ಭಗತ್‍ಸಿಂಗ್-ಸುಖದೇವ್-ರಾಜ್‍ಗುರು 94ನೇ ಹುತಾತ್ಮದಿನಾಚರಣೆಯಲ್ಲಿ ವಿ.ನಾಗಮ್ಮಾಳ್ ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬ್ರಿಟಿಷರಿಂದ ಬಂದ ಸ್ವಾತಂತ್ರ್ಯವು ನಮ್ಮ ದೇಶದ ಉಳ್ಳವರು ಮತ್ತು ಬಂಡವಾಳಿಗರ ಪಾಲಾಗಿದೆ. ರೈತರು, ಕಾರ್ಮಿಕರು, ಶ್ರೀಸಾಮಾನ್ಯರು ಇನ್ನೂ ಸಮಸ್ಯೆಗಳನ್ನು ಅನುಭವಿಸುತ್ತಲೇ ಇದ್ದಾರೆ. ಈ ಎಲ್ಲಾ ಸಮಸ್ಯೆಗಳ ಸಂಪೂರ್ಣ ನಿರ್ಮೂಲನೆಗಾಗಿ ಇಂದಿನ ಯುವಜನತೆ ಹೋರಾಡಬೇಕು. ಹಿರಿಯರು, ಪೋಷಕರು ನಮ್ಮ ಮುಂದಿನ ಪೀಳಿಗೆಯನ್ನು ರಕ್ಷಿಸಲು ಅವರಲ್ಲಿ ಉನ್ನತ ನೀತಿ ಮತ್ತು ಚಾರಿತ್ಯವನ್ನು ಬೆಳೆಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬೇಕು. ಇಲ್ಲದೇ ಹೋದರೆ ನಮ್ಮ ಸಮಾಜದ ಕೊಳೆತವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.
ಜಿಲ್ಲಾಧಿಕಾರಿ ಕಚೇರಿ ಸಮೀಪದ ಭಗತ್ ಸಿಂಗ್ ಉದ್ಯಾನವನದ ಬಳಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಐಕೆಕೆಎಂಎಸ್ ರಾಜ್ಯ ಕಾರ್ಯದರ್ಶಿ ಎಂ.ಶಶಿಧರ್, ಕೇವಲ 23ನೇ ವಯಸ್ಸಿಗೆ ಹುತಾತ್ಮರಾದ ಭಗತ್ ಸಿಂಗ್ ವೈಚಾರಿಕವಾಗಿ ಬಹಳ ಸ್ಪಷ್ಟವಾಗಿದ್ದರು. ಕೇವಲ ತಮ್ಮ 13ನೇ ವಯಸ್ಸಿನಲ್ಲಿ ಹೋರಾಟಕ್ಕೆ ಕಾಲಿಟ್ಟ ಅವರು ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಕ್ರಾಂತಿಕಾರಿ ಹೋರಾಟಕ್ಕೆ ಕರೆ ನೀಡಿದ್ದರೆಂದರು.ಭಗತ್ ಸಿಂಗರ ಹೋರಾಟದ ತೀವ್ರತೆಗೆ ದಿಗಿಲುಗೊಂಡ ಬ್ರಿಟೀಷ್ ಸರ್ಕಾರ ಅವರನ್ನು ತರಾತುರಿಯಲ್ಲಿ ನೇಣಿಗೇರಿಸಿ ಅವರ ಶವವನ್ನೂ ಕೂಡ ಸಂಬಂಧಿಕರಿಗೆ ಒಪ್ಪಿಸದೆ ರಾತ್ರೋರಾತ್ರಿ ಅಂತ್ಯಕ್ರಿಯೆ ಮಾಡಿ ಮುಗಿಸಿದರು. ಆದರೆ ಸ್ವತಃ ಭಗತ್ ಸಿಂಗ್ ನುಡಿದ ಆಳ್ವಿಕರು ವ್ಯಕ್ತಿಗಳನ್ನು ಕೊಲ್ಲಬಹುದೇ ಹೊರತು ವಿಚಾರಗಳನ್ನಲ್ಲ ಎಂಬ ಮಾತು ಇಂದಿಗೂ ಸತ್ಯವಾಗಿದೆ ಎಂದರು.
ಎಐಯುಟಿಯುಸಿ ಕಾರ್ಮಿಕ ಸಂಘಟನೆ ಮುಖಂಡ ರವಿಕುಮಾರ್, ಎಐಡಿವೈಓ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಮುಖಂಡರಾದ ವಿನಯ್, ಅಭಿಷೇಕ್, ಎಐಎಂಎಸ್‍ಎಸ್‍ನ ಸುಜಾತ, ಕುಮುದಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಆನಂತರ ರಂಗಯ್ಯನ ಬಾಗಿಲು ಬಳಿಯಿರುವ ಎಐಡಿವೈಓ ಜಿಲ್ಲಾ ಕಚೇರಿಯಲ್ಲಿ ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಸಿನಿಮಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.