಮದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಆಶ್ರಮದಲ್ಲಿ ಆಯೋಜಿಸಿದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ, ಸಿದ್ದಲಿಂಗ ಮಹಾಸ್ವಾಮೀಜಿ ಹಾಗೂ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮೀಜಿ ಗುರು ನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ರಾಸಾಯನಿಕ ಗೊಬ್ಬರವನ್ನು ನಮ್ಮ ಭೂಮಿಗೆ ಹಾಕುವುದರಿಂದ ಆಗುವ ನಷ್ಟದ ಬಗ್ಗೆ ಅರಿಯಬೇಕಾಗಿದೆ. ಕೃಷಿ ಬರೀ ಲಾಭದಾಯಕ ಉದ್ಯೋಗವಾದ ಪರಿಣಾಮ ಇಂದಿನ ದಿನ ನಮಗೆ ಅನ್ನ ನೀಡುವ ಭೂಮಿಗೆ, ಹಾಲು ಕೊಡುವ ಗೋವಿಗೆ, ನಮ್ಮ ಮಕ್ಕಳಿಗೂ, ನಮ್ಮ ಕುಟುಂಬಗಳಿಗೂ ವಿಷಪೂರಿತ ಆಹಾರವನ್ನು ನೀಡುತ್ತಿರುವುದು ದುರಂತದ ವಿಷಯ. ನಾವೆಲ್ಲರೂ ಯಾವ ರೈತ ತನ್ನ ಬೆಳೆಗಳಿಗೆ ವಿಷ ಸಿಂಪಡಿಸದೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಾನೊ ಅಂತಹವನನ್ನು ಕೈ ಮುಗಿದು ಗೌರವಿಸೋಣ. ಅಂತಹ ರೈತರನ್ನು ನೋಡಿ ಹೆಮ್ಮೆ ಪಡುವ ಮೂಲಕ ಅವರನ್ನು ಪ್ರೋತ್ಸಾಹಿಸೋಣ. ಸಾವಯವ ಕೃಷಿ ಪದ್ಧತಿಗೆ ಬೆಂಬಲ ಸೂಚಿಸೋಣ ಎಂದರು.

ಸಿದ್ದೇಶ್ವರ ಶ್ರೀಗಳು ತಮ್ಮ ಜೀವನದುದ್ದಕ್ಕೂ ಸಮಾಜದ ಏಳಿಗೆಗಾಗಿ ಶ್ರಮಿಸಿ, ಸಮಾಜಕ್ಕೆ ಮಾದರಿಯಾಗಿ ಲಕ್ಷಾಂತರ ಜನರಿಗೆ ದಾರಿದೀಪವಾದ ದಿವ್ಯ ಚೇತನರಾಗಿದ್ದಾರೆ. ಜ್ಞಾನ ದಾಸೋಹದ ಮೂಲಕ ನಮ್ಮೆಲ್ಲರ ಬದುಕನ್ನು ಪರಿವರ್ತನೆ ಮಾಡಿ ಅವರ ಬೆಳಕನ್ನು ಚೆಲ್ಲಿದ್ದು, ಪ್ರತಿಯೊಂದು ಜೀವಿಗಳಲ್ಲಿ ಅವರ ಆರ್ದಶಗಳನ್ನು, ತತ್ವಗಳನ್ನು ಪಾಲಿಸಿ, ಅಪರೂಪದ ಸಂತರೆಂದು ಅವರ ಬದುಕಿನ ಗುಣದಾನ ಮಾಡಿ ಭಕ್ತಿಯಿಂದ ಸ್ಮರಿಸಿದರು.

ಮನುಷ್ಯನ ಸ್ವಭಾವವನ್ನು ಒಂದೇ ಸಲ ತಿದ್ದಲು ಸಾಧ್ಯವಿಲ್ಲ. ಪ್ರತಿನಿತ್ಯ ಪ್ರವಚನ, ಆಧ್ಯಾತ್ಮಿಕ ಚಟುವಟಿಕಗಳಿಗೆ ನಮ್ಮನ್ನು ನಾವೇ ತೋಡಗಿಸಿಕೊಳ್ಳುವುದರ ಮುಖಾಂತರ ಪೂಜ್ಯರು ಹೇಳಿದ ಮಾತನ್ನು ನಮ್ಮ ವೈಯಕ್ತಿಕ ಬದುಕಿಗೆ ಅಳವಡಿಸಿಕೊಳ್ಳುವ ಮೂಲಕ ಒಂದು ಸ್ವಲ್ಪ ಬದಲಾವಣೆಯಾಗಲಿಕ್ಕೆ ಸಾಧ್ಯವಿದೆ. ಗುರುವಿನ ಕೃಪೆಗೆ ಪಾತ್ರರಾಗಬೇಕಾದರೇ ಪೂಜ್ಯರುಗಳು ಮಾಡಿಹೊದ ಕೆಲಸಗಳನ್ನು ನಮ್ಮ ಜೊತೆಗೆ ಇವೆ. ಪರಂಪರೆಯನ್ನು ಮಂದುವರಿಸುವಂತಹ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡೋಣ ಪ್ರತಿ ವರ್ಷವು ಕೂಡಾ ಗುರು ನಮನ ಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ, ನಡೆಯಲಿ ನಮ್ಮ ಬದುಕಿನಲ್ಲಿ ಒಂದಿಷ್ಟು ಬದಲಾವಣೆ ತರಲಿ ಎಂದರು.

ನಾಡಿನ ಚಿಂತಕ, ಶಿಕ್ಷಕ ಅಶೋಕ ಹಂಚಲಿ ಅವರು ರೈತನ ಬದುಕು, ಹಳ್ಳಿಯ ಸೋಗಡು, ಜಾನಪದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕವಲಗುಡ್ಡ ಅಮರೇಶ್ವರ ಮಹಾರಾಜರು, ಗುರುಪ್ರಸಾದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಮಾರುತಿ ತೋಳಮರಡಿ, ನಾರಾಯಣ ಸ್ವಾಮೀಜಿ, ಹಾಲಪ್ಪ ಮಳಿವಡೇರ, ಶ್ರೀಶೈಲ ತುಪ್ಪದ, ಮಾರುತಿ ಪೂಜೇರಿ, ಭಗವಂತ ಧರ್ಮಟ್ಟಿ, ಶಂಕರ ಧರ್ಮಟ್ಟಿ ಸೇರಿದಂತೆ ಸ್ಥಳೀಯ ಮುಖಂಡರು, ಆಶ್ರಮದ ಭಕ್ತಾಧಿಗಳು ಉಪಸ್ಥಿತರಿದ್ದರು.

Share this article