ಡಂಬಳ: ಡಂಬಳ ಮತ್ತು ಹಿರೇವಡ್ಡಟ್ಟಿ ಗ್ರಾಮದ ಮಧ್ಯೆ ಭಾಗದಲ್ಲಿ ಬರುವ ಜಮೀನುಗಳಲ್ಲಿ ಇರುವ 50ಕ್ಕೂ ಹೆಚ್ಚು ಜಿಂಕೆಗಳ ಹಿಂಡು ರೈತ ಸಿದ್ದಪ್ಪ ಬಂಡಾರಿ ಎಂಬುವವರ 2 ಎಕರೆದಲ್ಲಿ ಬೆಳೆದಿದ್ದ ಅಲಸಂದಿ ಬೆಳೆ ಹೊಲಕ್ಕೆ ನುಗ್ಗಿ ನಾಶ ಮಾಡಿವೆ.
ಬೆಳೆದ ಬೆಳೆಯನ್ನು ಉಳಿಸಿಕೊಳ್ಳಬೇಕೆಂದು ರೈತರು ಹಗಲು ರಾತ್ರಿ ಕಾಯುತ್ತಿದ್ದಾರೆ.
ಒಂದೊಂದು ಹಿಂಡಿನಲ್ಲಿ 40ರಿಂದ 50ರಷ್ಟಿರುವ ಜಿಂಕೆಗಳು ಕೇವಲ ಅರ್ಧ ಗಂಟೆಯಲ್ಲಿ 2ರಿಂದ 4 ಎಕರೆ ಪ್ರದೇಶದಲ್ಲಿನ ಬೆಳೆಗಳನ್ನು ನಾಶಪಡಿಸುತ್ತಿವೆ. ಮನುಷ್ಯನ ವಾಸನೆ ಬಂದೊಡನೆಯೇ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ ಎನ್ನುತ್ತಾರೆ ರೈತರು.ಬೆಳೆ ರಕ್ಷಿಸಿಕೊಳ್ಳಲು ಬೆಳಗ್ಗೆಯಿಂದ ಸಂಜೆಯವರೆಗೂ ಹಾಗೂ ರಾತ್ರಿಯಿಂದ ಬೆಳಗಿನವರೆಗೂ ಸರದಿಯಲ್ಲಿ ಕಾಯಬೇಕಿದೆ. ಸ್ವಲ್ಪ ಯಾಮಾರಿದರೂ ಜಿಂಕೆಗಳು ಜಮೀನಿಗೆ ಬಂದು ಪೈರು ತಿಂದು ಹಾಕುತ್ತವೆ ಎನ್ನುವುದು ಈ ಭಾಗದ ರೈತರ ಆರೋಪವಾಗಿದೆ.
ಜಿಂಕೆಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳಬೇಕು ಮತ್ತು ಜಿಂಕೆಗಳ ದಾಳಿಯಿಂದಾಗಿ 2 ಎಕರೆಯಲ್ಲಿ ಸಾಲ ಮಾಡಿ ಬೆಳೆದಿದ್ದ ಆಲಸಂದಿ ಬೆಳೆ ಹಾನಿಯಾಗಿದ್ದು ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಡಂಬಳ ಗ್ರಾಮದ ಸಿದ್ದಪ್ಪ ಬಂಡಾರಿ ಹೇಳಿದರು.