ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮೂರು ದಿನಗಳ ನಡೆಯುವ ಮುತ್ತುರಾಯಸ್ವಾಮಿ ದೇವರ ಹಬ್ಬದ ಅಂಗವಾಗಿ ಶನಿವಾರ ರಾತ್ರಿ ಇಡೀ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೂಲಕ ಬಂಡಿ ಉತ್ಸವ, ಮುತ್ತುರಾಯಸ್ವಾಮಿ ಉತ್ಸವ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಲಾಯಿತು. ಪಟಾಕಿ, ಮದ್ದು,ಗುಂಡು ಸಿಡಿಸಿ ಸಂಭ್ರಮಿಸಿದರು. ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಪಟ್ಟಣದ ಅಗ್ರಹಾರ ಬಡಾವಣೆ, ಅಂಬೇಡ್ಕರ್ ನಗರದ ಎಲ್ಲಾ ವರ್ಗದ ಜನರು ಒಟ್ಟಿಗೆ ಸೇರಿ ಮುತ್ತುರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಹಾಗೂ ಬಂಡಿ ಉತ್ಸವ ಮತ್ತು ಹಬ್ಬವನ್ನು ಅತ್ಯಂತ ಭಕ್ತಿಯಿಂದ ಆಚರಿಸಿದರು.ಉತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಮನೆ, ದೇವಾಲಯದ ಆವರಣದಲ್ಲಿ ಬಗೆಬಗೆಯ ಬಣ್ಣದ ರಂಗೋಲಿಯಿಟ್ಟು ಸಂಭ್ರಮಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಮಹಿಳೆಯರು, ಯುವತಿಯರು ತಲೆಯ ಮೇಲೆ ಪೂರ್ಣ ಕುಂಭ ಕಳಸವನ್ನು ಹೊತ್ತು, ಬಾಯಿ ಬೀಗ ಹಾಕಿಸಿಕೊಳ್ಳುವ ಮೂಲಕ ಹರಕೆ ಹೊತ್ತು ಭಕ್ತಿ ಪ್ರದರ್ಶಿಸಿದರು. ರಥೋತ್ಸವಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಉಚಿತವಾಗಿ ನೀರು, ಮಜ್ಜಿಗೆ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.