ರಾಜೀನಾಮೆ ನಿರ್ಧಾರದಿಂದ ಹೊರಟ್ಟಿ ಹಿಂದಕ್ಕೆ: ಸಭಾಪತಿ ಬಸವರಾಜ ಹೊರಟ್ಟಿ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ಸದನದಲ್ಲಿ ಸದಸ್ಯರ ವರ್ತನೆಯಿಂದ ಬೇಸರಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಹಿತೈಷಿಗಳು, ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಹುಬ್ಬಳ್ಳಿ: ಸದನದಲ್ಲಿ ಸದಸ್ಯರ ವರ್ತನೆಯಿಂದ ಬೇಸರಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಹಿತೈಷಿಗಳು, ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಈ ವಿಷಯ ಮಾಧ್ಯಮ ಪ್ರತಿನಿಧಿಗಳ ಎದುರು ಸ್ಪಷ್ಟಪಡಿಸುವಾಗ ಕೆಲಕ್ಷಣ ಭಾವುಕರಾಗಿದ್ದ ಹೊರಟ್ಟಿ, ಸದನ ಇಷ್ಟು ಕೆಳಮಟ್ಟಕ್ಕೆ ಹೋಗಿದ್ದನ್ನು ಎಂದೂ ಕಂಡಿಲ್ಲ ಎಂದರು.

ಮೇಲ್ಮನೆಯಲ್ಲಿ ನಡೆದ ಅಹಿತರಕ ಘಟನೆಯಿಂದ ಮನನೊಂದು ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿ ಸಲ್ಲಿಸಲು ಮುಂದಾಗಿದ್ದರು. ಆದರೆ, ತಾಂತ್ರಿಕ ಸಮಸ್ಯೆಯಿಂದ ಅದು ಅಂಗೀಕಾರವಾಗುವುದಿಲ್ಲ ಎಂಬುದನ್ನು ಅಧಿಕಾರಿ ವರ್ಗ ತಿಳಿಸಿದ್ದರಿಂದ ರಾಜೀನಾಮೆ ಪತ್ರ ಸಲ್ಲಿಸಿರಲಿಲ್ಲ. ಅದೀಗ ಯಾರದೋ ಕೈಗೆ ಸಿಕ್ಕು ವೈರಲ್‌ ಆಗಿದೆ.

ಆಗಿರುವುದೇನು?

ಹನಿಟ್ರ್ಯಾಪ್‌ ವಿಷಯವಾಗಿ ಸದನದಲ್ಲಿ ಭಾರೀ ಗದ್ದಲ, ಗಲಾಟೆಯಾಗಿದೆ. ಈ ವೇಳೆ ಕೆಲ ಸದಸ್ಯರು ಸಭಾಪತಿ ಸ್ಥಾನಕ್ಕೆ ಅವಮಾನವಾಗುವಂತೆ ಟೀಕಿಸಿದ್ದರು. ಇದರಿಂದ ಬೇಸತ್ತು ರಾಜೀನಾಮೆ ಕೊಡಲು ಹೊರಟ್ಟಿ ಮುಂದಾಗಿದ್ದರು. ಜತೆಗೆ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದರು. ಏಪ್ರಿಲ್‌ 1ರಿಂದ ಸಭಾಪತಿ ಸ್ಥಾನದಲ್ಲಿ ಇರುವುದಿಲ್ಲ ಎಂಬ ಒಕ್ಕಣಿ ಕೂಡ ಅದರಲ್ಲಿತ್ತು. ಆದರೆ, ರಾಜೀನಾಮೆ ಪತ್ರಕ್ಕೆ ಮಾ.18 ರ ದಿನಾಂಕ ನಮೂದಾಗಿತ್ತು. ನಿಯಮದ ಪ್ರಕಾರ ರಾಜೀನಾಮೆ ಪತ್ರದಲ್ಲಿ ನಮೂದಿಸಿದ ದಿನವೇ ರಾಜೀನಾಮೆ ಸಲ್ಲಿಸಬೇಕು. ಮುಂದಿನ ದಿನಾಂಕ ಹಾಕುವಂತಿಲ್ಲ. ಇದನ್ನು ಪರಿಷತ್‌ ಕಾರ್ಯದರ್ಶಿಗಳು ಸಭಾಪತಿಗಳ ಗಮನಕ್ಕೆ ತಂದ್ದು, ಆ ಪತ್ರವನ್ನು ಹಿಂದುರಿಗಿಸಿದ್ದಾರೆ. ಅದು ಈಗ ಯಾರದೋ ಕೈಗೆ ಸಿಕ್ಕು ವೈರಲ್‌ ಆಗಿದೆ.

ಭಾನುವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಸಾಕಾಗಿ ಹೋಗಿದೆ. ಸದನದಲ್ಲಿ ಹನಿಟ್ರ್ಯಾಪ್‌ ಪ್ರಕರಣದ ಗದ್ದಲದಿಂದ ಬೇಸರವಾಗಿದೆ. ಕಾಲ ಕೆಟ್ಟಿದೆ. ಜನರಿಗೆ ಮೋಸ ಮಾಡುವ ಟ್ರೆಂಡ್‌ ಬಂದಿದೆ. ಅದೀಗ ವಿಧಾನ ಮಂಡಲಕ್ಕೂ ಬಂದಂತಾಗಿದೆ ಎಂದಿದ್ದರು.

ಸದನದ ಗೌರವ ಹೋಗಿ ಬಹಳ ದಿನ ಆಗಿದೆ. ಕಾಲ ಕೆಟ್ಟಿದೆ. ಚುನಾವಣೆಯಲ್ಲಿ ಸೋಲಿಸಲು ಆಗದಿದ್ದರೆ ಈ ತರಹ ಟಾರ್ಗೆಟ್‌ ಮಾಡಲಾಗುತ್ತಿದೆ. ಸದನದಲ್ಲಿನ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತರಿಸಿದೆ. ಸದನದ ನಿಯಂತ್ರಿಸುವಲ್ಲಿ ನಾನು ವಿಫಲವಾಗಿದ್ದೇನೆ. ಮೇಲ್ಮನೆ ಚಿಂತಕರ ಚಾವಡಿ ಅಂತ ಕರೆಯುತ್ತೇವೆ. ಆದರೆ ಪ್ಲೇಕಾರ್ಡ್‌ ಹಿಡಿದು ಬಂದು ಘೋಷಣೆ ಕೂಗಿದರು. ಗದ್ದಲದಲ್ಲಿ ಕೆಲ ಬಿಲ್‌ಗಳು ಪಾಸ್ ಆಗಿವೆ. ಏನೂ ಚರ್ಚೆಯೇ ಆಗದೆ ಬಿಲ್ ಪಾಸ್ ಆಗುತ್ತಿವೆ. ಮುಸ್ಲಿಂ ಮೀಸಲಾತಿ ವಿಚಾರದ ಬಗ್ಗೆ ಸಣ್ಣದೊಂದು ಚರ್ಚೆ ಆಗಿದ್ದು ಬಿಟ್ಟರೆ, ಯಾವುದೇ ಬಿಲ್‌ ಬಗ್ಗೆ ಚರ್ಚೆಯೇ ಆಗಲಿಲ್ಲ. ಇನ್ನೂ ನಾನು ಸದನದಲ್ಲಿ ಇದ್ದು ಏನು ಪ್ರಯೋಜನ? ಹುದ್ದೆಗೆ ಘನತೆ, ಗೌರವ ಇಲ್ಲದಿದ್ದ ಮೇಲೆ ಅಲ್ಲಿ ಇರಬಾರದು‌ ಎಂದು ತೀರ್ಮಾನಕ್ಕೆ‌ ಬಂದಿದ್ದೇನೆ ಎಂದು ತಿಳಿಸಿದ್ದರು.

ಆದರೆ, ಸಂಜೆ ವೇಳೆ ಮನಸ್ಸಿಗೆ ಬೇಸರವಾಗಿರುವುದೇನೋ ನಿಜ. ಆದರೆ, ರಾಜೀನಾಮೆ ಕೊಡಬೇಡಿ ಎಂದು ಸ್ನೇಹಿತರು, ಹಿತೈಷಿಗಳು ಹೇಳುತ್ತಿದ್ದಾರೆ. ನಾನು ರಾಜೀನಾಮೆ ಕೊಡುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳುತ್ತಲೇ ಕೆಲ ಕ್ಷಣ ಭಾವುಕರಾದರು.

Share this article